ಯುವಕನ ಜತೆ ವಿವಾಹಿತೆಯ ಲವ್‌, ಸೆಕ್ಸ್ : ಪ್ರೇಮಿ ಜತೆ ಸೇರಿ ತಾಯಿ ಉಸಿರುಗಟ್ಟಿಸಿ ಕೊಂದ ಪುತ್ರಿ

| Published : Sep 14 2024, 01:58 AM IST / Updated: Sep 14 2024, 06:25 AM IST

murder crime news rajasthan

ಸಾರಾಂಶ

ತಮ್ಮ ಅಕ್ರಮ ಸಂಬಂಧಕ್ಕೆ ಅಡ್ಡಿಯಾದಳು ಎಂಬ ಕಾರಣಕ್ಕೆ ತಾಯಿಯನ್ನು ಉಸಿರುಗಟ್ಟಿಸಿ ಕೊಂದು ಬಳಿಕ ಅಸಹಜ ಸಾವು ಎಂದು ಬಿಂಬಿಸಿದ್ದ ಮೃತಳ ಪುತ್ರಿ ಮತ್ತು ಆಕೆಯ ಪ್ರಿಯಕರ ಬೊಮ್ಮನಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

 ಬೆಂಗಳೂರು : ತಮ್ಮ ಅಕ್ರಮ ಸಂಬಂಧಕ್ಕೆ ಅಡ್ಡಿಯಾದಳು ಎಂಬ ಕಾರಣಕ್ಕೆ ತಾಯಿಯನ್ನು ಉಸಿರುಗಟ್ಟಿಸಿ ಕೊಂದು ಬಳಿಕ ಅಸಹಜ ಸಾವು ಎಂದು ಬಿಂಬಿಸಿದ್ದ ಮೃತಳ ಪುತ್ರಿ ಮತ್ತು ಆಕೆಯ ಪ್ರಿಯಕರ ಬೊಮ್ಮನಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಹೊಂಗಸಂದ್ರದ ನಿವಾಸಿಗಳಾದ ಪವಿತ್ರಾ (28) ಹಾಗೂ ಆಕೆಯ ಪ್ರಿಯಕರ ಲವನೀಶ್ (20) ಬಂಧಿತರಾಗಿದ್ದು, ಮನೆಯಲ್ಲಿ ಬುಧವಾರ ಮಧ್ಯಾಹ್ನ ನಿದ್ರೆ ಮಾಡುತ್ತಿದ್ದ ಪವಿತ್ರಾಳ ತಾಯಿ ಜಯಲಕ್ಷ್ಮಿ (48) ಅವರನ್ನು ಉಸಿರುಗಟ್ಟಿಸಿ ಆರೋಪಿಗಳು ಕೊಂದಿದ್ದರು. ಬಳಿಕ ಅಸಹಜ ಸಾವು ಎಂದು ಹೇಳಿ ಅಂತ್ಯಕ್ರಿಯೆ ನಡೆಸಲು ಪವಿತ್ರಾ ಯತ್ನಿಸಿದ್ದಳು. ಈ ಸಾವಿನ ಬಗ್ಗೆ ತಿಳಿದು ಘಟನಾ ಸ್ಥಳಕ್ಕೆ ತೆರಳಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿ ಪೊಲೀಸರು ಮರಣೋತ್ತರ ಪರೀಕ್ಷೆಗೊಳಪಡಿಸಿದ್ದರು. ಆಗ ಮರಣೋತ್ತರ ವರದಿಯಲ್ಲಿ ಜಯಲಕ್ಷ್ಮಿ ಅವರ ಕೊಲೆ ರಹಸ್ಯ ಬಯಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಯುವಕನ ಜತೆ ವಿವಾಹಿತೆಯ ಲವ್‌, ಸೆಕ್ಸ್:  ಹಲವು ವರ್ಷಗಳಿಂದ ಹೊಂಗಸಂದ್ರದಲ್ಲಿ ಪವಿತ್ರಾ ಪೋಷಕರು ವಾಸವಾಗಿದ್ದಾರೆ. ನಾಲ್ಕು ಅಂತಸ್ತಿನ ಮನೆ ಕಟ್ಟಡದಲ್ಲಿ ಕೆಳಹಂತದಲ್ಲಿ ಪವಿತ್ರಾ ಪೋಷಕರು ಕುಟುಂಬ ವಾಸವಿದ್ದರು. ಇನ್ನುಳಿದ ಮನೆಗಳನ್ನು ಅವರು ಬಾಡಿಗೆಗೆ ಕೊಟ್ಟಿದ್ದರು. ಅದೇ ಕಟ್ಟಡದಲ್ಲಿ ದಿನಸಿ ಅಂಗಡಿಯನ್ನು ಆಕೆಯ ತಾಯಿ ಜಯಲಕ್ಷ್ಮಿ ನಡೆಸುತ್ತಿದ್ದು, ಮಗ್ಗದಲ್ಲಿ ಆಕೆಯ ತಂದೆ ಮುನಿರಾಜು ಕೆಲಸ ಮಾಡುತ್ತಿದ್ದಾರೆ.

ಹತ್ತು ವರ್ಷಗಳ ಹಿಂದೆ ತಮ್ಮ ಸೋದರ ಸುರೇಶ್‌ ಜತೆ ಮಗಳನ್ನು ಜಯಲಕ್ಷ್ಮಿ ವಿವಾಹ ಮಾಡಿದ್ದರು. ಪವಿತ್ರಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ತಮ್ಮ ಅಕ್ಕನ ದಿನಸಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ಸುರೇಶ್ ಮನೆ ಅಳಿಯನಾಗಿ ಜೀವನ ಸಾಗಿಸುತ್ತಿದ್ದ. ಇತ್ತೀಚೆಗೆ ಕೌಟುಂಬಿಕ ಕಾರಣಗಳಿಗೆ ಪವಿತ್ರಾ ದಂಪತಿ ಮಧ್ಯೆ ಮನಸ್ತಾಪವಾಗಿತ್ತು ಎಂದು ತಿಳಿದು ಬಂದಿದೆ.

ಇನ್ನು ಮೂರು ವರ್ಷಗಳಿಂದ ಜಯಲಕ್ಷ್ಮಿ ಅವರ ಮನೆಯಲ್ಲಿ ಲವನೀಶ್ ಕುಟುಂಬ ಬಾಡಿಗೆಗೆ ಇದ್ದರು. ಒಂದೂವರೆ ವರ್ಷದ ಹಿಂದೆ ಅನಾರೋಗ್ಯದಿಂದ ಆತನ ತಾಯಿ ಮೃತಪಟ್ಟಿದ್ದರು. ಆಗ ದುಃಖದಲ್ಲಿದ್ದ ಲವನೀಶ್‌ಗೆ ಪವಿತ್ರಾ ಸಾಂತ್ವನ ಹೇಳಿದ್ದಳು. ಆ ಸಂದರ್ಭದಲ್ಲಿ ಇಬ್ಬರ ಮಧ್ಯೆ ಸ್ನೇಹ ಚಿಗುರಿ ಆತ್ಮೀಯತೆ ಮೂಡಿದೆ. ಇನ್ನು ಓದು ಅರ್ಧಕ್ಕೆ ಬಿಟ್ಟಿದ್ದ ಲವನೀಶ್‌, ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಹೀಗಿರುವಾಗ ಪವಿತ್ರಾ ಜತೆ ಆತನಿಗೆ ಅಕ್ರಮ ಸಂಬಂಧ ಬೆಳೆದಿತ್ತು ಎಂದು ಪೊಲೀಸರು ಹೇಳಿದ್ದಾರೆ.

 ಶೌಚಾಲಯದಲ್ಲಿ ಸಿಕ್ಕಿಬಿದ್ದ ಜೋಡಿ

ಅಕ್ರಮ ಸಂಬಂಧ ಸಂಗತಿ ತಿಳಿದು ಮಗಳಿಗೆ ತಾಯಿ ಜಯಲಕ್ಷ್ಮಿ ಬುದ್ಧಿವಾದ ಹೇಳಿದ್ದರು. ಅಲ್ಲದೆ ತಮ್ಮ ಮನೆಯಿಂದ ಲವನೀಶ್‌ನನ್ನು ಖಾಲಿ ಮಾಡಿಸಿ ಬೇರೆಡೆಗೆ ಅವರು ಕಳುಹಿಸಿದ್ದರು. ಹೀಗಿದ್ದರೂ ಕದ್ದು ಮುಚ್ಚಿ ಅವರು ಭೇಟಿಯಾಗುತ್ತಿದ್ದರು.

ಅಂತೆಯೇ ಇತ್ತೀಚೆಗೆ ಮನೆಯಲ್ಲಿ ತಾಯಿ ಇಲ್ಲದ ಹೊತ್ತಿನಲ್ಲಿ ಪ್ರಿಯಕರನನ್ನು ಪವಿತ್ರಾ ಕರೆಸಿಕೊಂಡಿದ್ದಳು. ಆ ವೇಳೆ ದಿಢೀರನೇ ಜಯಲಕ್ಷ್ಮಿ ಮರಳಿದಾಗ ಗಾಬರಿಗೊಂಡು ಈ ಜೋಡಿ ಶೌಚಾಲಯದಲ್ಲಿ ಅವಿತುಕೊಂಡಿತ್ತು. ಆಗ ಜಯಲಕ್ಷ್ಮಿ ಕೈಗೆ ಸಿಕ್ಕಿ ಬಿದ್ದು ಬೈಸಿಕೊಂಡಿದ್ದರು. ಅಲ್ಲದೆ ನಿನ್ನ ವಿಚಾರವನ್ನು ತಮ್ಮನಿಗೆ (ಪವಿತ್ರಾ ಪತಿ) ಹೇಳುವುದಾಗಿ ಮಗಳಿಗೆ ಅವರು ಬೈದಿದ್ದರು. ಈ ಬೆಳವಣಿಗೆಯಿಂದ ಕೆರಳಿದ ಪವಿತ್ರಾ, ತಮ್ಮ ಸಂಬಂಧ ಅಡ್ಡಿಯಾಗಿರುವ ತಾಯಿ ಕೊಲೆಗೆ ನಿರ್ಧರಿಸಿದ್ದಾಳೆ.

ಅಂತೆಯೇ ಬುಧವಾರ ಮಧ್ಯಾಹ್ನ ತನ್ನ ತಾಯಿ ನಿದ್ರೆ ಮಾಡುತ್ತಿದ್ದಾಗ ಪ್ರಿಯಕರನ್ನು ಕರೆಸಿಕೊಂಡು ಉಸಿರುಗಟ್ಟಿಸಿ ಪವಿತ್ರಾ ಹತ್ಯೆ ಮಾಡಿದ್ದಳು. ಕೆಲ ಹೊತ್ತಿನ ಬಳಿಕ ಮನೆಗೆ ಬಂದ ಪತಿ ಸುರೇಶ್‌ಗೆ ತಾಯಿ ಹಾಸಿಗೆಯಿಂದ ಬಿದ್ದು ಮೃತಪಟ್ಟಿದ್ದಾಳೆ ಎಂದು ಪವಿತ್ರಾ ಹೇಳಿದ್ದಳು. ಆದರೆ ಈ ಬಗ್ಗೆ ಶಂಕೆಗೊಂಡ ಸುರೇಶ್‌, ಕೂಡಲೇ ಸಂಬಂಧಕರಿಗೆ ವಿಷಯ ತಿಳಿಸಿದರು. ನಂತರ ಘಟನಾ ಸ್ಥಳಕ್ಕೆ ಬಂದ ಪೊಲೀಸರು, ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿದರು. ಆಗ ಮರಣೋತ್ತರ ವರದಿಯಲ್ಲಿ ಉಸಿರುಗಟ್ಟಿಸಿ ಹತ್ಯೆಗೈದಿರುವ ಸಂಗತಿ ಗೊತ್ತಾಯಿತು. ಆಗ ಅನುಮಾನದ ಮೇರೆಗೆ ಪವಿತ್ರಾಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಬಯಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.