ರಸ್ತೆ ದಾಟುವಾಗ ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್ ಡಿಕ್ಕಿಯಾಗಿ ವೃದ್ಧೆಯೊಬ್ಬರು ಮೃತಪಟ್ಟಿರುವ ಘಟನೆ ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

 ಬೆಂಗಳೂರು : ರಸ್ತೆ ದಾಟುವಾಗ ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್ ಡಿಕ್ಕಿಯಾಗಿ ವೃದ್ಧೆಯೊಬ್ಬರು ಮೃತಪಟ್ಟಿರುವ ಘಟನೆ ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಾಮಮೂರ್ತಿ ನಗರದ ಜಯಲಕ್ಷ್ಮೀ (65) ಮೃತ ದುರ್ದೈವಿ. ಜಯನಗರದ 9ನೇ ಹಂತದಲ್ಲಿ ಮಗಳ ಮನೆಗೆ ಬಂದು ಬುಧವಾರ ಅವರು ಮನೆಗೆ ಮರಳುವಾಗ ಈ ಘಟನೆ ನಡೆದಿದೆ. ಬಿಎಂಟಿಸಿ ಚಾಲಕ ಚೇತನ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಮಮೂರ್ತಿನಗರದಲ್ಲಿ ತಮ್ಮ ಕುಟುಂಬದ ಜತೆ ಜಯಲಕ್ಷ್ಮೀ ವಾಸವಾಗಿದ್ದರು. ಮನೆಗೆ ಮರಳಲು ಸಿಲ್ಕ್ ಬೋರ್ಡ್ ಜಂಕ್ಷನ್‌ನ ಬಸ್ ನಿಲ್ದಾಣಕ್ಕೆ ಅವರು ತೆರಳುತ್ತಿದ್ದರು. ಆಗ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಮತ್ತೊಂದು ಅಪಘಾತ: ಚಾಮರಾಜಪೇಟೆಯಲ್ಲಿ ನಡೆದ ಮತ್ತೊಂದು ಅಪಘಾತದಲ್ಲಿ ಬಿಎಂಟಿಸಿ ಬಸ್‌ ಡಿಕ್ಕಿಯಾಗಿ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.

ಚಾಮರಾಜಪೇಟೆಯ ನಿವಾಸಿ ಭಾರತಿ ಪುತ್ರ ಧ್ಯಾನ್‌ (10) ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಬಾಲಕ ಚಿಕಿತ್ಸೆ ಪಡೆಯುತ್ತಿದ್ದಾನೆ. ಉಮಾ ಚಿತ್ರಮಂದಿರದ ಬಳಿ ತಾಯಿ-ಮಗ ತೆರಳುತ್ತಿದ್ದ ಸ್ಕೂಟರ್‌ಗೆ ಬುಧವಾರ ಸಂಜೆ ಬಿಎಂಟಿಸಿ ಬಸ್‌ ಡಿಕ್ಕಿಯಾಗಿದೆ. ಆಗ ಕೆಳಗೆ ಬಿದ್ದ ಬಾಲಕನ ಮೇಲೆ ಬಸ್ಸಿನ ಚಕ್ರಗಳು ಹರಿದಿವೆ ಎಂದು ಪೊಲೀಸರು ತಿಳಿಸಿದ್ದಾರೆ. ವಿ.ವಿ. ಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.