ಚಾಲಕನ ಬದಲು ಕಂಡಕ್ಟರ್‌ ಓಡಿಸಿದ ಬಿಎಂಟಿಸಿ ಬಸ್ಸಿಗೆ ಮಹಿಳೆ ಬಲಿ

| N/A | Published : Jul 19 2025, 02:00 AM IST / Updated: Jul 19 2025, 08:12 AM IST

ಸಾರಾಂಶ

ಚಾಲಕನ ಬದಲು ನಿರ್ವಾಹಕ ಬಸ್‌ ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿದ ಬಿಎಂಟಿಸಿ ಬಸ್‌ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಹರಿದ ಪರಿಣಾಮ ಒಬ್ಬ ಮಹಿಳೆ ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಪೀಣ್ಯ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

 ಬೆಂಗಳೂರು : ಚಾಲಕನ ಬದಲು ನಿರ್ವಾಹಕ ಬಸ್‌ ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿದ ಬಿಎಂಟಿಸಿ ಬಸ್‌ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಹರಿದ ಪರಿಣಾಮ ಒಬ್ಬ ಮಹಿಳೆ ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಪೀಣ್ಯ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸುಂಕದಕಟ್ಟೆ ನಿವಾಸಿ ಸುಮಾ (25) ಮೃತ ದುರ್ದೈವಿ. ಈ ಘಟನೆಯಲ್ಲಿ ಮೃತಳ ಸ್ನೇಹಿತೆ ಸಲ್ಮಾ ಸುಲ್ತಾಳ ಸೇರಿ ಮೂವರು ಗಾಯಗೊಂಡಿದ್ದು, ಈ ಪೈಕಿ ಸಲ್ಮಾನ ಅವರಿಗೆ ಕಾಲಿಗೆ ತೀವ್ರವಾಗಿ ಪೆಟ್ಟಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ರಸ್ತೆ ಬದಿಯ ಹೋಟೆಲ್‌ಗೆ ಹಾನಿಯಾಗಿದೆ.

ಈ ಘಟನೆ ಸಂಬಂಧ ಬಿಎಂಟಿಸಿ ಬಸ್ ನಿರ್ವಾಹಕ ರಮೇಶ್‌ ಎಂಬಾತನನ್ನು ಪೀಣ್ಯ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಘಟನೆ ವಿವರ:

ಮೆಜೆಸ್ಟಿಕ್‌ನಿಂದ ಬೆಳಗ್ಗೆ ಪೀಣ್ಯ 2ನೇ ಹಂತದ ಬಿಎಂಟಿಸಿ ಬಸ್‌ ನಿಲ್ದಾಣಕ್ಕೆ ಎಲೆಕ್ಟ್ರಿಕ್ ಬಸ್ ಓಡಿಸಿಕೊಂಡು ಬಂದು ಚಾಲಕ ದಿಲೀಪ್ ನಿಲ್ಲಿಸಿ ಶೌಚಾಲಯಕ್ಕೆ ತೆರಳಿದ್ದರು. ಆ ವೇಳೆ ರಸ್ತೆ ಬದಿ ಬಸ್ ನಿಲ್ಲಿಸಿದ್ದರಿಂದ ಇತರೆ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿತ್ತು. ಇದನ್ನು ಗಮನಿಸಿದ ಬಸ್ ನಿರ್ವಾಹಕ ರಮೇಶ್‌ ತಮ್ಮ ಬಸ್ಸನ್ನು ಪಕ್ಕಕ್ಕೆ ನಿಲ್ಲಿಸಲು ಮುಂದಾಗಿದ್ದಾರೆ. ಆಗ ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿದ ಬಸ್‌ ಪಾದಚಾರಿ ಮಾರ್ಗದಲ್ಲಿ ನಡೆದು ಹೋಗುತ್ತಿದ್ದ ಸುಮಾ, ಆಕೆಯ ಸ್ನೇಹಿತೆ ಸಲ್ಮಾ ಸೇರಿ ಮೂವರಿಗೆ ಗುದ್ದಿದೆ. ಮುಂದುವರಿದು ತಳ್ಳುವ ಗಾಡಿ ಹೋಟೆಲ್‌ಗೆ ಗುದ್ದಿ ಮರಕ್ಕೆ ಅಪ್ಪಳಿಸಿದೆ.

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಗಾಯಾಳುಗಳನ್ನು ಸಾರ್ವಜನಿಕರು ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಸುಮಾ ಮೃತಪಟ್ಟಿದ್ದಾರೆ. ಗಾಯಾಳುಗಳ ಪೈಕಿ ಸಲ್ಮಾ ಹೊರತುಪಡಿಸಿ ಇನ್ನುಳಿದವರು ಸಣ್ಣಪುಟ್ಟ ಗಾಯವಾಗಿದ್ದರಿಂದ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಪಾದಚಾರಿ ಮಾರ್ಗದಲ್ಲಿದ್ದ ಹೋಟೆಲ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕೂಡಲೇ ಬಸ್ ಚಲಾಯಿಸಿದ ನಿರ್ವಾಹಕ ರಮೇಶ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ನೇಹಿತೆ ಜತೆ ಹೋಗಲು ಬಂದಿದ್ಲು:

ಮಂಡ್ಯ ಜಿಲ್ಲೆಯ ಸುಮಾ, ಹೆಬ್ಬಾಳ ಸಮೀಪದ ಖಾಸಗಿ ಬ್ಯಾಂಕ್‌ನಲ್ಲಿ ಉದ್ಯೋಗದಲ್ಲಿದ್ದರು. ಪ್ರತಿ ದಿನ ಸುಂಕದಟ್ಟೆಯ ತಮ್ಮ ಮನೆಯಿಂದ ಪೀಣ್ಯ 2ನೇ ಹಂತಕ್ಕೆ ಬಂದು ಅಲ್ಲಿಂದ ಸ್ನೇಹಿತೆ ಸಲ್ಮಾ ಜತೆ ಕೆಲಸಕ್ಕೆ ಅವರು ಹೋಗುತ್ತಿದ್ದರು. ಶುಕ್ರವಾರ ಸಹ ಬಂದಾಗ ಅವರ ಪಾಲಿಗೆ ಬಿಎಂಟಿಸಿ ಬಸ್ ಜವರಾಯನಾಗಿ ಪರಿಣಮಿಸಿದೆ.

ನುರಿತ ಚಾಲಕ ದುರಂತ:

ಬಿಎಂಟಿಸಿ ಸಂಸ್ಥೆಯಲ್ಲಿ ಚಾಲಕ ಕಮ್‌ ನಿರ್ವಾಹಕನಾಗಿ ರಮೇಶ್ ಕೆಲಸ ಮಾಡುತ್ತಿದ್ದ. ಆದರೆ ಆತನಿಗೆ ಎಲೆಕ್ಟ್ರಿಕ್ ಬಸ್ ಚಲಾಯಿಸಿದ ಅನುಭವಿರಲಿಲ್ಲ. ಹೀಗಾಗಿಯೇ ಈ ಅಪಘಾತ ನಡೆದಿದೆ ಎಂದು ಮೂಲಗಳು ಹೇಳಿವೆ.

Read more Articles on