ಸಾರಾಂಶ
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿಯನ್ನು ಕೊಂದು ಬಳಿಕ ಮೃತದೇಹ ಸುಟ್ಟು ಹಾಕಿದ್ದ ಮೃತನ ಪತ್ನಿ ಹಾಗೂ ಆಕೆಯ ಭಾವಿ ಅಳಿಯನನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು : ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿಯನ್ನು ಕೊಂದು ಬಳಿಕ ಮೃತದೇಹ ಸುಟ್ಟು ಹಾಕಿದ್ದ ಮೃತನ ಪತ್ನಿ ಹಾಗೂ ಆಕೆಯ ಭಾವಿ ಅಳಿಯನನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದಿಣ್ಣೂರಿನ ನಿವಾಸಿ ಮುನಿರತ್ನ ಹಾಗೂ ಈಕೆಯ ಭಾವಿ ಅಳಿಯ ರಾಮಮೂರ್ತಿ ಬಂಧಿತರಾಗಿದ್ದು, ಇತ್ತೀಚೆಗೆ ಕೌಟುಂಬಿಕ ಕಲಹ ಕಾರಣಕ್ಕೆ ಮನೆಯಲ್ಲೇ ಕೂಲಿ ಕಾರ್ಮಿಕ ಬಾಬು ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಂದು ಬಳಿಕ ಕೋಲಾರಕ್ಕೆ ಕೊಂಡೊಯ್ದು ಅಂತ್ಯಕ್ರಿಯೆಯನ್ನು ಮೃತನ ಕುಟುಂಬದವರು ನಡೆಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಕೊಲೆಗೆ ಏನು ಕಾರಣ?
ದೇವನಹಳ್ಳಿ ತಾಲೂಕಿನ ಕೂಲಿ ಕಾರ್ಮಿಕ ಬಾಬು ಹಾಗೂ ಮಾಲೂರಿನ ಮುನಿರತ್ನ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ದಿಣ್ಣೂರಿನಲ್ಲಿ ಬಾಬು ಕುಟುಂಬ ನೆಲೆಸಿತ್ತು. ವಿಪರೀತ ಮದ್ಯ ವ್ಯಸನಿಯಾಗಿದ್ದ ಬಾಬು, ಪ್ರತಿನಿತ್ಯ ಕುಡಿದು ಬಂದು ಮನೆಯಲ್ಲಿ ಪತ್ನಿ ಹಾಗೂ ಮಕ್ಕಳ ಜಗಳವಾಡುತ್ತಿದ್ದ. ಇದೇ ವಿಚಾರಕ್ಕೆ ಸತಿ-ಪತಿ ಮಧ್ಯೆ ಮನಸ್ತಾಪ ಮೂಡಿತ್ತು ಎನ್ನಲಾಗಿದೆ.
ಬಾಬು ಕುಟುಂಬದ ಜತೆ ಮುನಿರತ್ನ ಅವರ ಸೋದರ ಸಂಬಂಧಿ ರಾಮಮೂರ್ತಿ ನೆಲೆಸಿದ್ದ. ತಮ್ಮ ಹಿರಿಯ ಮಗಳನ್ನು ಆತನಿಗೆ ಮದುವೆ ಮಾಡಿಕೊಡುವುದಾಗಿ ಭರವಸೆಯನ್ನು ಮುನಿರತ್ನ ನೀಡಿದ್ದಳು. ಅಪ್ರಾಪ್ತೆಯಾಗಿದ್ದ ಆಕೆಯು 18 ವರ್ಷಕ್ಕೆ ಕಾಲಿಟ್ಟ ಕೂಡಲೇ ಮದುವೆ ಮಾಡಿಸುವುದಾಗಿ ನಿಶ್ಚಿಯವಾಗಿತ್ತು ಎಂದು ತಿಳಿದು ಬಂದಿದೆ.
ತನ್ನ ಕುಡುಕ ಪತಿಯ ಕಿರುಕುಳ ಸಹಿಸಲಾರದೆ ಮುನಿರತ್ನ, ಕೊನೆಗೆ ಪತಿ ಕೊಲೆಗೆ ನಿರ್ಧರಿಸಿದ್ದಳು. ಆಗ ಆಕೆಗೆ ಮಕ್ಕಳು ಹಾಗೂ ರಾಮಮೂರ್ತಿ ಸಾಥ್ ಕೊಟ್ಟಿದ್ದರು. ಅದರಂತೆ ಜು.26ರಂದು ತಡರಾತ್ರಿ ಗಲಾಟೆ ಮಾಡುತ್ತಿದ್ದ ಬಾಬುನ ಮೇಲೆ ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಂದಿದ್ದರು ಎಂದು ಮೂಲಗಳು ಹೇಳಿವೆ.
ಬಳಿಕ ಮೃತದೇಹವನ್ನು ಆಂಬ್ಯುಲೆನ್ಸ್ ಮೂಲಕ ಕೋಲಾರಕ್ಕೆ ಮೃತದೇಹವನ್ನು ಆರೋಪಿಗಳು ಸಾಗಿಸಿದರು. ಅಲ್ಲಿನ ಸ್ಮಶಾನದಲ್ಲಿ ತರಾತುರಿಯಲ್ಲಿ ಮೃತದೇಹವನ್ನು ಅಂತ್ಯಕ್ರಿಯೆ ಸಹ ನಡೆಸಿದರು. ಅಲ್ಲದೆ ಆಂಬ್ಯುಲೆನ್ಸ್ ಚಾಲಕನಿಗೆ ಪತಿ ಮೃತಪಟ್ಟಿರುವುದಾಗಿ ಸುಳ್ಳಿನ ಕಥೆಯನ್ನು ಮುನಿರತ್ನ ಹೇಳಿದ್ದಳು.
ಮಗಳು ಹೇಳಿದ ಸತ್ಯ
ಬಾಬು ಹತ್ಯೆ ಬಳಿಕ ಮೂವರು ನಿಶ್ಚಿಂತೆಯಿಂದ ಇದ್ದರು. ಆದರೆ ಬಾಬು ದಿಢೀರ್ ನಾಪತ್ತೆ ಬಗ್ಗೆ ನೆರೆಹೊರೆಯವರಲ್ಲಿ ಶಂಕೆ ಮೂಡಿತ್ತು. ಆಗ ತನ್ನ ಚಿಕ್ಕಪ್ಪ ರಾಘವೇಂದ್ರ ಅವರಿಗೆ ಕರೆ ಮಾಡಿ ತಂದೆಯನ್ನು ಅಮ್ಮ ಹಾಗೂ ರಾಮಮೂರ್ತಿ ಕೊಂದಿರಬಹುದು ಎಂದು ಮೃತನ ಎರಡನೇ ಮಗಳು ಹೇಳಿದ್ದಳು. ತಕ್ಷಣವೇ ಕಾಡುಗೋಡಿ ಪೊಲೀಸ್ ಠಾಣೆಗೆ ತೆರಳಿ ಮೃತನ ಸೋದರ ದೂರು ನೀಡಿದರು. ಆಗ ಶಂಕೆ ಮೇರೆಗೆ ಮುನಿರತ್ನ ಹಾಗೂ ರಾಮಮೂರ್ತಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಸತ್ಯ ಬಯಲಾಗಿದೆ ಎಂದು ತಿಳಿದು ಬಂದಿದೆ.