ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಕ್ರಿಕೆಟ್ ಬುಕ್ಕಿ ಎನ್ನಲಾದ ಯುವಕನೊಬ್ಬನನ್ನು ಅಪಹರಿಸಿ ಹಲ್ಲೆಗೈದು ಮೂರು ಲಕ್ಷ ರು. ಹಣಕ್ಕೆ ಬೇಡಿಕೆ ಇರಿಸಿದ್ದ ರೌಡಿಶೀಟರ್ ಸೇರಿ ನಾಲ್ವರ ಗ್ಯಾಂಗನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ರೌಡಿಶೀಟರ್ ಸಾಗರ್ ಅಲಿಯಾಸ್ ಇಟ್ಟುಮಡು ಸಾಗರ್(35), ಆತನ ಸಹಚರರಾದ ಪ್ರೇಮ್ ಕುಮಾರ್ ಅಲಿಯಾಸ್ ಕಪ್ಪೆ(32), ರವಿತೇಜ ಅಲಿಯಾಸ್ ರವಿ (31) ಹಾಗೂ ಭೂಷಣ್ (30) ಬಂಧಿತರು.
ಆರೋಪಿಗಳು ಫೆ. 26ರ ಮಧ್ಯಾಹ್ನ ಹೊಸಕೆರೆಹಳ್ಳಿ ಕ್ರಾಸ್ ಬಳಿಯ ಬೇಕರಿವೊಂದರ ಬಳಿ ನಿಂತಿದ್ದ ಸಂತೋಷ್ (22) ಎಂಬಾತನನ್ನು ಅಪಹರಿಸಿ ಹಲ್ಲೆ ನಡೆಸಿ ಮೂರು ಲಕ್ಷ ರು. ಹಣಕ್ಕೆ ಬೇಡಿಕೆ ಇರಿಸಿದ್ದರು.
ಆರೋಪಿಗಳಿಂದ ತಪ್ಪಿಸಿಕೊಂಡು ಬಂದಿದ್ದ ಸಂತೋಷ್, ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಈ ಸಂಬಂಧ ಮಾಹಿತಿ ಸಂಗ್ರಹಿಸಿ ಸಿಸಿಬಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ರೌಡಿ ಸಾಗರ್ ಹಾಗೂ ಆತನ ಸಹಚರರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ವಿವರ: ನಾಗಮಂಗಲ ಮೂಲದ ಸಂತೋಷ್ ನಗರದಲ್ಲಿ ಪದವಿ ವ್ಯಾಸಂಗ ಮಾಡಿ ಈಗ ಊರಿನಲ್ಲಿ ನೆಲೆಸಿದ್ದ. ಫೆ. 26ರಂದು ಸ್ನೇಹಿತನ ತಂದೆಯ ತಿಥಿ ಕಾರ್ಯಕ್ಕೆ ಹೊಸಕೆರೆಹಳ್ಳಿಗೆ ಬಂದಿದ್ದ.
ಈ ವೇಳೆ ಬೇಕರಿವೊಂದರ ಬಳಿ ನಿಂತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿಗಳು, ಏಕಾಏಕಿ ಹಲ್ಲೆ ನಡೆಸಿ ಅಪಹರಣ ಮಾಡಿದ್ದರು. ಬಳಿ ಇಟ್ಟುಮಡು, ರಾಜರಾಜೇಶ್ವರಿನಗರ ಸೇರಿದಂತೆ ವಿವಿಧೆಡೆ ಸುತ್ತಾಡಿಸಿ, ಕನಕಪುರದ ಹಳ್ಳಿವೊಂದಕ್ಕೆ ಕರೆದೊಯ್ದು ರೂಮ್‌ನಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದ್ದರು.
₹3 ಲಕ್ಷಕ್ಕೆ ಬೇಡಿಕೆ: ಈ ವೇಳೆ ಫೋನ್ ಪೇ ಮುಖಾಂತರ ಸಂತೋಷ್‌ನ ಖಾತೆಯಿಂದ 11,500 ರು. ಹಣವನ್ನು ಬೇರೆ ಖಾತೆಗೆ ವರ್ಗಾಯಿಸಿದ್ದರು. ಬಳಿಕ ಮೂರು ಲಕ್ಷ ರು. ಕೊಡುವಂತೆ ಬೇಡಿಕೆ ಇರಿಸಿ ಬೆದರಿಕೆ ಹಾಕಿದ್ದಾರೆ.
ಈ ವೇಳೆ ಸಂತೋಷ್ ತನ್ನ ಸ್ನೇಹಿತ ಯಶವಂತನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಈ ವೇಳೆ ಆತ ಸಂತೋಷ್‌ನನ್ನು ಬಿಟ್ಟು ಬಿಡುವಂತೆ ಕೇಳಿಕೊಂಡರೂ ಆರೋಪಿಗಳು ಮೂರು ಲಕ್ಷ ರು. ಕೊಟ್ಟರಷ್ಟೆ ಬಿಡುವುದು ಎಂದು ಹೇಳಿದ್ದಾರೆ.
ರೌಡಿಗಳಿಂದ ಎಸ್ಕೇಪ್: ಅಷ್ಟರಲ್ಲಿ ರಾತ್ರಿ ಆಗಿದ್ದ ಹಿನ್ನೆಲೆಯಲ್ಲಿ ಸಂತೋಷ್, ರೌಡಿ ಗ್ಯಾಂಗ್‌ನಿಂದ ತಪ್ಪಿಸಿಕೊಂಡು ಬಂದು ಅಪರಿಚಿತರ ಮನೆಯೊಂದರಲ್ಲಿ ಆಶ್ರಯ ಪಡೆದಿದ್ದಾನೆ.
ಬೆಳಗ್ಗೆ ಎದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪೋಷಕರಿಗೆ ವಿಷಯ ತಿಳಿಸಿ, ಬಳಿಕ ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಈ ದೂರಿನ ಮೇರೆಗೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂತೋಷ್ ಕ್ರಿಕೆಟ್ ಬುಕ್ಕಿ?
ರೌಡಿಗಳಿಂದ ಅಪಹರಣಕ್ಕೆ ಒಳಗಾಗಿದ್ದ ಸಂತೋಷ್ ಕ್ರಿಕೆಟ್ ಬುಕ್ಕಿ ಎನ್ನಲಾಗಿದೆ. ಮಹಿಳಾ ಐಪಿಎಲ್ ಕ್ರಿಕೆಟ್ ಪಂದ್ಯಗಳಲ್ಲಿ ಆನ್‌ಲೈನ್ ಬೆಟ್ಟಿಂಗ್ ಆಡಿಸಿ ಸಾಕಷ್ಟು ಹಣ ಗಳಿಸಿದ್ದ. ಈ ವಿಚಾರ ರೌಡಿ ಶೀಟರ್ ಸಾಗರ್ ಗೊತ್ತಾಗಿ 3 ಲಕ್ಷ ರು. ಹಫ್ತಾ ಕೊಡುವಂತೆ ಸಂತೋಷ್‌ಗೆ ಕೇಳಿದ್ದ.
ಆದರೆ, ಸಂತೋಷ್ ಹಫ್ತಾ ನೀಡಲು ನಿರಾಕರಿಸಿದ್ದ. ಈ ವೇಳೆ ಸಾಗರ್ ಹಾಗೂ ಆತನ ಸಹಚರರು, ಸಂತೋಷ್‌ನನ್ನು ಅಪಹರಿಸಿ ಹಲ್ಲೆಗೈದು 3 ಲಕ್ಷ ರು.ಹಣಕ್ಕೆ ಬೇಡಿಕೆ ಇರಿಸಿದ್ದರು ಎನ್ನಲಾಗಿದೆ. ಈ ಸಂಬಂಧ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.