ಯೂರಿಯಾ ಗೊಬ್ಬರಕ್ಕಾಗಿ ನಿಲ್ಲದ ರೈತರ ಪರದಾಟ

| N/A | Published : Jul 25 2025, 12:31 AM IST / Updated: Jul 25 2025, 08:20 AM IST

urea

ಸಾರಾಂಶ

ಯೂರಿಯಾ ಗೊಬ್ಬರಕ್ಕಾಗಿ ಗದಗ, ಧಾರವಾಡ, ವಿಜಯನಗರ ಜಿಲ್ಲೆಯ ಕೆಲವೆಡೆ ಗುರುವಾರವೂ ರೈತರು ಪರದಾಡಿದ್ದು, ಗೊಬ್ಬರ ಸಿಗದೇ ತೊಂದರೆಗೊಳಗಾದರು.

 ಹುಬ್ಬಳ್ಳಿ   :  ಯೂರಿಯಾ ಗೊಬ್ಬರಕ್ಕಾಗಿ ಗದಗ, ಧಾರವಾಡ, ವಿಜಯನಗರ ಜಿಲ್ಲೆಯ ಕೆಲವೆಡೆ ಗುರುವಾರವೂ ರೈತರು ಪರದಾಡಿದ್ದು, ಗೊಬ್ಬರ ಸಿಗದೇ ತೊಂದರೆಗೊಳಗಾದರು.

ಗದಗ ಗ್ರಾಮೀಣ, ಮುಳಗುಂದ, ಲಕ್ಷ್ಮೇಶ್ವರ, ಗಜೇಂದ್ರಗಡ, ನರಗುಂದ ತಾಲೂಕಿನಲ್ಲಿ ರೈತರು ಗೊಬ್ಬರದ ಅಂಗಡಿಗಳ ಮುಂದೆ ಸರದಿ ಸಾಲಿನಲ್ಲಿ ನಿಂತರೂ ಬೇಡಿಕೆಗೆ ಅನುಗುಣವಾಗಿ ಗೊಬ್ಬರ ದೊರೆಯಲಿಲ್ಲ.

ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ತೇವಾಂಶ ಹೆಚ್ಚಿ ಬೆಳೆಗಳಿಗೆ ಹಳದಿ ರೋಗ ಬಾಧಿಸುತ್ತಿದೆ. ರೋಗ ನಿಯಂತ್ರಣಕ್ಕೆ ರೈತರು ಯೂರಿಯಾ ಗೊಬ್ಬರ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಯೂರಿಯಾಕ್ಕೆ ಮುಗಿಬಿದ್ದಿದ್ದು, ಗಜೇಂದ್ರಗಡದಲ್ಲಿ ರೈತರು ರಸಗೊಬ್ಬರ ಅಂಗಡಿಗೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದ್ದಾರೆ. ರೋಣ ರಸ್ತೆಯ ಎಪಿಎಂಸಿ ಎದುರಿನ ರಸಗೊಬ್ಬರ ಅಂಗಡಿಯ ಮುಂದೆ ಬೆಳಗ್ಗೆಯಿಂದಲೇ ನೂರಕ್ಕೂ ಅಧಿಕ ರೈತರು ಯೂರಿಯಾ ಗೊಬ್ಬರಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದರು. ಈ ವೇಳೆ ಗೊಬ್ಬರಕ್ಕೆ ₹350 ಹಾಗೂ ಟಾನಿಕ್‌ಗೆ ₹500 ಕೊಡಬೇಕು ಎಂದು ಅಂಗಡಿಕಾರರು ಹೇಳಿದಾಗ ರೈತರ ವಾಗ್ವಾದ ನಡೆಸಿದರು. 100 ರೈತರಿಗೆ ಆಗುವಷ್ಟು ರಸಗೊಬ್ಬರ ಮಾತ್ರ ಇದೆ, ಮಧ್ಯಾಹ್ನದ ಬಳಿಕ ವಿತರಿಸುತ್ತೇವೆ ಎಂದಾಗ ರೈತರು ಅಂಗಡಿಗೆ ಬೀಗ ಹಾಕಲು ಮುಂದಾದರು. ಸ್ಥಳಕ್ಕಾಗಮಿಸಿದ ಪೊಲೀಸರು ರೈತರಿಗೆ ಚೀಟಿ ಕೊಡಿಸಿ, ಸುಗಮವಾಗಿ ಗೊಬ್ಬರ ವಿತರಣೆಗೆ ವ್ಯವಸ್ಥೆ ಮಾಡಿದರು.

ಮಳೆ ಲೆಕ್ಕಿಸದೆ ಸರತಿ ಸಾಲು : ಲಕ್ಷ್ಮೇಶ್ವರ ಪಟ್ಟಣದ 2 ಗೊಬ್ಬರ ಮಾರಾಟದ ಅಂಗಡಿಗಳಿಗೆ ಯೂರಿಯಾ ಬಂದಿದೆ ಎನ್ನುವ ಮಾಹಿತಿ ಸಿಕ್ಕ ರೈತರು ಬೆಳಗ್ಗೆಯೇ ಜಿಟಿ ಜಿಟಿ ಮಳೆ ಲೆಕ್ಕಿಸದೆ ಸರತಿ ಸಾಲಿನಲ್ಲಿ ಆಧಾರ್‌ ಕಾರ್ಡ್‌ ಹಿಡಿದು ಕಾಯುತ್ತಿದ್ದರು.

ಇತ್ತ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಹಲವಾಗಿಲು ಗ್ರಾಮದಲ್ಲಿ ಬುಧವಾರ ಅಧಿಕಾರಿಗಳಿಗೆ ದಿಗ್ಬಂಧನ ವಿಧಿಸಿ ಬೀಗ ಹಾಕಿ ಹೋರಾಟ ನಡೆಸಿದ್ದ ರೈತರು ಗುರುವಾರವೂ ಸಮರ್ಪಕವಾಗಿ ಯೂರಿಯಾ ಗೊಬ್ಬರ ಸಿಗದೇ ಕಂಗಾಲಾದರು. ಸಾಕಷ್ಟು ಗೊಬ್ಬರ ಪೂರೈಕೆ ಆಗದ ಹಿನ್ನೆಲೆಯಲ್ಲಿ ಕೆಲ ರೈತರಿಗೆ ತಲಾ 2 ಚೀಲದಂತೆ ಯೂರಿಯಾ ವಿತರಿಸಿ ಉಳಿದವರಿಗೆ ಟೋಕನ್‌ ನೀಡಿ ಶುಕ್ರವಾರ ವಿತರಿಸುವ ಭರವಸೆ ನೀಡಿದರು. ಧಾರವಾಡ ಜಿಲ್ಲೆಯಲ್ಲೂ ಗೊಬ್ಬರದ ಕೊರತೆ ಕಂಡು ಬಂದಿದೆ. ಕಲಘಟಗಿ, ನವಲಗುಂದ ತಾಲೂಕಿನಲ್ಲಿ ಅಗತ್ಯದಷ್ಟು ಗೊಬ್ಬರ ಪೂರೈಕೆಯಾಗದೇ ರೈತರು ಪರದಾಡಿದರು. ಅಧಿಕಾರಿಗಳು ಸಾಕಷ್ಟು ಪ್ರಮಾಣದಲ್ಲಿ ಗೊಬ್ಬರ ದಾಸ್ತಾನಿದೆ ಎಂದು ಹೇಳುತ್ತಿದ್ದರೂ ಪರದಾಟ ನಿಲ್ಲುತ್ತಿಲ್ಲ.

Read more Articles on