ಸಾರಾಂಶ
ಬೆಂಗಳೂರು : ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಬೇಸತ್ತು ತನ್ನ ಮಗುವನ್ನು ಕೊಂದು ಬಳಿಕ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಿಗಳರಪಾಳ್ಯದ ಒಂದು ವರ್ಷ ಎಂಟು ತಿಂಗಳ ಪುತ್ರಿ ಚಾರ್ವಿ ಮೃತ ದುರ್ದೈವಿ. ವಿಷ ಸೇವಿಸಿದ್ದ ಚಂದ್ರಿಕಾ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಮನೆಯಲ್ಲಿ ಪತಿ ಕೆಲಸಕ್ಕೆ ತೆರಳಿದ ಬಳಿಕ ಬುಧವಾರ ಮಗುವಿಗೆ ಇಲಿ ಪಾಷಾಣ ಬೆರೆಸಿದ ಚಹಾ ಕುಡಿಸಿ ಬಳಿಕ ತಾನೂ ಸಹ ಸೇವಿಸಿದ್ದಾಳೆ. ನಂತರ ತನ್ನ ಗಂಡನಿಗೆ ಆತ್ಮಹತ್ಯೆ ವಿಷಯವನ್ನು ಚಂದ್ರಿಕಾ ತಿಳಿಸಿದ್ದಾಳೆ. ತಕ್ಷಣ ಆತಂಕದಿಂದ ಮನೆಗೆ ಧಾವಿಸಿದ ಮೃತಳ ಪತಿ, ವಿಷ ಸೇವಿಸಿದ್ದ ಪತ್ನಿ ಹಾಗೂ ಮಗುವನ್ನು ಮಲ್ಲೇಶ್ವರ ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಮಗುವನ್ನು ವಾಣಿ ವಿಲಾಸ ಆಸ್ಪತ್ರೆಗೆ ಹಾಗೂ ಚಂದ್ರಿಕಾಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಿದರು. ಆದರೆ ಚಿಕಿತ್ಸೆ ಫಲಿಸದೆ ಮಗು ಸಾವನ್ನಪ್ಪಿದೆ. ಚಂದ್ರಿಕಾ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತುಮಕೂರು ಜಿಲ್ಲೆಯ ಕೊರಟೆಗೆರೆ ತಾಲೂಕಿನ ತೋವಿನಿಕೆರೆಯ ಚಿಕ್ಕನಹಳ್ಳಿಯ ಚಂದ್ರಿಕಾ ಹಾಗೂ ಲೋಕೇಶ್ ವಿವಾಹವಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ನಗರದಲ್ಲಿ ಗಾರ್ಮೆಂಟ್ಸ್ ಕೆಲಸ ಮಾಡುತ್ತಿದ್ದ ಲೋಕೇಶ್, ತಿಗಳರಪಾಳ್ಯದಲ್ಲಿ ತನ್ನ ಕುಟುಂಬದ ಜತೆ ವಾಸವಾಗಿದ್ದಾರೆ. ತನ್ನ ಇಬ್ಬರು ಮಕ್ಕಳ ಪೈಕಿ ಮಗನನ್ನು ತವರು ಮನೆಯಲ್ಲೇ ಚಂದ್ರಿಕಾ ಬಿಟ್ಟಿದ್ದಳು.
ಚಹಾದಲ್ಲಿ ವಿಷ ಬೆರೆಸಿ ಸೇವನೆ:
ಇತ್ತೀಚೆಗೆ ಹಣಕಾಸು ಹಾಗೂ ಕೌಟುಂಬಿಕ ವಿಷಯವಾಗಿ ದಂಪತಿ ಮಧ್ಯೆ ಮನಸ್ತಾಪವಾಗಿತ್ತು. ಇದೇ ವಿಚಾರವಾಗಿ ಆಗಾಗ್ಗೆ ಮನೆಯಲ್ಲಿ ಸತಿ-ಪತಿ ಜಗಳವಾಡುತ್ತಿದ್ದರು. ಅಂತೆಯೇ ಮಂಗಳವಾರ ರಾತ್ರಿ ಸಹ ಜಗಳವಾಗಿದೆ. ಇದರಿಂದ ಬೇಸತ್ತ ಚಂದ್ರಿಕಾ, ಮರುದಿನ ತನ್ನ ಪತಿ ಕೆಲಸಕ್ಕೆ ತೆರಳಿದ ಮೇಲೆ ಮಗಳಿಗೆ ಚಹಾದಲ್ಲಿ ಇಲಿ ಪಾಷಾಣ ಮಿಶ್ರಣ ಮಾಡಿ ಕುಡಿಸಿ ಬಳಿಕ ಚಂದ್ರಿಕಾ ಸೇವಿಸಿದ್ದಾಳೆ.
ನಂತರ ಪತಿಗೆ ಕರೆ ಮಾಡಿ ತುರ್ತಾಗಿ ಮನೆಗೆ ಬರುವಂತೆ ಹೇಳಿದ್ದಾಳೆ. ತಕ್ಷಣವೇ ಆತಂಕದಿಂದ ಮನೆಗೆ ಪತಿ ಬಂದಾಗ ವಿಷ ಸೇವನೆಯಿಂದ ವಾಂತಿಯಾಗಿ ಚಂದ್ರಿಕಾ ನಿತ್ರಾಣಳಾಗಿದ್ದಳು. ಬಳಿಕ ಪತ್ನಿ ಹಾಗೂ ಮಗಳ ರಕ್ಷಣೆಗೆ ಲೋಕೇಶ್ ಮುಂದಾಗಿದ್ದಾನೆ. ಅಲ್ಲಿಂದ ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆಗೆ ಪತ್ನಿ ಹಾಗೂ ಮಗಳನ್ನು ಕರೆತಂದು ಆತ ದಾಖಲಿಸಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.