ಸಾರಾಂಶ
ಬೆಂಗಳೂರು : ನಕಲಿ ಕಂಪನಿಗಳ ಕಾರ್ಮಿಕರ ಹೆಸರಿನಲ್ಲಿ ಎಂಪ್ಲೈಯಿಸ್ ಸ್ಟೇಟ್ ಇನ್ಸೂರೆನ್ಸ್ ಕಾರ್ಪೋರೆಷನ್ (ಇಎಸ್‌ಐ) ಇ-ಪೆಹಚಾನ್ ಕಾರ್ಡ್ ಜಾಲವನ್ನು ಪತ್ತೆ ಹಚ್ಚಿರುವ ಸಿಸಿಬಿ, ಈ ಸಂಬಂಧ ರಾಜಾಜಿನಗರದ ಇಎಸ್‌ಐ ಆಸ್ಪತ್ರೆ ಸೆಕ್ಯೂರಿಟಿ ಗಾರ್ಡ್ ಸೇರಿ ಮೂವರನ್ನು ಬಂಧಿಸಿದೆ. ಆರೋಪಿಗಳಾದ ಪ್ರಕಾಶನಗರದ ನಿವಾಸಿ ವಿ.ಶ್ರೀಧರ್, ರಮೇಶ್, ಶಿವಗಂಗ ಅವರಿಂದ ನಕಲಿ ಇಎಸ್ಐ ಪೆಹಚಾನ್ ಕಾರ್ಡ್‌ಗಳನ್ನು ಜಪ್ತಿ ಮಾಡಲಾಗಿದೆ. ಶ್ವೇತಾ ಹಾಗೂ ಶಶಿಕಲಾ ಸೇರಿ ಇನ್ನಿತರ ಆರೋಪಿಗಳ ಪತ್ತೆಗೆ ತನಿಖೆ ನಡೆದಿದೆ.
ವಂಚನೆ ಬಯಲಾಗಿದ್ದು ಹೇಗೆ?
ರಾಜಾಜಿನಗರದ ಇಎಸ್‌ಐಸಿ ಆಸ್ಪತ್ರೆ ಬಳಿ ನಕಲಿ ಕಂಪನಿಗಳನ್ನು ಸೃಷ್ಟಿಸಿ ಕಾರ್ಮಿಕರ ಹೆಸರಿನಲ್ಲಿ ಇ-ಪೆಹಚಾನ್ ಸ್ಮಾರ್ಟ್ ವಿತರಣೆ ಮಾಡುತ್ತಿರುವ ಬಗ್ಗೆ ಭಾತ್ಮಿದಾರರಿಂದ ದೊರೆತ ಮಾಹಿತಿ ಮೇರೆಗೆ ರಾಜಾಜಿನಗರದ ಇಎಸ್‌ಐ ಆಸ್ಪತ್ರೆಗೆ ಇನ್ಸ್‌ಪೆಕ್ಟರ್ ಸಿ.ಮಹದೇವಯ್ಯ ನೇತೃತ್ವದ ತಂಡ ಮಫ್ತಿಯಲ್ಲಿ ರೋಗಿಗಳಂತೆ ತೆರಳಿತು. ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ವಿ,ಶ್ರೀಧರ್‌ನನ್ನು ಸಂಪರ್ಕಿಸಿ ಇಎಸ್‌ಐ ಕಾರ್ಡ್ ಮಾಡಿಕೊಡಲು ಹಣಕ್ಕೆ ಆತ ಬೇಡಿಕೆ ಇಟ್ಟ. ಈ ಮಾತಿಗೆ ಪೊಲೀಸರು ಒಪ್ಪಿದರು. ಮರು ದಿನವೇ ನಕಲಿ ಕಾರ್ಡ್ ಸೃಷ್ಟಿಸಿದ ಶ್ರೀಧರ್, ಆ ಕಾರ್ಡ್ ನೀಡಲು ಬಂದಾಗ ಸಿಸಿಬಿ ಬಲೆಗೆ ಬಿದ್ದಿದ್ದಾನೆ.
ವಂಚನೆ ಹೇಗೆ?:
ದೇವು ಮಾರ್ಕೆಟಿಂಗ್, ಭಾಸ್ಕರ್ ಎಂಟರ್ ಪ್ರೈಸಸ್, ವಿಪಿ ಶ್ರೀ ಎಂಟರ್ ಪ್ರೈಸಸ್ ಹಾಗೂ ಗೌರಿ ಮಾರ್ಕೆಟಿಂಗ್ ಸೇರಿ ಇತರೆ ನಕಲಿ ಕಂಪನಿಗಳನ್ನು ಹೆಸರಿನಲ್ಲಿ ಇಎಸ್ಐ ಕಾರ್ಡ್‌ಗಳನ್ನು ಶ್ರೀಧರ್ ತಂಡ ಸೃಷ್ಟಿಸುತ್ತಿತ್ತು. ಈ ಕಾರ್ಡ್‌ಗೆ ₹10 ಸಾವಿರ ದಿಂದ ₹2 ಲಕ್ಷದ ವರೆಗೆ ಆರೋಪಿಗಳು ಮಾರಾಟ ಮಾಡಿದ್ದು, ಕೇಂದ್ರ ಸರ್ಕಾರಕ್ಕೆ ಚಿಕಿತ್ಸಾ ವೆಚ್ಚದ ಶುಲ್ಕದ ನೆಪದಲ್ಲಿ ಮಾಸಿಕ ₹500 ಹಣವನ್ನು ಆರೋಪಿಗಳು ವಸೂಲಿ ಮಾಡಿದ್ದರು.
ಹಲವು ವರ್ಷಗಳಿಂದ ಇಎಸ್‌ಐ ಆಸ್ಪತ್ರೆಯಲ್ಲಿ ಶ್ರೀಧರ್ ಸೆಕ್ಯುರಿಟಿ ಗಾರ್ಡ್ ಆಗಿದ್ದು, ತನ್ನ ಕುಟುಂಬ ಜತೆ ಪ್ರಕಾಶ್ ನಗರದಲ್ಲಿ ನೆಲೆಸಿದ್ದ. ಇ-ಪೆಹಚಾನ್ ಕಾರ್ಡ್ ಪಡೆದ ರೋಗಿಗಳಿಗೆ ಆಸ್ಪತ್ರೆಯಲ್ಲಿ ಬೆಡ್ ಕೊಡಿಸುವುದು ಮತ್ತು ಔಷಧ ಕೊಡಿಸುವ ಜವಾಬ್ದಾರಿಯನ್ನು ಆತ ಮಾಡುತ್ತಿದ್ದ. ಇಎಸ್‌ಐ ಆಸ್ಪತ್ರೆಯಲ್ಲಿ ಮಾನ್ಯತೆ ಪಡೆದಿರುವ ಅಸಲಿ ಕಂಪನಿಗಳ ಕಾರ್ಮಿಕರಿಗೆ ಸಿಗಬೇಕಾದ ಆರೋಗ್ಯ ಸೇವೆಯನ್ನು ಬೇರೆ ವ್ಯಕ್ತಿಗಳಿಗೆ ಆತ ಕೊಡಿಸಿ ಹಣ ಸಂಪಾದಿಸುತ್ತಿದ್ದ. ಆತನಿಂದ 16 ಇಎಸ್‌ಐ ಕಾರ್ಡ್‌ಗಳನ್ನು ಜಪ್ತಿ ಮಾಡಲಾಗಿದೆ.
ಕೊರೋನಾ ಕಾಲದಿಂದ ದಂಧೆ ಶುರು
ಕೊರೋನಾ ವೇಳೆಯಿಂದಲೂ ಸರ್ಕಾರದ ಆರೋಗ್ಯ ಯೋಜನೆಯನ್ನು ದುರ್ಬಳಕೆ ಮಾಡಿಕೊಂಡು ಹಣ ಸಂಪಾದಿಸುವ ದಂಧೆಯನ್ನು ಶ್ರೀಧರ್ ತಂಡ ಆರಂಭಿಸಿತ್ತು. ನಕಲಿ ಕಂಪನಿಗಳ ಹೆಸರಿನಲ್ಲಿ ದಾಖಲೆ ಸೃಷ್ಟಿಸಿ ನೈಜ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯವನ್ನು ಅನ್ಯರಿಗೆ ಆರೋಪಿಗಳು ಮಾರುತ್ತಿದ್ದರು. ಕೊರೋನಾ ಬಳಿಕ ದಂಧೆ ಅಲ್ಪ ವಿರಾಮ ಹಾಕಿದ್ದ ಆರೋಪಿಗಳು, ಬಳಿಕ ಮತ್ತೆ ಶುರು ಮಾಡಿದ್ದರು. ಕಳೆದ 2 ವರ್ಷಗಳಿಂದ ಯಶವಂತಪುರದ ದಿವಾನರಪಾಳ್ಯದಲ್ಲಿ ಆಡಿಟರ್ ಕಚೇರಿಯಲ್ಲಿ ನೌಕರೆ ಶಶಿಕಲಾ ಈ ದಂಧೆಯಲ್ಲಿ ತೊಡಗಿದ್ದರು. ಇ-ಪೆಹಚಾನ್ ಕಾರ್ಡ್ ಸೌಲಭ್ಯದ ಬಗ್ಗೆ ಮಾಹಿತಿ ಇದ್ದ ಆಕೆ, ಸರ್ಕಾರಿ ಸೌಲಭ್ಯಗಳ ಹೇಗೆ ದುರ್ಬಳಕೆ ಮಾಡಿಕೊಳ್ಳಬಹುದು ಎಂದು ರೂಪುರೇಷೆ ಸಿದ್ಧಪಡಿಸಿದ್ದಳು.
ಹೇಗೆ ಸಂಪರ್ಕ
ಇಎಸ್‌ಐ ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ರೋಗಿಗಳಿಗೆ ಶ್ರೀಧರ್ ತಂಡ ಗಾಳ ಹಾಕುತ್ತಿತ್ತು. ತಮಗೆ ಇಂತಿಷ್ಟು ಹಣ ನೀಡಿದರೆ ಇಎಸ್‌ಐ ಕಾರ್ಡ್ ಮಾಡಿಕೊಡುವುದಾಗಿ ನಂಬಿಸಿ ಹಣ ಪಡೆಯುತ್ತಿದ್ದರು.
ಏನಿದು ಇ-ಪೆಹಚಾನ್ ಸ್ಮಾರ್ಟ್ ಸೌಲಭ್ಯ
ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ₹21 ಸಾವಿರ ವೇತನಕ್ಕಿಂತ ಕಡಿಮೆ ಸಂಬಳ ಹೊಂದಿರುವ ನೌಕರರಿಗೆ ಉಚಿತ ಆರೋಗ್ಯ ಸೇವೆ ಕಲ್ಪಿಸಲು ಸರ್ಕಾರವು ಇ-ಪೆಹಚಾನ್ ಕಾರ್ಡ್ ವಿತರಿಸುತ್ತಿದೆ. ಈ ಕಾರ್ಡ್ ಬಳಸಿಕೊಂಡು ಇಎಸ್‌ಐ ಹಾಗೂ ಇಎಸ್‌ಐ ಒಪ್ಪಂದಿತ ಆಸ್ಪತ್ರೆಗಳಲ್ಲಿ ಕಾರ್ಮಿಕರು ಉಚಿತ ವೈದ್ಯಕೀಯ ಚಿಕಿತ್ಸೆ ಪಡೆಯಬಹುದಾಗಿದೆ. ಅನಾರೋಗ್ಯ ಸಂಬಂಧ ಆಸ್ಪತ್ರೆಗೆ ದಾಖಲಾದರೆ ಕಾರ್ಡ್ ನೊಂದಣಿ ಸಂಖ್ಯೆ ನೀಡಿದರೆ ಆ ಆಸ್ಪತ್ರೆ ಸಿಬ್ಬಂದಿ, ಆ ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಿ ಚಿಕಿತ್ಸೆ ವಿವರವನ್ನು ನೀಡುತ್ತಿದ್ದರು. ಅಲ್ಲದೆ ಕಾರ್ಡ್ ತೋರಿಸಿ ಔಷಧ ಸಹ ಪಡೆಯಬಹುದು. ಇದು ಆನ್‌ಲೈನ್ ಸೇವೆ ಹೊಂದಿದೆ.