ಸೈಬರ್ ಅಪರಾಧ ತಡೆ ಘಟಕ ಅಧಿಕೃತ ಸ್ಥಾಪನೆ

| Published : Apr 10 2025, 02:01 AM IST

ಸಾರಾಂಶ

ರಾಜ್ಯದಲ್ಲಿ ಸೈಬರ್ ಅಪರಾಧ ಪ್ರಕರಣಗಳ ತನಿಖೆ ಸಂಬಂಧ ರಾಜ್ಯ ಸರ್ಕಾರ ಬುಧವಾರ ಹೊಸದಾಗಿ ಸೈಬರ್ ಅಪರಾಧ ತಡೆ ಘಟಕವನ್ನು (ಸಿಸಿಪಿಯು) ಸ್ಥಾಪಿಸಿ ಆದೇಶ ಹೊರಡಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ಸೈಬರ್ ಅಪರಾಧ ಪ್ರಕರಣಗಳ ತನಿಖೆ ಸಂಬಂಧ ರಾಜ್ಯ ಸರ್ಕಾರ ಬುಧವಾರ ಹೊಸದಾಗಿ ಸೈಬರ್ ಅಪರಾಧ ತಡೆ ಘಟಕವನ್ನು (ಸಿಸಿಪಿಯು) ಸ್ಥಾಪಿಸಿ ಆದೇಶ ಹೊರಡಿಸಿದೆ.

ಆಧುನಿಕ ಯುಗದಲ್ಲಿ ತಂತ್ರಜ್ಞಾನದ ಅತಿಯಾದ ಬಳಕೆ ಹಾಗೂ ಅವಲಂಬನೆಯಿಂದ ಅತಿ ಹೆಚ್ಚು ಸೈಬರ್ ಅಪರಾಧ ಪ್ರಕರಣಗಳು ದಾಖಲಾಗುತ್ತಿದ್ದು, ಹಳೆಯ ವೃತ್ತಿಪರ ಅಪರಾಧಗಳಾದ ಡಕಾಯಿತಿ, ರಾಬರಿ ಹಾಗೂ ಇತರೆ ಭೌತಿಕ ಕಳ್ಳತನಗಳನ್ನು ಹಿಂದಿಕ್ಕಿ ಸೈಬ‌ರ್ ಅಪರಾಧಗಳು ವರದಿಯಾಗುತ್ತಿವೆ. ದೇಶದ ಮಹಾನಗರಗಳಲ್ಲಿ ದಾಖಲಾಗುವ ಅಪರಾಧ ಪ್ರಕರಣಗಳಲ್ಲಿ ಶೇ.20ರಷ್ಟು ಸೈಬರ್ ಪ್ರಕರಣಗಳಾಗಿದ್ದು, ರಾಜ್ಯದಲ್ಲಿ ಕಳೆದ 4 ವರ್ಷಗಳಲ್ಲಿ ಒಟ್ಟಾರೆಯಾಗಿ 52,000 ಸೈಬರ್ ಅಪರಾಧ ಪ್ರಕರಣಗಳು ವರದಿಯಾಗಿವೆ. ಕರ್ನಾಟಕವು ದಕ್ಷಿಣ ಭಾರತದ ಇತರೆ ರಾಜ್ಯಗಳಲ್ಲಿ ದಾಖಲಾಗುವ ಸೈಬರ್ ಅಪರಾಧಗಳ ಸಂಖ್ಯೆಯಲ್ಲಿ ಮಂಚೂಣಿಯಲ್ಲಿ ಇರುವುದರಿಂದ ರಾಜ್ಯದಲ್ಲಿ ಸೈಬರ್ ಅಪರಾಧಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಪ್ರತ್ಯೇಕ ಸೈಬರ್ ಅಪರಾಧ ತಡೆ ಘಟಕ (Cyber Crimes Prevention Unit) ಅನ್ನು ಸೃಜಿಸುವಂತೆ ಸರ್ಕಾರಕ್ಕೆ ಡಿಜಿಪಿ ಪ್ರಸ್ತಾಪನೆ ಸಲ್ಲಿಸಿದ್ದರು. ಈ ಪ್ರಸ್ತಾಪಕ್ಕೆ ಸರ್ಕಾರ ಸಮ್ಮತಿಸಿದೆ.

ಈ ಘಟಕದ ವ್ಯಾಪ್ತಿಗೆ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 43 ಸಿಇಎನ್ (ಸೈಬರ್, ಎಕನಾಮಿಕ್ಸ್ & ನಾರ್ಕೋಟಿಕ್ಸ್) ಪೊಲೀಸ್ ಠಾಣೆಗಳನ್ನು ಸೈಬರ್ ಅಪರಾಧ ಪೊಲೀಸ್ ಠಾಣೆಗಳೆಂದು ಮರುನಾಮಕರಣ ಮಾಡಿ ಒಳಪಡಿಸಲಾಗಿದೆ. ಅಲ್ಲದೆ ಸಿಐಡಿ ಸೈಬರ್ ಹಾಗೂ ಬೆಂಗಳೂರಿನ ಸೈಬರ್ ಠಾಣೆಗಳು ಸೇರಿ ಒಟ್ಟು 45 ಠಾಣೆಗಳ ಅಧೀನಕ್ಕೆ ಬರುತ್ತವೆ.

ಈ ಠಾಣೆಗಳು ಅಬಕಾರಿ ಕಾಯ್ದೆ, ಲಾಟರಿ ನಿಷೇಧ ಕಾಯ್ದೆ, ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆ (ಯುಎಪಿಎ) ಸೇರಿದಂತ ಇತರೆ ಕಾಯ್ದೆಗಳಲ್ಲಿ ತನಿಖೆ ನಡೆಸಬಹುದು ಎಂದಿದೆ. ಅಲ್ಲದೆ ಸೈಬರ್ ಕಮಾಂಡ್ ಘಟಕಕ್ಕೆ ನಾಲ್ವರು ಎಸ್ಪಿಗಳು ಸೇರಿದಂತೆ 193 ಅಧಿಕಾರಿ- ಸಿಬ್ಬಂದಿ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ಡಿಜಿ-ಐಜಿಪಿ ಅಧಿಕಾರಕ್ಕೆ ಕೊಕ್ಕೆ:

ಡಿಜಿ-ಐಜಿಪಿ ಅ‍ವರ ಅಧಿಕಾರ ವ್ಯಾಪ್ತಿಯಿಂದ ಸೈಬರ್ ಅಪರಾಧ ತಡೆ ಘಟಕವನ್ನು ಹೊರಗಿಟ್ಟಿರುವ ಸರ್ಕಾರದ ನಿರ್ಧಾರ ಇಲಾಖೆಯಲ್ಲಿ ಚರ್ಚೆಗೆ ಕಾರಣವಾಗಿದ್ದು, ಆದೇಶ ತಿದ್ದುಪಡಿಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಈ ಗೊಂದಲ ಹಿನ್ನೆಲೆಯಲ್ಲಿ ಸೈಬರ್ ಅಪರಾಧ ಘಟಕ ಸ್ಥಾಪನೆ ವಿಚಾರವಾಗಿ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳ ನಡುವೆ ಮುಸುಕಿನ ಗುದ್ದಾಟ ಕೂಡ ಬಯಲಾಗಿದೆ ಎಂದು ತಿಳಿದು ಬಂದಿದೆ.

ರಾಜ್ಯ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಸೈಬರ್ ಘಟಕದ ಕಮಾಂಡ್‌ ವರದಿ ಮಾಡಿಕೊಳ್ಳುಂತೆ ಆದೇಶದಲ್ಲಿ ಹೇಳಲಾಗಿದೆ. ಆದರೆ ಪೊಲೀಸ್ ಎಲ್ಲ ಪಡೆಗಳ ಮುಖ್ಯಸ್ಥರಾಗಿರುವ ಡಿಜಿ-ಐಜಿ ಅವರಿಗೆ ಸೈಬರ್ ಘಟಕದ ಕಮಾಂಡ್‌ ವರದಿ ಮಾಡಿಕೊಳ್ಳದೆ ಎಸಿಎಸ್‌ ಅವರಿಗೆ ವರದಿ ಮಾಡಿಕೊಳ್ಳುವಂತೆ ಆದೇಶಿಸಿರುವುದು ಆಕ್ಷೇಪಕ್ಕೆ ಕಾರಣವಾಗಿದೆ. ಇದೂ ಎರಡು ಪಡೆಗಳ ನಡುವೆ ಆಂತರಿಕ ಸಂಘರ್ಷಕ್ಕೆ ಕಾರಣವಾಗಲಿದ್ದು, ಪೊಲೀಸ್ ಇಲಾಖೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಮಾತುಗಳು ಕೇಳಿ ಬಂದಿವೆ.

ಇನ್ನು ಸಿಐಡಿಯಲ್ಲಿ ಸೈಬರ್ ವಿಭಾಗವನ್ನು ಸಹ ಸೈಬರ್‌ ಕಮಾಂಡ್ ವ್ಯಾಪ್ತಿಗೊಳಪಡಿಸಿರುವುದು ಸಹ ತಾಂತ್ರಿಕ ಸಮಸ್ಯೆ ಕಾರಣವಾಗಿದೆ. ಹೀಗಾಗಿ ಈ ಆದೇಶವು ಕೆಲವೇ ದಿನಗಳಲ್ಲಿ ಮರು ತಿದ್ದುಪಡಿಯಾಗಲಿದ್ದು, ಡಿಜಿ-ಐಜಿಪಿ ಅವರ ಅಧಿಕಾರ ವ್ಯಾಪ್ತಿಗೆ ಸೈಬರ್ ಘಟಕ ಒಳಪಡಲಿದೆ ಎಂದು ಮೂಲಗಳು ತಿಳಿಸಿವೆ.

ಇಲ್ಲೂ ಇದೆ ಸಮಸ್ಯೆ:

ಸೈಬರ್ ಅಪರಾಧ ಪ್ರಕರಣದಲ್ಲಿ ಆರೋಪಿಗಳ ಬಂಧನ ವೇಳೆ ಸ್ಥಳೀಯ ಪೊಲೀಸರು ಹಾಗೂ ಆ ಪ್ರಕರಣಗಳ ವೈಜ್ಞಾನಿಕ ಪುರಾವೆಗಳ ವಿಶ್ಲೇಷಣೆಗೆ ಎಫ್‌ಎಸ್‌ಎಲ್‌ ನೆರವು ಪಡೆಯಬೇಕಿದೆ. ಆದರೆ ಈ ಎರಡು ಪಡೆಗಳು ಡಿಜಿ-ಐಜಿ ವ್ಯಾಪ್ತಿಗೆ ಬರಲಿವೆ. ಒಂದು ವೇಳೆ ಆ ಇಲಾಖೆಗಳು ಅಸಹಕಾರ ತೋರಿದರೆ ಸೈಬರ್ ಘಟಕ ಕಾರ್ಯನಿರ್ವಹಣೆ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ. ಈ ಸಂಘರ್ಷ ತಪ್ಪಿಸಲು ಪೊಲೀಸ್ ಇಲಾಖೆಗೆ ಒಬ್ಬರೇ ಮುಖ್ಯಸ್ಥರ ಅಗತ್ಯವಿದ್ದು, ಎರಡು ಅಧಿಕಾರ ಕೇಂದ್ರಗಳು ಸ್ಥಾಪನೆಯಾದರೆ ತೊಂದರೆ ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.