ಹೆಬ್ಬಾಳದಲ್ಲಿ ಟ್ರಾಫಿಕ್‌ ಜಾಮ್‌ ತಡೆಗೆ 3 ಜಂಕ್ಷನ್‌ಗಳ ಅಭಿವೃದ್ಧಿ

| Published : Mar 06 2024, 02:22 AM IST / Updated: Mar 06 2024, 01:10 PM IST

Heavy traffic jam on Delhi

ಸಾರಾಂಶ

ನಗರದಲ್ಲಿ ಸುರಕ್ಷಿತ, ಸುಗಮ ಸಂಚಾರ ವ್ಯವಸ್ಥೆ ಜಾರಿಗೆ ತರುವ ಸಂಬಂಧ ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್‌) ಹಂತಹಂತವಾಗಿ ಯೋಜನೆ ರೂಪಿಸುತ್ತಿದೆ. ಅದರ ಭಾಗವಾಗಿ ಹೆಬ್ಬಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂರು ಜಂಕ್ಷನ್‌ಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಸುರಕ್ಷಿತ, ಸುಗಮ ಸಂಚಾರ ವ್ಯವಸ್ಥೆ ಜಾರಿಗೆ ತರುವ ಸಂಬಂಧ ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್‌) ಹಂತಹಂತವಾಗಿ ಯೋಜನೆ ರೂಪಿಸುತ್ತಿದೆ. 

ಅದರ ಭಾಗವಾಗಿ ಹೆಬ್ಬಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂರು ಜಂಕ್ಷನ್‌ಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತಿದೆ. ಹಾಗೆಯೇ, ಕ್ಷೇತ್ರ ವ್ಯಾಪ್ತಿಯ ಶಾಲೆಗಳನ್ನು ಸಂಪರ್ಕಿಸುವ ರಸ್ತೆಗಳಲ್ಲಿ ಸುರಕ್ಷತಾ ಕಾಮಗಾರಿಗಳನ್ನು ಅನುಷ್ಠಾನಗೊಳಿಸುತ್ತಿದೆ.

ಹೆಬ್ಬಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಸಲುವಾಗಿ ಡಲ್ಟ್‌ ಕ್ರಮ ಕೈಗೊಳ್ಳುತ್ತಿದೆ. ಅದರ ಭಾಗವಾಗಿ ಕ್ಷೇತ್ರ ವ್ಯಾಪ್ತಿಯ ಟಿವಿ ಟವರ್‌ ಜಂಕ್ಷನ್‌, ಹೆಬ್ಬಾಳ ಮೇಲ್ಸೇತುವೆ ಕಳಭಾಗದ ಕೆ2 ಬಸ್‌ ಸ್ಟಾಪ್‌ ಜಂಕ್ಷನ್‌, ಸಂಜಯನಗರ-ಬಳ್ಳಾರಿ ರಸ್ತೆ ಜಂಕ್ಷನ್‌ಗಳಲ್ಲಿ ಸುಗಮ ಸಂಚಾರ ಮತ್ತು ಪಾದಚಾರಿಗಳಿಗೆ ಅನುಕೂಲವಾಗುವಂತಹ ವ್ಯವಸ್ಥೆ ಅನುಷ್ಠಾನಕ್ಕೆ ಯೋಜನೆ ರೂಪಿಸಿದೆ. 

ಈ ಜಂಕ್ಷನ್‌ಗಳ ಪಾದಚಾರಿ ಮಾರ್ಗವನ್ನು ದುರಸ್ತಿಗೊಳಿಸುವುದು, ಜಂಕ್ಷನ್‌ ರಸ್ತೆಯನ್ನು ಕಾಂಕ್ರೀಟ್‌ ಅಥವಾ ಉತ್ತಮ ಗುಣಮಟ್ಟದ ಡಾಂಬರಿನ ರಸ್ತೆ ನಿರ್ಮಿಸುವುದು ಹೀಗೆ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ.

ಅದರ ಜತೆಗೆ ಹೆಬ್ಬಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಫ್ಲಾರೆನ್ಸ್‌ ಪ್ರೌಢಶಾಲೆ, ಮಿಲೇನಿಯಂ ಪಬ್ಲಿಕ್‌ ಶಾಲೆ, ಅಕಾಯ್‌ ಪಬ್ಲಿಕ್‌ ಶಾಲೆ, ಕುವೆಂಪು ಆದರ್ಶ ಪಬ್ಲಿಕ್‌ ಶಾಲೆ ಸಂಪರ್ಕಿಸುವ 8 ರಸ್ತೆಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ. 

ಪ್ರಮುಖವಾಗಿ ಈ ಶಾಲೆಗಳನ್ನು ಸಂಪರ್ಕಿಸುವ ರಸ್ತೆಗಳಲ್ಲಿ ರಸ್ತೆ ಉಬ್ಬುಗಳು, ಸೂಚನಾ ಫಲಕಗಳ ಅಳವಡಿಕೆ, ಪಾದಚಾರಿ ಮಾರ್ಗಗಳ ದುರಸ್ತಿ ಸೇರಿದಂತೆ ಮಕ್ಕಳು ಸುರಕ್ಷತವಾಗಿ ಹೋಗುವಂತಹ ವಾತಾವರಣ ನಿರ್ಮಿಸಲಾಗುತ್ತಿದೆ. ಅಲ್ಲದೆ, ವಾಹನಗಳು ಶಾಲೆ ಬಳಿ ವೇಗವಾಗಿ ಸಂಚರಿಸುವುದಕ್ಕೆ ತಡೆಯೊಡ್ಡಲು ಕ್ರಮ ಕೈಗೊಳ್ಳಲಾಗುತ್ತಿದೆ.

ಈ ಕಾಮಗಾರಿಗಳ ಅನುಷ್ಠಾನಕ್ಕಾಗಿ ಗುತ್ತಿಗೆದಾರರ ನೇಮಕಕ್ಕೆ ಡಲ್ಟ್‌ ಮುಂದಾಗಿದ್ದು, ಅದಕ್ಕಾಗಿ ಟೆಂಡರ್‌ ಪ್ರಕ್ರಿಯೆ ನಡೆಸಿದೆ. ಟೆಂಡರ್‌ ಪ್ರಕ್ರಿಯೆ ಅವಧಿ ಮುಗಿದು ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿದ 2ರಿಂದ 4 ತಿಂಗಳಲ್ಲಿ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿಯನ್ನು ಡಲ್ಟ್‌ ಹೊಂದಿದೆ.