ನಗರದಲ್ಲಿ ಡ್ರಗ್ಸ್‌ ಮಾರುತ್ತಿದ್ದ ಪದವೀಧರ ಜೈಲಿಗೆ : ₹ 57 ಲಕ್ಷ ಮೌಲ್ಯದ ಮಾದಕ ವಸ್ತು ವಶ

| N/A | Published : Feb 22 2025, 12:48 AM IST / Updated: Feb 22 2025, 04:18 AM IST

ಸಾರಾಂಶ

ನಗರದಲ್ಲಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಖಾಸಗಿ ಕಾಲೇಜಿನ ಬಿಎಸ್ಸಿ ಪದವೀಧರ ಸೇರಿದಂತೆ ಇಬ್ಬರನ್ನು ಪ್ರತ್ಯೇಕವಾಗಿ ಬಂಧಿಸಿ ₹57 ಲಕ್ಷ ಮೌಲ್ಯದ ಡ್ರಗ್ಸ್ ಅನ್ನು ಸಿಸಿಬಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

 ಬೆಂಗಳೂರು : ನಗರದಲ್ಲಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಖಾಸಗಿ ಕಾಲೇಜಿನ ಬಿಎಸ್ಸಿ ಪದವೀಧರ ಸೇರಿದಂತೆ ಇಬ್ಬರನ್ನು ಪ್ರತ್ಯೇಕವಾಗಿ ಬಂಧಿಸಿ ₹57 ಲಕ್ಷ ಮೌಲ್ಯದ ಡ್ರಗ್ಸ್ ಅನ್ನು ಸಿಸಿಬಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಕೇರಳ ಮೂಲದ ವಿಷ್ಣು ದಾಸ್ ಹಾಗೂ ಬಿಹಾರದ ಮಹಂತ ಬಂಧಿತರಾಗಿದ್ದು, ಆರೋಪಿಗಳಿಂದ 52 ಗ್ರಾಂ ಎಂಡಿಎಂಎ, 3.2 ಕೇಜಿ ಗಾಂಜಾ ಹಾಗೂ ಮೂರು ಮೊಬೈಲ್ ಸೇರಿದಂತೆ ₹57.2 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಮಾದಕ ವಸ್ತು ಮಾರಾಟ ಜಾಲದ ಮೇಲೆ ಕಣ್ಣೀರಿಟ್ಟಿದ್ದ ಇನ್‌ಸ್ಪೆಕ್ಟರ್‌ ಮಹಮ್ಮದ್ ಮುಕ್ರಂ ಅವರಿಗೆ ಬಾತ್ಮೀದಾರರ ಮೂಲಕ ಈ ಇಬ್ಬರು ಪೆಡ್ಲರ್‌ಗಳ ಮಾಹಿತಿ ಸಿಕ್ಕಿತು. ಅಂತೆಯೇ ಕಾರ್ಯಾಚರಣೆ ನಡೆಸಿ ಡಿ.ಜೆ.ಹಳ್ಳಿ ಸಮೀಪದ ಶಾಂಪುರದ ಕಾವೇರಿ ನಗರದಲ್ಲಿ ವಿಷ್ಣು ದಾಸ್ ಹಾಗೂ ಬೆಳ್ಳಂದೂರು ಬಳಿ ಮಹಂತನನ್ನು ಸಿಸಿಬಿ ಬಂಧಿಸಿದೆ.

ನಗರದ ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡಿದ್ದ ಕೇರಳ ಮೂಲದ ವಿಷ್ಣು, ಕೆಲಸವಿಲ್ಲದೆ ಅಲೆಯುತ್ತಿದ್ದ ಆತ ಡಿ.ಜೆ.ಹಳ್ಳಿ ಬಳಿ ನೆಲೆಸಿದ್ದ. ಮೊದಲು ಡ್ರಗ್‌ ವ್ಯಸನಿಯಾಗಿದ್ದ ಆತನಿಗೆ ಹಣದಾಸೆ ತೋರಿಸಿ ಡ್ರಗ್ಸ್ ಮಾರಾಟ ದಂಧೆಗೆ ಅದೇ ರಾಜ್ಯದ ಮತ್ತೊಬ್ಬ ಪೆಡ್ಲರ್‌ ಸೆಳೆದಿದ್ದ. ತನ್ನ ಸ್ನೇಹಿತ ನೀಡುತ್ತಿದ್ದ ಡ್ರಗ್ಸ್‌ ಅನ್ನು ಗ್ರಾಹಕರಿಗೆ ವಿಷ್ಣು ಮಾರಾಟ ಮಾಡುತ್ತಿದ್ದ. ಅದರಂತೆ ಶಾಂಪುರದ ಕಾವೇರಿ ನಗರದಲ್ಲಿ ಗ್ರಾಹಕರಿಗೆ ಎಂಡಿಎಂಎ ನೀಡಲು ಬಂದಾಗ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ₹50 ಲಕ್ಷ ಮೌಲ್ಯದ ಎಂಡಿಎಂಎ ಜಪ್ತಿಯಾಗಿದೆ. ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಪೆಡ್ಲರ್ ಪತ್ತೆಗೆ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಿಹಾರದಿಂದ ಗಾಂಜಾ ತಂದು ನಗರದಲ್ಲಿ ಮಾರುತ್ತಿದ್ದವ ಸೆರೆ

ತನ್ನ ರಾಜ್ಯದಿಂದ ಕಡಿಮೆ ಬೆಲೆಗೆ ಡ್ರಗ್ಸ್ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಬಿಹಾರ ಮೂಲದ ಕಾವಲುಗಾರ ಮಹಂತ ಸಿಸಿಬಿ ಬಲೆಗೆ ಬಿದ್ದಿದ್ದಾನೆ.

ಕಳೆದ 9 ವರ್ಷಗಳಿಂದ ಬೆಳ್ಳಂದೂರು ಸಮೀಪ ಖಾಸಗಿ ಸಂಸ್ಥೆಯಲ್ಲಿ ಆತ ಕಾವಲುಗಾರನಾಗಿದ್ದು, ಸುಲಭವಾಗಿ ಹಣ ಸಂಪಾದನೆಗೆ ಗಾಂಜಾ ಮಾರಾಟದಲ್ಲಿ ಮಹಂತ ತೊಡಗಿದ್ದ. ತನ್ನೂರಿನಲ್ಲಿ ಕಡಿಮೆ ಬೆಲೆಗೆ ಸಿಗುವ ಗಾಂಜಾವನ್ನು ಊರಿಗೆ ಹೋದಾಗೆಲ್ಲ ತಂದು ದುಬಾರಿ ಬೆಲೆಗೆ ನಗರದಲ್ಲಿ ಮಾರಾಟ ಮಾಡಿ ಆರೋಪಿ ಹಣ ಸಂಪಾದಿಸುತ್ತಿದ್ದ. ಈತನ ಚಟುವಟಿಕೆ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿ ಕಾರ್ಯಾಚರಣೆ ನಡೆಸಿದೆ. ಆರೋಪಿಯಿಂದ ₹2.5 ಲಕ್ಷ ಮೌಲ್ಯದ 3.200 ಕೇಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.