200ಕ್ಕೂ ಅಧಿಕ ಸ್ವತ್ತುಗಳಿಗೆ ನಕಲಿ ‘ಎ’ ಖಾತೆ ಸೃಷ್ಟಿ: ಓರ್ವ ಅಧಿಕಾರಿ ಬಂಧನ

| Published : Mar 06 2024, 02:20 AM IST / Updated: Mar 06 2024, 01:14 PM IST

ಸಾರಾಂಶ

ನಕಲಿ ದಾಖಲೆ ಸೃಷ್ಟಿಸಿ 200ಕ್ಕೂ ಅಧಿಕ ಸ್ವತ್ತುಗಳಿಗೆ ‘ಎ’ ಖಾತಾ ಮಾಡುವ ಮೂಲಕ ಬಿಬಿಎಂಪಿಗೆ ಅಭಿವೃದ್ಧಿ ಶುಲ್ಕದ ರೂಪದಲ್ಲಿ ಬರಬೇಕಿದ್ದ ಕೋಟ್ಯಂತರ ರು. ವಂಚಿಸಿ, ಭ್ರಷ್ಟಾಚಾರ ನಡೆಸಿರುವ ಆರೋಪದಡಿ ಕೆಂಗೇರಿ ವಿಭಾಗದ ಕಂದಾಯ ಅಧಿಕಾರಿಯನ್ನು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಕಲಿ ದಾಖಲೆ ಸೃಷ್ಟಿಸಿ 200ಕ್ಕೂ ಅಧಿಕ ಸ್ವತ್ತುಗಳಿಗೆ ‘ಎ’ ಖಾತಾ ಮಾಡುವ ಮೂಲಕ ಬಿಬಿಎಂಪಿಗೆ ಅಭಿವೃದ್ಧಿ ಶುಲ್ಕದ ರೂಪದಲ್ಲಿ ಬರಬೇಕಿದ್ದ ಕೋಟ್ಯಂತರ ರು. ವಂಚಿಸಿ, ಭ್ರಷ್ಟಾಚಾರ ನಡೆಸಿರುವ ಆರೋಪದಡಿ ಕೆಂಗೇರಿ ವಿಭಾಗದ ಕಂದಾಯ ಅಧಿಕಾರಿಯನ್ನು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಿಬಿಎಂಪಿ ರಾಜರಾಜೇಶ್ವರಿನಗರ ವಲಯ ಜಂಟಿ ಆಯುಕ್ತ ವಿ.ಅಜಯ್‌ ನೀಡಿದ ದೂರಿನ ಮೇರೆಗೆ ಇಬ್ಬರು ಕಂದಾಯ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಈ ಪೈಕಿ ಆರೋಪಿ ಕೆಂಗೇರಿ ವಿಭಾಗದ ಕಂದಾಯ ಅಧಿಕಾರಿ ಬಸವರಾಜ ಮಗ್ಗಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಮತ್ತೊಬ್ಬ ಆರೋಪಿ ಸಹಾಯಕ ಕಂದಾಯ ಅಧಿಕಾರಿ ದೇವರಾಜ್‌ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜರಾಜೇಶ್ವರಿನಗರ ವಲಯ ಜಂಟಿ ಆಯುಕ್ತ ವಿ.ಅಜಯ್‌ ಅವರು ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯ ಎಲ್ಲ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಗಳಲ್ಲಿ ‘ಎ’ ಮತ್ತು ‘ಬಿ’ ಖಾತಾಗಳಿಗೆ ಸಂಬಂಧಿಸಿದ ಕಡತಗಳನ್ನು ಸ್ಕ್ಯಾನಿಂಗ್‌ ಮಾಡಿ ಅಪ್‌ಲೋಡ್‌ ಮಾಡಿರುವ ಕುರಿತು ಪರಿಶೀಲನೆ ಮಾಡುವಾಗ, ಕೆಂಗೇರಿ ಉಪವಿಭಾಗಕ್ಕೆ ಸಂಬಂಧಿಸಿದಂತೆ ಸಹಾಯಕ ಕಂದಾಯ ಅಧಿಕಾರಿ ಹೊಸದಾಗಿ ಒಂದು ‘ಎ’ ಖಾತಾಗೆ ಸಂಬಂಧಿಸಿದ ಕಡತವನ್ನು ಸ್ಕ್ಯಾನ್‌ ಮಾಡಿ ಅಪ್‌ಲೋಡ್‌ ಮಾಡಿರುವುದು ಕಂಡು ಬಂದಿದೆ. ಈ ಸಂಬಂಧ ಪರಿಶೀಲಿಸಿ ವರದಿ ನೀಡುವಂತೆ ರಾಜರಾಜೇಶ್ವರಿ ನಗರದ ನಗರ ವಲಯ ಉಪ ಆಯುಕ್ತರಿಗೆ ಸೂಚಿಸಿದ್ದರು.

ಈ ಸೂಚನೆ ಮೇರೆಗೆ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ವರದಿ ನೀಡಲು ಮೂವರು ಅಧಿಕಾರಿಗಳ ಒಂದು ತಂಡ ರಚಿಸಲಾಗಿತ್ತು. ಈ ತಂಡ ದಾಖಲೆಗಳನ್ನು ಪರಿಶೀಲಿಸಿ, ಆರೋಪಿಗಳಾದ ಬಸವರಾಜ ಮಗ್ಗಿ ಮತ್ತು ದೇವರಾಜ್‌ ಅವರನ್ನು ವಿಚಾರಣೆ ಮಾಡಿತ್ತು. ಈ ವೇಳೆ ನಕಲಿ ದಾಖಲೆ ಸೃಷ್ಟಿಸಿ, ನಕಲಿ ಸಹಿ ಮಾಡಿ 200ಕ್ಕೂ ಅಧಿಕ ಸ್ವತ್ತುಗಳಿಗೆ ‘ಎ’ ಖಾತಾ ಮಾಡಿ, ಬಿಬಿಎಂಪಿಗೆ ಅಭಿವೃದ್ಧಿ ಶುಲ್ಕದ ರೂಪದಲ್ಲಿ ಬರಬೇಕಿದ್ದ ಕೋಟ್ಯಂತರ ರು. ಆರ್ಥಿಕ ನಷ್ಟವುಂಟು ಮಾಡಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಪಾಲಿಕೆ ರಾಜರಾಜೇಶ್ವರಿ ನಗರ ವಲಯ ಜಂಟಿ ಆಯುಕ್ತ ವಿ.ಅಜಯ್‌ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- - -