ಬೆಂಗಳೂರಿನಲ್ಲಿ ಪ್ರಯಾಣಿಕರೊಬ್ಬರಿಗೆ ಚಾಕು ತೋರಿಸಿ ಆಟೋ ಚಾಲಕನಿಂದ ಮೊಬೈಲ್, ಹಣ ಸುಲಿಗೆ

| Published : Sep 21 2024, 01:50 AM IST / Updated: Sep 21 2024, 04:51 AM IST

arrest

ಸಾರಾಂಶ

ಬೆಂಗಳೂರಿನಲ್ಲಿ ಪ್ರಯಾಣಿಕರೊಬ್ಬರಿಗೆ ಚಾಕು ತೋರಿಸಿ ಬೆದರಿಸಿ, ಮೊಬೈಲ್, ಹಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಸುಲಿಗೆ ಮಾಡಿದ್ದ ಆಟೋ ಚಾಲಕ ಮತ್ತು ಆತನ ಸಹಚರನನ್ನು ಗೋವಿಂದರಾಜನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ಪ್ರಯಾಣಿಕನಿಗೆ ಚಾಕು ತೋರಿಸಿ ಬೆದರಿಸಿ, ಮೊಬೈಲ್‌, ನಗದು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಸುಲಿಗೆ ಮಾಡಿದ್ದ ಆಟೋ ಚಾಲಕ ಸೇರಿ ಇಬ್ಬರನ್ನು ಗೋವಿಂದರಾಜನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶ್ರೀನಿವಾಸನಗರದ ರಾಜಕುಮಾರ್‌ ಸಮಾಧಿ ಸಮೀಪದ ಮಂಟೇಪ್ಪ(52) ಮತ್ತು ನಂದಿನಿ ಲೇಔಟ್‌ ಜೈಮಾರುತಿ ನಗರ ನಿವಾಸಿ ಶಿವಕುಮಾರ್‌(32) ಬಂಧಿತರು. ಆರೋಪಿಗಳಿಂದ ರೆಡ್‌ ಮೀ ಮೊಬೈಲ್‌, ₹500 ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಆಟೋರಿಕ್ಷಾ ಜಪ್ತಿ ಮಾಡಲಾಗಿದೆ.

ಆರೋಪಿಗಳು ಸೆ.19ರಂದು ಮುಂಜಾನೆ ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆ ಶಿವನಹಳ್ಳಿ ನಿವಾಸಿ ರಾಮಕೃಷ್ಣಯ್ಯ(66) ಎಂಬುವವರನ್ನು ಆಟೋ ಹತ್ತಿಸಿಕೊಂಡು ಬಳಿಕ ನಗರದ ವಿವಿಧೆಡೆ ಸುತ್ತಾಡಿಸಿ ಚಾಕು ತೋರಿಸಿ ಬೆದರಿಸಿ ಮೊಬೈಲ್‌ ಹಾಗೂ ನಗದು ಹಣ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ದೂರು ದಾಖಲಾದ ಎರಡು ತಾಸಿನೊಳಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಟೋ ಹತ್ತಿಸಿಕೊಂಡು ಬೆದರಿಕೆ:

ದೂರುದಾರ ರಾಮಕೃಷ್ಣಯ್ಯ ಅವರು ಸೆ.18ರಂದು ರಾತ್ರಿ ಸುಮಾರು 11ಕ್ಕೆ ರಾಜಾಜಿನಗರದ ನವರಂಗ ಚಿತ್ರ ಮಂದಿರದ ಹತ್ತಿರ ಮಂಟೇಪ್ಪನ ಆಟೋ ಹತ್ತಿದ್ದಾರೆ. ಈ ವೇಳೆ ಆಟೋ ಚಾಲಕ ಮಂಟೇಪ್ಪ ಹಾಗೂ ಆತನ ಸ್ನೇಹಿತ ಶಿವಕುಮಾರ್‌, ಮಾರ್ಗ ಮಧ್ಯೆ ರಾಮಕೃಷ್ಣಯ್ಯಗೆ ಚಾಕು ತೋರಿ ಬೆದರಿಸಿ ವಿವಿಧೆಡೆ ಸುತ್ತಾಡಿಸಿದ್ದಾರೆ.

ಬಳಿಕ ಮುಂಜಾನೆ ಸುಮಾರು 1.30ಕ್ಕೆ ಗೋವಿಂದರಾಜನಗರದ ಎಂ.ಸಿ.ಲೆಔಟ್‌ನ ಕ್ಯೂಟಿಸ್‌ ಆಸ್ಪತ್ರೆ ಬಳಿ ಕರೆತಂದು ರಾಮಕೃಷ್ಣಯ್ಯ ಅವರ ಬಳಿ ಮೊಬೈಲ್‌ ಹಾಗೂ ₹900 ನಗದು ಕಿತ್ತುಕೊಂಡಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದರೆ, ಜೈಲಿನಿಂದ ಹೊರ ಬಂದ ಬಳಿಕ ನಿನ್ನ ಸಾಯಿಸುವುದಾಗಿ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ. ಬಳಿಕ ರಾಮಕೃಷ್ಣಯ್ಯ ಅವರು ಗೋವಿಂದರಾಜನಗರ ಠಾಣೆಗೆ ಬಂದು ದೂರು ನೀಡಿದ್ದರು.

ಆಟೋ ಸಹಿತ ಸಿಕ್ಕಿಬಿದ್ದರು

ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು, ಆಟೋರಿಕ್ಷಾ ನೋಂದಣಿ ಸಂಖ್ಯೆ ಪತ್ತೆಹಚ್ಚಿ ಬಳಿಕ ಆಟೋರಿಕ್ಷಾ ಮಾಲೀಕನ ಪತ್ತೆ ಮಾಡಿದ್ದಾರೆ. ಆತ ನೀಡಿದ ಮಾಹಿತಿ ಮೇರೆಗೆ ಆಟೋ ಚಾಲಕ ಮಂಟೇಪ್ಪ ಅವರ ಮನೆಯ ಬಳಿ ತೆರಳಿದ್ದಾರೆ. ಈ ವೇಳೆ ಮಂಟೆಪ್ಪ ಮನೆಯಲ್ಲಿ ಇರಲಿಲ್ಲ. ಬಳಿಕ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದು, ಮುಂಜಾನೆ ಸುಮಾರು 4 ಗಂಟೆಗೆ ನಂದಿನಿ ಲೇಔಟ್‌ನ ಜೈ ಮಾರುತಿನಗರದ ಬಳಿ ಆಟೋರಿಕ್ಷಾ ಪತ್ತೆಯಾಗಿದ್ದು, ಆಟೋದಲ್ಲೇ ಇದ್ದ ಇಬ್ಬರು ಆರೋಪಿಗಳನ್ನು ಮಾಲು ಸಹಿತ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.