ಸಾರಾಂಶ
ಚಿಕ್ಕಮಗಳೂರು : ರಾಜ್ಯದಲ್ಲಿ ಗೋವಿನ ಮೇಲೆ ವಿಕೃತಿ ಮುಂದುವರಿದಿದೆ. ಚಿಕ್ಕಮಗಳೂರು ಜಿಲ್ಲೆಯ ಎಸ್ಟೇಟ್‌ವೊಂದರಲ್ಲಿ ಅಸ್ಸಾಂ ಮೂಲದ ಕಾರ್ಮಿಕರು ಮಾಂಸಕ್ಕಾಗಿ ಗಬ್ಬದ ಹಸುವನ್ನು ಕಡಿದು ಅಂಗಾಂಗಗಳನ್ನು ಮಣ್ಣಿನಲ್ಲಿ ಹೂಳಲು ಯತ್ನಿಸಿದ್ದಾರೆ. ಕೃತ್ಯ ಎಸಗಿದ ಎಲ್ಲ 6 ಕೂಲಿ ಕಾರ್ಮಿಕರನ್ನು ಗುರುವಾರ ಬಂಧಿಸಲಾಗಿದೆ.
ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿ ನಿಡುವಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರ್ಕಲ್ ಎಸ್ಟೇಟ್‌ನಲ್ಲಿ ಘಟನೆ ನಡೆದಿದೆ. ಬಂಧಿತರನ್ನು ಅಸ್ಸಾಂ ಮೂಲದ ಕೂಲಿ ಕಾರ್ಮಿಕರಾದ ಅಜೀರ್ ಆಲೀ, ಅಕ್ಬರ್, ನಜ್ಮುಲ್ ಹಕ್, ಇಜಾಹುಲ್, ಮೋಜೆರ್ ಅಲಿ, ಮಂಜುಲ್ ಹಕ್ ಎಂದು ಗುರುತಿಸಲಾಗಿದೆ. ಈ ವೇಳೆ ಸುಮಾರು 45 ಕೆ.ಜಿ. ಹಸುವಿನ ಮಾಂಸ ವಶಪಡಿಸಿಕೊಳ್ಳಲಾಗಿದೆ.
ಬುಧವಾರ ಮಧ್ಯಾಹ್ನ ಹಸುವನ್ನು ಹತ್ಯೆ ಮಾಡಿ ಮಾಂಸ ಮಾಡಲಾಗಿದ್ದು, ಮಾಂಸ ಬಾಳೆ ಎಲೆ ಮೇಲೆ ಇರಿಸಿರುವುದು ಕಂಡು ಬಂದಿದೆ. ಹಸುವಿನ ಅಂಗಾಂಗಗಳನ್ನು ಮಣ್ಣಿನ ಅಡಿ ಹಾಕಲು ಗುಂಡಿ ತೋಡಲಾಗಿತ್ತು,
ತೋಟದ ರೈಟರ್ ಅಭಿಲಾಶ್ ಕೊಟ್ಟ ಮಾಹಿತಿ ಮೇರೆಗೆ ಬಾಳೂರು ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ದಿಲೀಪ್ ಕುಮಾರ್ ಅವರು ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಲಂ 303(2) ಮತ್ತು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆ 2020ರ ಕಲಂ 12(1) ಅಡಿ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- ಮಾಂಸಕ್ಕಾಗಿ ಹಸುವನ್ನು ಕೊಂದಿದ್ದ 6 ಅಸ್ಸಾಮಿ ಕಾರ್ಮಿಕರು
- ಮಾಂಸ ತೆಗೆದುಕೊಂಡು ಹಸುವಿನ ಅಂಗಾಂಗ ಹೂಳಲೆತ್ನ
- ತೋಟದ ಇನ್ನೊಬ್ಬ ಕೆಲಸಗಾರನಿಂದ ಕೃತ್ಯದ ಬಗ್ಗೆ ಸುಳಿವು
- ಬಳಿಕ ಪೊಲೀಸರಿಂದ ಕಾರ್ಯಾಚರಣೆ । 6 ಕಾರ್ಮಿಕರ ಸೆರೆ
- 45 ಕೆ.ಜಿ. ಹಸುವಿನ ಮಾಂಸ ವಶ. ವಿವಿಧ ಕೇಸು ದಾಖಲು