ನಿಶ್ಚಿತಾರ್ಥ ಆಗಿದ್ದ ಯುವತಿ ಆತ್ಮಹತ್ಯೆ;ಮಾಜಿ ಪ್ರಿಯತಮನ ಕಾಟದಿಂದ ನೇಣು!

| Published : Feb 23 2024, 01:47 AM IST

ಸಾರಾಂಶ

ಪಕ್ಕದ ಮನೆಯ ಹುಡುಗನ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದ ಹದಿಹರೆಯದ ಯುವತಿಯೊಬ್ಬಳು ಪ್ರೀತಿಸಿದ ಯುವಕನ ಕಿರುಕುಳಕ್ಕೆ ಒಳಗಾಗಿ ನೇಣಿಗೆ ಶರಣಾದ ಘಟನೆ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು ದಕ್ಷಿಣ

ಪಕ್ಕದ ಮನೆಯ ಹುಡುಗನ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದ ಹದಿಹರೆಯದ ಯುವತಿಯೊಬ್ಬಳು ಪ್ರೀತಿಸಿದ ಯುವಕನ ಕಿರುಕುಳಕ್ಕೆ ಒಳಗಾಗಿ ನೇಣಿಗೆ ಶರಣಾದ ಘಟನೆ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಗೊಟ್ಟಿಗೆರೆ ಗ್ರಾಮದಲ್ಲಿ ವಾಸವಿದ್ದ ಚಂದ್ರಕಲಾ (19) ನೇಣು ಬಿಗಿದುಕೊಂಡ ಯುವತಿ. ಪಿಯುಸಿ ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲಿಯೇ ಇದ್ದ ಮೃತಳು, ಪಕ್ಕದ ಮನೆಯ ಅರುಣ್ ಕುಮಾರ್ ಎಂಬಾತನ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದಳು. ಹುಡುಗಿಯ ಮನೆಯವರಿಗೆ ಪ್ರೀತಿಯ ವಿಷಯ ಗೊತ್ತಾಗಿ ಹುಡುಗಿಗೆ ಬುದ್ಧಿವಾದ ಹೇಳಿದ್ದರು.

ಜೈಲಿಗೆ ಹೋಗಿ ಬಂದಿರುವ ಹುಡುಗನ ವ್ಯಕ್ತಿತ್ವ ಸರಿ ಇಲ್ಲ, ಮದುವೆ ಆಗಬೇಡ ಎಂದು ಹುಡುಗಿಯ ಮನವೊಲಿಸಿ ಕನಕಪುರದ ಪರಿಚಿತರ ಸಂಬಂಧದಲ್ಲಿ ಹುಡುಗನನ್ನು ನೋಡಿ ಇತ್ತೀಚೆಗಷ್ಟೇ ಚಂದ್ರಕಲಾಗೆ ನಿಶ್ಚಿತಾರ್ಥ ಮಾಡಿದ್ದರು.

ಜಿಗಣೆ ಬಳಿಯ ನಂಜಾಪುರದ ನೆಂಟರ ಮನೆಗೆ ಹೋಗಿದ್ದ ಚಂದ್ರಕಲಾ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮಾಜಿ ಪ್ರಿಯಕರ ಅರುಣ್ ಕುಮಾರ್ ಬೇರೆ ಮದುವೆಯಾದರೆ ಕೊಲ್ಲುವುದಾಗಿ ನಮ್ಮ ಮಗಳಿಗೆ ಬೆದರಿಕೆ ಹಾಕುತ್ತಿದ್ದ, ಮಗಳ ಸಾವಿಗೆ ಆತನೇ ಕಾರಣವೆಂದು ಪೊಲೀಸ್ ಠಾಣೆಯಲ್ಲಿ ದೂರು ಹುಡುಗಿಯ ಮನೆಯವರು ನೀಡಿದ್ದಾರೆ. ಜಿಗಣೆ ಮತ್ತು ಕೋಣನಕುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.