ಬೆಂಗಳೂರಿನಲ್ಲಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ₹4.45 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

| Published : Sep 11 2024, 01:12 AM IST / Updated: Sep 11 2024, 05:08 AM IST

ಸಾರಾಂಶ

ಬೆಂಗಳೂರಿನಲ್ಲಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ₹4.45 ಕೋಟಿ ಮೌಲ್ಯದ ಡ್ರಗ್ಸನ್ನು ಜಪ್ತಿ ಮಾಡಿದ್ದಾರೆ.

 ಬೆಂಗಳೂರು : ರಾಜಧಾನಿಯ ಡ್ರಗ್ಸ್ ಮಾಫಿಯಾ ಮೇಲೆ ಪ್ರತ್ಯೇಕ ಕಾರ್ಯಾಚರಣೆ ನಡೆಸಿ ವಿದೇಶಿ ಮಹಿಳೆ ಸೇರಿದಂತೆ 15 ಮಂದಿಯನ್ನು ಬಂಧಿಸಿ ₹4.45 ಕೋಟಿ ಮೌಲ್ಯದ ಡ್ರಗ್ಸನ್ನು ಸಿಸಿಬಿ ಹಾಗೂ ಸ್ಥಳೀಯ ಪೊಲೀಸರು ಜಪ್ತಿ ಮಾಡಿದ್ದಾರೆ.

ನೀಲಸಂದ್ರದ ಕರೀಂ ಬೇಗ್‌, ಮಣಿಪುರ ರಾಜ್ಯದ ತಾರೀಕ್ ಅಜೀಜ್‌, ಇಕ್ರಂ, ಕಿನ್ಯಾ ದೇಶದ ರೋಜ್‌, ನೆಲಮಂಗಲದ ಅಭಿಷೇಕ್‌ ಗೌಡ, ಕೇರಳದ ಶೀಜಿನ್‌, ಮೊಹಮ್ಮದ್‌ ಮಿಗ್ದಾದ್‌, ರಾಜಸ್ಥಾನದ ರೌವನಕ್‌ ಗುಪ್ತ, ಬಿಹಾರದ ಕರಣ್ ಕುಮಾರ್‌, ತವನೀಶ್, ಒಡಿಶಾದ ದಿಲೀಪ್‌, ಶಿವರಾಜು, ರಾಮ್ ಅಂತಲ್‌, ಮಂಗಳೂರಿನ ಬದ್ರುದ್ದೀನ್‌, ಲಕ್ಷ್ಮಣ್‌ ನಾಯಕ್‌ ಬಂಧಿತರಾಗಿದ್ದು, ಆರೋಪಿಗಳಿಂದ ಗಾಂಜಾ, ಹೈಡ್ರೋ ಗಾಂಜಾ ಹಾಗೂ ಎಂಡಿಎಂ ಸೇರಿ ₹4.45 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ.

ವಿವೇಕನಗರ, ಯಶವಂತಪುರ, ಬೇಗೂರು, ವಿದ್ಯಾರಣ್ಯಪುರ, ಎಚ್‌ಎಸ್‌ಆರ್ ಲೇಔಟ್‌ ಠಾಣೆಗಳ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರು ಹಾಗೂ ಹೆಣ್ಣೂರು, ಬಾಣಸವಾಡಿ, ಇಂದಿರಾನಗರ, ಜೆ.ಬಿ.ನಗರ, ಬ್ಯಾಡರಹಳ್ಳಿ ಹಾಗೂ ಸುಬ್ರಹ್ಮಣ್ಯಪುರ ಠಾಣೆಗಳ ಪೊಲೀಸರು ಈ ಡ್ರಗ್ಸ್ ಮಾರಾಟದ ಜಾಲದ ಮೇಲೆ ದಾಳಿ ನಡೆಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಒಡಿಶಾದಿಂದ ತಂದು ಮಾರಾಟ

ನಗರದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಕರೀಂಖಾನ್, ಇತ್ತೀಚೆಗೆ ಒಡಿಶಾದ ಪೆಡ್ಲರ್‌ನಿಂದ ಕಡಿಮೆ ಬಲೆಗೆ ಗಾಂಜಾ ಖರೀದಿಸಿ ನಗರದಲ್ಲಿ ಮಾರುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಆತನ ಮನೆ ದಾಳಿ ನಡೆಸಿ 10 ಕೇಜಿ ಗಾಂಜಾವನ್ನು ಸಿಸಿಬಿ ವಶಪಡಿಸಿಕೊಂಡಿದೆ. ಮತ್ತಿಕೆರೆಯಲ್ಲಿ ನೆಲೆಸಿದ್ದ ಮಣಿಪುರ ಮೂಲದ ತಾರೀಕ್‌ ಹಾಗೂ ಇಕ್ರಂ, ಜೆ.ಪಿ.ನಗರ ಪಾರ್ಕ್ ಬಳಿ ಹೆರಾಯಿನ್‌ ಮಾರಾಟಕ್ಕೆ ಯತ್ನಿಸಿದ್ದಾಗ ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಇವರಿಂದ ₹75 ಲಕ್ಷ ಮೌಲ್ಯದ 84 ಗ್ರಾಂ ಹೆರಾಯಿನ್ ಜಪ್ತಿ ಮಾಡಲಾಗಿದೆ. 

ವಿದೇಶಿ ಮಹಿಳೆಯ ಡ್ರಗ್ಸ್ ದಂಧೆ

ವಿದ್ಯಾರಣ್ಯಪುರ ಬಳಿ ಕೀನ್ಯಾ ದೇಶದ ರೋಜ್‌ ಎಂಬಾಕೆಯನ್ನು ಸಿಸಿಬಿ ಪೊಲೀಸರು ಬಂಧಿಸಿ ₹10 ಲಕ್ಷ ಮೌಲ್ಯದ ಎಂಡಿಎಂಎ ಕ್ರಿಸ್ಟೆಲ್‌ ವಶಪಡಿಸಿಕೊಂಡಿದ್ದಾರೆ. 2019ರಲ್ಲಿ ವ್ಯಾಪಾರಿ ವೀಸಾದಡಿ ಭಾರತಕ್ಕೆ ಬಂದಿದ್ದ ರೋಜ್‌, ಸುಲಭವಾಗಿ ಹಣ ಸಂಪಾದನೆಗೆ ಡ್ರಗ್ಸ್ ದಂಧೆಗಿಳಿದಿದ್ದಳು. ಕಳೆದ ವರ್ಷ ಡ್ರಗ್ಸ್ ಪ್ರಕರಣದಲ್ಲೇ ಆಕೆಯನ್ನು ಕೆ.ಜಿ.ನಗರ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಜಾಮೀನು ಪಡೆದು ಹೊರಬಂದ ಬಳಿಕ ಮತ್ತೆ ಆಕೆ ಚಾಳಿ ಮುಂದುವರೆಸಿದ್ದಳು ಎಂದು ಅಧಿಕಾರಿಗಳು ಹೇಳಿದ್ದಾರೆ. 

ವಿದೇಶದಿಂದ ಪೋಸ್ಟ್ ಮೂಲಕ ಡ್ರಗ್ಸ್

ಖಾಸಗಿ ಕಂಪನಿ ಉದ್ಯೋಗಿ ನೆಲಮಂಗಲದ ಅಭಿಷೇಕ್‌, ಸ್ನೇಹಿತನ ಸೂಚನೆ ಮೇರೆಗೆ ಬೆಲ್ಜಿಯಂ ದೇಶದಿಂದ ಇಂಡಿಯನ್ ಪೋಸ್ಟ್ ಆಫೀಸ್‌ಗೆ ಕೊರಿಯರ್‌ನಲ್ಲಿ ಬಂದಿದ್ದ ಡ್ರಗ್ಸ್ ಸಾಗಿಸುವಾಗ ಸಿಸಿಬಿ ಬಂಧಿಸಿದೆ. ಈತನಿಂದ ₹1.5 ಕೋಟಿ ಮೌಲ್ಯದ ಎಲ್ಎಸ್‌ಡಿ ಹಾಗೂ ಎಡಿಎಂಎ ಜಪ್ತಿ ಮಾಡಲಾಗಿದೆ. ಅದೇ ರೀತಿ ಥೈಲ್ಯಾಂಡ್‌ನಿಂದ ಅಂಚೆ ಮೂಲಕ ₹50 ಲಕ್ಷ ಬೆಲೆಯ ಹೈಡ್ರೋ ಗಾಂಜಾ ತರಿಸಿ ತನ್ನೂರಿಗೆ ಸಾಗಿಸಲು ಯತ್ನಿಸಿದ್ದ ಕೇರಳದ ಶೀಜಿನ್‌ ಸಿಸಿಬಿ ಗಾಳಕ್ಕೆ ಸಿಕ್ಕಿದ್ದಾನೆ.

ಕೂಲಿ ಕಾರ್ಮಿಕರರ ಸೆರೆ

ಹೆಣ್ಣೂರು ಬಂಡೆ ಆಟದ ಮೈದಾನ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ಒಡಿಶಾ ಮೂಲದ ಒಡಿಶಾದ ದಿಲೀಪ್‌, ಶಿವರಾಜು, ರಾಮ್ ಅಂತಲ್‌ ಹೆಣ್ಣೂರು ಪೊಲೀಸರು ಬಂಧಿಸಿ ₹21 ಲಕ್ಷ ಮೌಲ್ಯದ 21 ಕೇಜಿ ಗಾಂಜಾ ಜಪ್ತಿ ಮಾಡಿದ್ದಾರೆ. ತಮ್ಮೂರಿನಿಂದ ಗಾಂಜಾ ತಂದು ಆರೋಪಿಗಳು ನಗರದಲ್ಲಿ ಮಾರುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಅದೇ ರೀತಿ ಎಸ್‌ಎಂಎವಿಟಿ ರೈಲ್ವೆ ನಿಲ್ದಾಣ ಬಳಿ ಮಂಗಳೂರಿನ ಬದ್ರುದ್ದೀನ್‌, ಮುರುಗೇಶ್ ಪಾಳ್ಯದಲ್ಲಿ ಲಕ್ಷ್ಮಣ್ ನಾಯಕ್‌, ಇಂದಿರಾನಗರದಲ್ಲಿ ಮೊಹಮ್ಮದ್ ಮಿಗ್ದಾದ್‌ ಹಾಗೂ ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿ ಬಿಹಾರದ ಕರಣ್‌ ಸ್ಥಳೀಯ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಈ ಪೆಡ್ಲರ್‌ಗಳು ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವಿದೇಶದಿಂದ ಬೇಕರಿ ತಿಂಡಿಗಳಲ್ಲಿ ಡ್ರಗ್ಸ್

ವಿದೇಶದಿಂದ ಬೇಕರಿ ತಿನಿಸುಗಳಲ್ಲಿ ಅಡಗಿಸಿ ಡ್ರಗ್ಸ್ ತರಿಸಿಕೊಂಡಿದ್ದ ಪೆಡ್ಲರ್‌ ತವನೀಶ್‌ನನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ದಾವಣಗೆರೆ ಜಿಲ್ಲೆಯ ತವನೀಶ್ ವೃತ್ತಿಪರ ಪೆಡ್ಲರ್ ಆಗಿದ್ದು, ಆತನ ಮೇಲೆ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಹಿಮಾಚಲ ಪ್ರದೇಶಕ್ಕೆ ಡಿಜೆ ಪಾರ್ಟಿಗೆ ತೆರಳಿ ಅಲ್ಲಿಂದ ಕೇರಳ ಮೂಲದ ಡ್ರಗ್ಸ್ ಪೂರೈಕೆದಾರರನಿಂದ ತವನೀಶ್‌ ಡ್ರಗ್ಸ್ ಖರೀದಿಸುತ್ತಿದ್ದ. ಥೈಲ್ಯಾಂಡ್‌ ದೇಶದಿಂದ ಬೇಕರಿ ತಿಂಡಿ, ಮಕ್ಕಳ ಚಾಕೋಲೆಟ್ ಹಾಗೂ ಬಿಸ್ಕೆಟ್‌ ಬಾಕ್ಸ್‌ಗಳಲ್ಲಿ ಹೈಡ್ರೋ ಗಾಂಜಾ ಅಡಗಿಸಿ ನಗರಕ್ಕೆ ತಂದು ಆರೋಪಿಗಳು ಮಾರುತ್ತಿದ್ದರು. ಈತನಿಂದ ₹1.22 ಕೋಟಿ ಮೌಲ್ಯದ ಡ್ರಗ್ಸ್ ಅನ್ನು ಇನ್‌ಸ್ಪೆಕ್ಟರ್‌ ಎಸ್‌.ವೀರಣ್ಣ ನೇತೃತ್ವದ ತಂಡ ಜಪ್ತಿ ಮಾಡಿದೆ.ಡ್ರಗ್ಸ್ ದುಷ್ಪರಿಣಾಮ ಕುರಿತು ಶಾಲಾ-ಕಾಲೇಜುಗಳಿಗೆ ಪ್ರತಿ ತಿಂಗಳ ಕೊನೆ ವರ್ಕಿಂಗ್‌ ಡೇ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ. ಹೊಸ ಪೆಡ್ಲರ್‌ಗಳ ಮೇಲೆ ನಿಗಾವಹಿಸಲಾಗಿದ್ದು, ಡ್ರಗ್ಸ್ ನಿರ್ಮೂಲನೆಗೆ ಎಲ್ಲ ರೀತಿಯ ಕಾನೂನು ಕ್ರಮ ಜರುಗಿಸಿದ್ದೇವೆ.

-ಬಿ.ದಯಾನಂದ್, ಪೊಲೀಸ್ ಆಯುಕ್ತ.