ನಟ ದರ್ಶನ್‌ಗೆ ಬಳ್ಳಾರಿ ಜೈಲಿನಲ್ಲಿ ಫೋನ್ ಸೌಲಭ್ಯ : ಪತ್ನಿ ವಿಜಯಲಕ್ಷ್ಮಿ ಜೊತೆ ಮಾತುಕತೆ

| Published : Sep 05 2024, 02:17 AM IST / Updated: Sep 05 2024, 04:14 AM IST

darshan jail

ಸಾರಾಂಶ

ಕೊಲೆ ಆರೋಪದಡಿ ಬಂಧಿತರಾಗಿರುವ ನಟ ದರ್ಶನ್‌ಗೆ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಫೋನ್ ಸೌಲಭ್ಯ ನೀಡಲಾಗಿದೆ. ಜೈಲಿನ ನಿಯಮದಂತೆ ಪತ್ನಿ ವಿಜಯಲಕ್ಷ್ಮಿ ಅವರೊಂದಿಗೆ ದರ್ಶನ್ ಮಾತನಾಡಿದ್ದಾರೆ.

 ಬಳ್ಳಾರಿ :  ಶೌಚಕ್ಕೆ ಸರ್ಜಿಕಲ್ ಚೇರ್, ಸಮಯ ಕಳೆಯಲು ಟಿವಿ ಕೇಳಿದ್ದ ನಟ ದರ್ಶನ್ ಇದೀಗ ಕುಟುಂಬ ಸದಸ್ಯರ ಜೊತೆ ಮಾತಾಡಲು ಫೋನ್ ಕರೆ ಸೌಲಭ್ಯದ ಬೇಡಿಕೆ ಇಟ್ಟಿದ್ದು, ಜೈಲಿನ ನಿಯಮದಂತೆ ಬುಧವಾರ ಆ ಬೇಡಿಕೆ ಈಡೇರಿಸಲಾಗಿದೆ.

ರೇಣುಕಾಸ್ವಾಮಿ ಕೊಲೆ ಆರೋಪದಡಿ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿರುವ ದರ್ಶನ್, ಕುಟುಂಬ ಸದಸ್ಯರ ಜೊತೆ ಮಾತಾಡಲು ಫೋನ್ ಸೌಕರ್ಯ ನೀಡಿ ಎಂದು ಮನವಿ ಮಾಡಿಕೊಂಡಿದ್ದರು. ಅವರ ಬೇಡಿಕೆಯನ್ನು ಪರಿಶೀಲಿಸಿ ನಿಯಮದಂತೆ ಬುಧವಾರ ಫೋನ್ ಸೌಲಭ್ಯ ನೀಡಿದ್ದು, ಸುಮಾರು 10 ನಿಮಿಷ ಪತ್ನಿ ವಿಜಯಲಕ್ಷ್ಮಿ ಜೊತೆ ಮಾತನಾಡಿದರು ಎನ್ನಲಾಗಿದೆ.

ಜೈಲಿನ ನಿಯಮದಂತೆ ವಿಚಾರಣಾಧೀನ ಕೈದಿಗಳಿಗೆ ವಾರದಲ್ಲಿ ಎರಡು ಬಾರಿ ತಲಾ 10 ನಿಮಿಷದಂತೆ ಒಟ್ಟು 20 ನಿಮಿಷ ಮಾತನಾಡಲು ಅವಕಾಶ ಇದೆ. ಯಾರ ಜೊತೆ ಮಾತನಾಡಬೇಕು ಎಂಬಿತ್ಯಾದಿ ಮಾಹಿತಿಯೊಂದಿಗೆ ಮೂರು ಮೊಬೈಲ್ ಸಂಖ್ಯೆಗಳನ್ನು ನೀಡಬೇಕಿದ್ದು, ಪತ್ನಿ ಹಾಗೂ ವಕೀಲರ ಮೊಬೈಲ್ ಸಂಖ್ಯೆಯನ್ನು ದರ್ಶನ್ ನೀಡಿದ್ದಾರೆ. ಮೊದಲ ಕರೆಯನ್ನು ಪತ್ನಿಗೆ ಮಾಡಿದ್ದಾರೆ.

ಜಾಮೀನು ಸಂಬಂಧ ಚರ್ಚಿಸಲು ದರ್ಶನ್ ಭೇಟಿಗೆ ಗುರುವಾರ ಪತ್ನಿ ವಿಜಯಲಕ್ಷ್ಮಿ ಅವರು ವಕೀಲರ ಜೊತೆ ಬಳ್ಳಾರಿ ಜೈಲಿಗೆ ಭೇಟಿ ನೀಡುವ ಸಾಧ್ಯತೆಯಿದೆ.ಕೊಲೆ ಆರೋಪದಲ್ಲಿ ಬಳ್ಳಾರಿ ಜೈಲಲ್ಲಿರುವ ದರ್ಶನ್ ಈ ಬಾರಿ ಗಣೇಶ ಹಬ್ಬವನ್ನು ಕುಟುಂಬ ಸದಸ್ಯರ ಜೊತೆ ಮಾಡುತ್ತಾರೋ ಅಥವಾ ಬಳ್ಳಾರಿ ಜೈಲಿನಲ್ಲೇ ಹಬ್ಬ ಆಚರಿಸುವ ಅನಿವಾರ್ಯತೆ ಸೃಷ್ಟಿಯಾಗಲಿದೆಯೋ ಎನ್ನುವ ಕುತೂಹಲವಿದೆ. ಚಾರ್ಜ್‌ಶೀಟ್ ಸಲ್ಲಿಕೆ ಹಿನ್ನೆಲೆಯಲ್ಲಿ ಜಾಮೀನು ಸಿಗುವ ನಿರೀಕ್ಷೆ ಹೆಚ್ಚಿದೆ ಎನ್ನಲಾಗಿದೆ. ಒಂದು ವೇಳೆ ಜಾಮೀನು ವಿಳಂಬವಾದರೆ ಬಳ್ಳಾರಿ ಜೈಲಿನಲ್ಲಿಯೇ ಹಬ್ಬ ಅನಿವಾರ್ಯವಾಗಲಿದೆ.