ಪತ್ನಿಯ ಮೇಲೆ ಕಣ್ಣಿಟ್ಟ ಸ್ನೇಹಿತನ ಬಾರ್‌ಗೆ ಕರೆದೊಯ್ದು ಕುಡಿಸಿ ಮಾರಣಾಂತಿಕ ಹಲ್ಲೆ

| N/A | Published : Feb 07 2025, 02:02 AM IST / Updated: Feb 07 2025, 05:03 AM IST

meerut crime news

ಸಾರಾಂಶ

ನಿನ್ನ ಪತ್ನಿಯೊಂದಿಗೆ ಖಾಸಗಿ ಕ್ಷಣ ಕಳೆಯಬೇಕು ಎಂದು ಹೇಳಿದ ಗೆಳೆಯನಿಗೆ ಕಂಠಮಟ್ಟ ಕುಡಿಸಿ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

 ಬೆಂಗಳೂರು : ಪತ್ನಿ ಮೇಲೆ ಕಣ್ಣು ಹಾಕಿದ್ದ ಸ್ನೇಹಿತನನ್ನು ಬಾರ್‌ಗೆ ಕರೆದೊಯ್ದು ಕಂಠಮಟ್ಟ ಮದ್ಯ ಕುಡಿಸಿ ಮಾರಕಾಸ್ತ್ರದಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗಾಣಿಗರಪಾಳ್ಯ ನಿವಾಸಿ ಅರ್ಜುನ್(35) ಬಂಧಿತ. ಆರೋಪಿಯು ಫೆ.4ರಂದು ರಾತ್ರಿ ಸುಮಾರು 9.30ಕ್ಕೆ ಗಾಣಿಗರಪಾಳ್ಯ ಸರ್ಕಲ್‌ನ ಬಾರ್‌ನಲ್ಲಿ ಸ್ನೇಹಿತ ಕಿರಣ್‌ಗೆ ಮದ್ಯ ಕುಡಿಸಿ ಬಳಿಕ ಮಾರಣಾಂತಿಕ ಹಲ್ಲೆ ನಡೆಸಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಹಿನ್ನೆಲೆ:

ಹಲ್ಲೆಗೆ ಒಳಗಾದ ಕಿರಣ್‌ ಮತ್ತು ಅರ್ಜುನ್‌ ಸ್ನೇಹಿತರು. ಕಿರಣ್‌ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡಿದರೆ, ಅರ್ಜುನ್‌ ಕಾರು ಚಾಲಕನಾಗಿದ್ದ. ಆಗಾಗ್ಗೆ ಕಿರಣ್‌ ಮನೆಗೆ ಅರ್ಜುನ್‌ ಬರುತ್ತಿದ್ದ. ಈ ವೇಳೆ ಅರ್ಜುನ್‌ ಪತ್ನಿ ಮೇಲೆ ಕಿರಣ್‌ ಕಣ್ಣು ಹಾಕಿದ್ದ. ಆಕೆಯ ಮೊಬೈಲ್‌ ಸಂಖ್ಯೆ ಪಡೆದು ಆಗಾಗ ಸಂದೇಶ ಕಳುಹಿಸುವುದು, ಕರೆ ಮಾಡುತ್ತಿದ್ದ. ಆದರೆ, ಆಕೆ ಕಿರಣ್‌ನನ್ನು ನಿರ್ಲಕ್ಷಿಸಿದ್ದಳು. ಈ ನಡುವೆ ಮದ್ಯದ ಪಾರ್ಟಿ ಮಾಡುವಾಗ ಕಿರಣ್‌, ನಿನ್ನ ಪತ್ನಿ ಜತೆಗೆ ಖಾಸಗಿ ಕ್ಷಣ ಕಳೆಯಬೇಕು ಎಂದಿದ್ದ. ಇದರಿಂದ ಕೋಪಗೊಂಡಿದ್ದ ಅರ್ಜುನ್‌, ಕಿರಣ್‌ ಮೇಲೆ ಹಲ್ಲೆ ಮಾಡಿ ಎಚ್ಚರಿಕೆ ನೀಡಿದ್ದ.

ಮದ್ಯ ಕುಡಿಸಿ ಬಳಿಕ ಹಲ್ಲೆ:

ನಂತರವೂ ಕಿರಣ್‌, ಅರ್ಜುನ್‌ ಪತ್ನಿಗೆ ಕರೆ ಮಾಡುತ್ತಿದ್ದ. ಇದರಿಂದ ಕುಪಿತನಾಗಿದ್ದ ಅರ್ಜುನ್‌, ಕಿರಣ್‌ಗೆ ಪಾಠ ಕಲಿಸುವ ತೀರ್ಮಾನಕ್ಕೆ ಬಂದಿದ್ದ. ಅದರಂತೆ ಫೆ.4ರಂದು ರಾತ್ರಿ ಕಿರಣ್‌ನನ್ನು ಬಾರ್‌ಗೆ ಕರೆದೊಯ್ದು ಕಂಠಪೂರ್ತಿ ಮದ್ಯ ಕುಡಿಸಿದ್ದ. ಬಳಿಕ ಗಾಣಿಗರಪಾಳ್ಯ ಸರ್ಕಲ್‌ನಲ್ಲಿ ಬರುವಾಗ ಪೂರ್ವ ನಿರ್ಧರಿತ ಸಂಚಿನಂತೆ ಮಾರಕಾಸ್ತ್ರದಿಂದ ಕಿರಣ್‌ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ. ಬಳಿಕ ಸ್ಥಳೀಯರು ಗಾಯಾಳು ಕಿರಣ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.