ಆತ್ಮಹತ್ಯೆಗೆ ಶರಣಾದ ನಿರ್ಮಾಪಕ ಪವಿತ್ರಾಗೆ ₹2 ಕೋಟಿ ನೀಡಿದ್ದರೇ?

| Published : Jun 25 2024, 12:31 AM IST / Updated: Jun 25 2024, 04:49 AM IST

Soundarya Jagadeesh

ಸಾರಾಂಶ

ಎರಡು ತಿಂಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದ ಚಿತ್ರ ನಿರ್ಮಾಪಕ, ಉದ್ಯಮಿ ಸೌಂದರ್ಯ ಜಗದೀಶ್‌ ಮತ್ತು ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ ಆಪ್ತೆ ಪವಿತ್ರಾ ಗೌಡ ನಡುವೆ ಹಣಕಾಸಿನ ವ್ಯವಹಾರ ನಡೆದಿದೆ ಎನ್ನಲಾಗಿದೆ.

 ಬೆಂಗಳೂರು : ಎರಡು ತಿಂಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದ ಚಿತ್ರ ನಿರ್ಮಾಪಕ, ಉದ್ಯಮಿ ಸೌಂದರ್ಯ ಜಗದೀಶ್‌ ಮತ್ತು ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ ಆಪ್ತೆ ಪವಿತ್ರಾ ಗೌಡ ನಡುವೆ ಹಣಕಾಸಿನ ವ್ಯವಹಾರ ನಡೆದಿದೆ ಎನ್ನಲಾಗಿದೆ.

ಸೌಂದರ್ಯ ಜಗದೀಶ್‌ ಅವರು ರಾಜಾಜಿನಗರದ ಬ್ಯಾಂಕ್‌ವೊಂದರ ಖಾತೆಯಿಂದ 2017ರ ನ.13ರಂದು 1 ಕೋಟಿ ರು. ಮತ್ತು 2018ರ ಜ.23ರಂದು ಒಂದು ಕೋಟಿ ರು. ಸೇರಿದಂತೆ ಒಟ್ಟು 2 ಕೋಟಿ ರು.ಗಳನ್ನು ಪವಿತ್ರಾ ಪಿ. ಹೆಸರಿನ ಖಾತೆಗೆ ವರ್ಗಾಯಿಸಿದ್ದಾರೆ. ಈ ಪವಿತ್ರಾ ಪಿ. ಎಂದರೆ, ದರ್ಶನ್‌ ಆಪ್ತೆ ಪವಿತ್ರಾ ಗೌಡ ಎನ್ನಲಾಗಿದೆ. ಸೌಂದರ್ಯ ಜಗದೀಶ್‌ ಆತ್ಮಹತ್ಯೆಗೆ ಈ ಹಣಕಾಸು ವ್ಯವಹಾರವೂ ಕಾರಣ ಇರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ.

ದರ್ಶನ್‌ ಆಪ್ತೆ ಪವಿತ್ರಾ ಗೌಡ 2018ರಲ್ಲಿ ರಾಜರಾಜೇಶ್ವರಿನಗರದ ಕೆಂಚೇನಹಳ್ಳಿಯಲ್ಲಿ 1.75 ಕೋಟಿ ರು. ಮೌಲ್ಯದ ಮನೆ ಖರೀದಿಸಿದ್ದಾರೆ. ಈ ಮನೆ ಖರೀದಿಗೆ ಸೌಂದರ್ಯ ಜಗದೀಶ್‌ ನೀಡಿದ್ದಾರೆ ಎನ್ನಲಾದ ಹಣವನ್ನೇ ಬಳಸಿದ್ದಾರೆ ಎನ್ನಲಾಗಿದೆ. ಪವಿತ್ರಾ ಪಿ. ಹೆಸರಿನ ಮನೆ ಖರೀದಿ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಪತಿಗೆ 60 ಕೋಟಿ ರು. ವಂಚನೆ ಆರೋಪ:

ಕಳೆದ ಏ.14ರಂದು ಸೌಂದರ್ಯ ಜಗದೀಶ್‌ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಮಹಾಲಕ್ಷ್ಮೀ ಲೇಔಟ್‌ನಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿತ್ತು. ಮೇ 24ರಂದು ಮೃತ ಸೌಂದರ್ಯ ಜಗದೀಶ್‌ ಅವರ ಪತ್ನಿ ಶಶಿರೇಖಾ ಅವರು ದೂರು ನೀಡಿದ್ದರು. ಪತಿ ಸೌಂದರ್ಯ ಜಗದೀಶ್ ಅವರು ಸೌಂದರ್ಯ ಕನ್‌ಸ್ಟ್ರಕ್ಷನ್ ಕಂಪನಿ ನಡೆಸುತ್ತಿದ್ದರು. 

ವಿ.ಎಸ್.ಸುರೇಶ್, ಎಸ್.ಪಿ. ಹೊಂಬಣ್ಣ ಹಾಗೂ ಸುಧೀಂದ್ರ ಅವರು ಕಂಪನಿಯ ಸಹ ಪಾಲುದಾರರಾಗಿದ್ದರು. ಪತಿ ಸೌಂದರ್ಯ ಜಗದೀಶ್‌ ಅವರು ತಮ್ಮ ಕೆಲ ಆಸ್ತಿಗಳನ್ನು ಬ್ಯಾಂಕ್‌ನಲ್ಲಿ ಅಡಮಾನವಿರಿಸಿ 60 ಕೋಟಿ ರು. ಸಾಲ ಪಡೆದು ಕಂಪನಿಯಲ್ಲಿ ಹೂಡಿಕೆ ಮಾಡಿದ್ದರು. ಆದರೆ, ಸಹಪಾಲುದಾರರು ಕಂಪನಿ ನಷ್ಟದಲ್ಲಿರುವುದಾಗಿ ಹೇಳಿ 60 ಕೋಟಿ ರು. ವಂಚಿಸಿದ್ದರು. ಅಂತೆಯೆ ಪತಿ ಸೌಂದರ್ಯ ಜಗದೀಶ್ ಅವರಿಂದ ಹಲವು ದಾಖಲೆಗಳಿಗೆ ಸಹಿ ಮಾಡಿಸಿಕೊಂಡಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಸಹ ಪಾಲುದಾರರು ಪತಿಗೆ ಜೀವ ಬೆದರಿಕೆ ಹಾಕಿದ್ದರು. ಈ ಸಹ ಪಾಲುದಾರರ ಕಿರುಕುಳದಿಂದ ಪತಿ ಸೌಂದರ್ಯ ಜಗದೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ನಿ ಶಶಿರೇಖಾ ದೂರಿನಲ್ಲಿ ಆರೋಪಿಸಿದ್ದರು.

ಸೌಂದರ್ಯ ಜಗದೀಶ್‌ ಆತ್ಮಹತ್ಯೆ ಬಳಿಕ ಅವರ ಬಟ್ಟೆಯಲ್ಲಿ ಮರಣಪತ್ರವೊಂದು ಸಿಕ್ಕಿತ್ತು. ಈ ಮರಣಪತ್ರ ಆಧರಿಸಿ ಪತ್ನಿ ಶಶಿರೇಖಾ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪ್ರತ್ಯೇಕ ಎಫ್‌ಐಆರ್‌ ದಾಖಲಿಸಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

2 ಕೋಟಿ ರು. ವರ್ಗಾವಣೆ ಬಗ್ಗೆ ಪೊಲೀಸ್‌ಗೆ ಮಾಹಿತಿ ಪಾಲುದಾರ ಸುರೇಶ್ ಎಂಬುವವರು ಸೌಂದರ್ಯ ಜಗದೀಶ್ ಹಣಕಾಸು ವ್ಯವಹಾರದ ಬಗ್ಗೆ ಮಹಾಲಕ್ಷ್ಮೀ ಲೇಔಟ್‌ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸೌಂದರ್ಯ ಜಗದೀಶ್ ಅವರು ಪಿ.ಪವಿತ್ರಾ ಎಂಬವರಿಗೆ 2 ಕೋಟಿ ರು. ವರ್ಗಾವಣೆ ಮಾಡಿದ್ದಾರೆ. ಇದು ಕಂಪನಿ ಹಣವೇ ಅಥವಾ ವೈಯಕ್ತಿಕ ಹಣವೇ ಎಂಬುದು ಗೊತ್ತಿಲ್ಲ ಎಂದು ಸುರೇಶ್‌ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಜೆಟ್‌ಲ್ಯಾಗ್‌ ಪಬ್‌ ಅನ್ನು ದರ್ಶನ್ ಹೆಸರಿಗೆ ಬರೆದಿಲ್ಲ

ಸೌಂದರ್ಯ ಜಗದೀಶ್‌ ಅವರು ತಮ್ಮ ಪತ್ನಿ ಶಶೀರೇಖಾ ಅವರ ಹೆಸರಿನಲ್ಲಿದ್ದ ಜೆಟ್‌ಲ್ಯಾಗ್‌ ಪಬ್ ಅನ್ನು ನಟ ದರ್ಶನ್‌ ಹೆಸರಿಗೆ ಬರೆದುಕೊಟ್ಟಿದ್ದರು ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಶಶಿರೇಖಾ ಅವರು, ಜೆಟ್‌ ಲ್ಯಾಗ್‌ ಪಬ್‌ ಇಂದಿಗೂ ನನ್ನ ಹೆಸರಿನಲ್ಲೇ ಇದೆ. ನಾವು ಯಾರಿಗೂ ಬರೆದುಕೊಟ್ಟಿಲ್ಲ. ಪತಿ ಇದ್ದಾಗ ಅದನ್ನು ನೋಡಿಕೊಳ್ಳುತ್ತಿದ್ದರು. ಅವರ ಸಾವಿನ ಬಳಿಕ ನಾನೇ ನೋಡಿಕೊಳ್ಳುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.