ಸಾರಿಗೆ ಬಸ್- ಕಾರಿನ ನಡುವೆ ಭೀಕರ ಅಪಘಾತ: ಕಾರು ಚಾಲಕ ಸ್ಥಳದಲ್ಲೇ ಸಾವು

| Published : Oct 25 2025, 01:00 AM IST

ಸಾರಿಗೆ ಬಸ್- ಕಾರಿನ ನಡುವೆ ಭೀಕರ ಅಪಘಾತ: ಕಾರು ಚಾಲಕ ಸ್ಥಳದಲ್ಲೇ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಸಾರಿಗೆ ಸಂಸ್ಥೆ ಬಸ್ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೆಂಗಳೂರು ಮೂಲದ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟು, ಓರ್ವ ವೃದ್ಧೆ, ಬಸ್ ಚಾಲಕ ಮತ್ತು ನಿರ್ವಾಹಕಿ ಸೇರಿದಂತೆ 18 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಮದ್ದೂರು ತಾಲೂಕಿನ ಕೆಸ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಮಾಚಹಳ್ಳಿ ಸಮೀಪ ಶುಕ್ರವಾರ ಮಧ್ಯಾಹ್ನ ಜರುಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಸಾರಿಗೆ ಸಂಸ್ಥೆ ಬಸ್ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೆಂಗಳೂರು ಮೂಲದ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟು, ಓರ್ವ ವೃದ್ಧೆ, ಬಸ್ ಚಾಲಕ ಮತ್ತು ನಿರ್ವಾಹಕಿ ಸೇರಿದಂತೆ 18 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ತಾಲೂಕಿನ ಕೆಸ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಮಾಚಹಳ್ಳಿ ಸಮೀಪ ಶುಕ್ರವಾರ ಮಧ್ಯಾಹ್ನ ಜರುಗಿದೆ.

ಅಪಘಾತದಿಂದಾಗಿ ಮದ್ದೂರು- ತುಮಕೂರು ನಡುವೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿಕರು ಪರದಾಡಿದರು. ಕಾರು ಚಾಲನೆ ಮಾಡುತ್ತಿದ್ದ ಬೆಂಗಳೂರು ರಾಜರಾಜೇಶ್ವರಿ ನಗರದ ಧರ್ಮರಾಜ್ ಪುತ್ರ ಶಿವಕುಮಾರ್ (45) ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಾರಿನಲ್ಲಿದ್ದ ಈತನ ಸಂಬಂಧಿ ಯಶೋಧಮ್ಮ ಸಹ ತೀವ್ರವಾಗಿ ಗಾಯಗೊಂಡಿದ್ದು, ಚನ್ನಪಟ್ಟಣ ಸಮೀಪದ ಚಾಮುಂಡೇಶ್ವರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪರಿಸ್ಥಿತಿ ಗಂಭೀರವಾಗಿದೆ. ಬಸ್ಸಿನಲ್ಲಿದ್ದ ಚಾಲಕ ಇ.ಇ.ಲೋಕೇಶ್, ನಿರ್ವಾಹಕಿ ಯಶೋಧ, ಪ್ರಯಾಣಿಕರಾದ ಸಿ.ಎಂ.ಲಕ್ಷ್ಮೀ, ಮಮತಾ, ಜಯಲಕ್ಷ್ಮಮ್ಮ, ರಂಜನಿ, ಸೌಭಾಗ್ಯ, ಶಾಂತ, ಶೃತಿ, ಭಾಗ್ಯ,ರತ್ನಮ್ಮ, ಯಶೋದಮ್ಮ, ತಾಯಮ್ಮ, ಪಾರ್ವತಮ್ಮ, ಜಯಮ್ಮ, ಚೆನ್ನಮ್ಮ, ಸರೋಜಮ್ಮ ಹಾಗೂ ಚಿಕ್ಕಮ್ಮ ಸೇರಿದಂತೆ 18 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ಹಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದವರು ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರು ರಾಜರಾಜೇಶ್ವರಿ ನಗರದ ಕಾರು ಚಾಲಕ ಶಿವಕುಮಾರ್ ನಮ್ಮ ಸಂಬಂಧಿ ಯಶೋಧಮ್ಮ ಅವರೊಂದಿಗೆ ಕೆಸ್ತೂರು ಸಮೀಪ ಇರುವ ತೋಟದ ಮನೆಗೆ ತಮ್ಮ ಎಂ.ಜಿ.ಕಾರಿನಲ್ಲಿ ತೆರಳುತ್ತಿದ್ದರು. ಮಧ್ಯಾಹ್ನ 1.45ರ ಸುಮಾರಿಗೆ ಚನ್ನಪಟ್ಟಣ ತಾಲೂಕಿನ ಗೌಡಗೆರೆ ಚಾಮುಂಡೇಶ್ವರಿ ದೇವಾಲಯದಿಂದ ದೇವರ ದರ್ಶನ ಮುಗಿಸಿ ವಾಪಸ್ ಆಗುತ್ತಿದ್ದ 80ಕ್ಕೂ ಹೆಚ್ಚು ಮಕ್ಕಳು ಪ್ರಯಾಣಿಸುತ್ತಿದ್ದ ಮದ್ದೂರು ಡಿಪೋಗೆ ಸೇರಿದ ಸಾರಿಗೆ ಸಂಸ್ಥೆ ಬಸ್ಸಿಗೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಬಲಭಾಗಕ್ಕೆ ಬಂದು ನೇರವಾಗಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಮದ್ದೂರು ಗ್ರಾಮಾಂತರ ಸರ್ಕಲ್ ಇನ್ಸ್ ಪೆಕ್ಟರ್ ನಾರಾಯಣಿ, ಕೆಸ್ತೂರು ಠಾಣೆ ಪಿಎಸ್ಐ ಶ್ರವಣ್ ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ನೆರವಿನಿಂದ ಗಾಯಾಳುಗಳನ್ನು ಆಟೋ ಸೇರಿದಂತೆ ಸಿಕ್ಕಸಿಕ್ಕ ವಾಹನಗಳಲ್ಲಿ ಆಸ್ಪತ್ರೆಗೆ ರವಾನಿಸುವ ಮಾನವೀಯತೆ ಮೆರೆದರು.

ಈ ಸಂಬಂಧ ಕೆಸ್ತೂರು ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸಕಾಲಕ್ಕೆ ಬಾರದ ಆ್ಯಂಬುಲೆನ್ಸ್ ಪ್ರತಿಭಟನೆ

ಮದ್ದೂರು

ತಾಲೂಕಿನ ಮಾಚಹಳ್ಳಿ ಬಳಿ ಸಾರಿಗೆ ಸಂಸ್ಥೆ ಬಸ್ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಅರ್ಧ ಗಂಟೆಯಾದರೂ ಸಹ ಆ್ಯಂಬುಲೆನ್ಸ್ ಸಕಾಲಕ್ಕೆ ಬಾರದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಮಾಚಳ್ಳಿ ಗ್ರಾಮಸ್ಥರು ತುಮಕೂರು- ಮದ್ದೂರು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಅಪಘಾತದ ಬಗ್ಗೆ ಸ್ಥಳೀಯರು ಆ್ಯಂಬುಲೆನ್ಸ್ ವಾಹನಕ್ಕೆ ಮಾಹಿತಿ ನೀಡಿ ಸ್ಥಳಕ್ಕೆ ಬರುವಂತೆ ಮನವಿ ಮಾಡಿದ್ದಾರೆ. ಆದರೆ, ಗಾಯಾಳುಗಳು ರಸ್ತೆಯಲ್ಲೇ ಕುಳಿತು ನರಳುತ್ತಿದ್ದರೂ ಸಹ ಅರ್ಧ ಗಂಟೆಯಾದರೂ ಸಹ ಆ್ಯಂಬುಲೆನ್ಸ್ ವಾಹನ ಸ್ಥಳಕ್ಕೆ ಬರಲಿಲ್ಲ, ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಧರಣಿ ನಡೆಸಿ ಆರೋಗ್ಯ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಇದರಿಂದಾಗಿ ರಾಜ್ಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತ್ತು. ನಂತರ ಪೊಲೀಸರು ಧರಣಿ ನಿರತ ಗ್ರಾಮಸ್ಥರ ಮನವೊಲಿಸಿ ರಸ್ತೆ ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.ಬಳ್ಳಾರಿ ಜೈಲಿಗೆ ರೌಡಿ ಅಜಯ್‌

ಕನ್ನಡಪ್ರಭ ವಾರ್ತೆ ಮಂಡ್ಯ

ಇಲ್ಲಿನ ಗಾಂಧಿನಗರ ಬಡಾವಣೆಯ ಐದನೇ ಕ್ರಾಸ್‌ ನಿವಾಸಿ ಅಜಯ್‌ ಅಲಿಯಾಸ್‌ ಚಿಕ್ಕಬೆಣ್ಣೆ ಎಂಬಾತನ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಳ್ಳಾರಿ ಜೈಲಿನ ವಶಕ್ಕೆ ನೀಡುವಂತೆ ಜಿಲ್ಲಾಧಿಕಾರಿಗಳು ಆದೇಶ ನೀಡಿದನ್ವಯ ಆತನನ್ನು ಬಂಧಿಸಿ ಶುಕ್ರವಾರ ಬಳ್ಳಾರಿ ಕೇಂದ್ರ ಕಾರಾಗೃಹದ ವಶಕ್ಕೆ ನೀಡಲಾಗಿದೆ.

ಈತನ ವಿರುದ್ಧ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಗಂಭೀರ ಸ್ವರೂಪದ ಹಲ್ಲೆ, ಕೊಲೆ ಪ್ರಯತ್ನ, ದರೋಡೆ ಯತ್ನ ಸೇರಿದಂತೆ ಒಟ್ಟು 17 ಪ್ರಕರಣಗಳು ದಾಖಲಾಗಿದ್ದ ಹಿನ್ನೆಲೆಯಲ್ಲಿ ಈತನ ರೌಡಿ ಚಟುವಟಿಕೆಯನ್ನು ನಿಯಂತ್ರಿಸಿ ಸಮಾಜದ ಶಾಂತಿ ಮತ್ತು ಸ್ವಾಸ್ಥ್ಯವನ್ನು ಕಾಪಾಡುವ ಸಲುವಾಗಿ ಪೊಲೀಸ್‌ ಅಧೀಕ್ಷಕರ ವರದಿಯ ಮೇರೆಗೆ ಜಿಲ್ಲಾ ದಂಡಾಧಿಕಾರಿಗಳು, ಜಿಲ್ಲಾಧಿಕಾರಿಗಳು ಗೂಂಡಾ ಕಾಯ್ದೆ ಅನ್ವಯ ನೀಡಿದ ಆದೇಶದಂತೆ ಅವನನ್ನು ಪಶ್ಚಿಮಠಾಣೆ ಪೊಲೀಸರು ಬಂಧಿಸಿ ಬಳ್ಳಾರಿ ಜೈಲು ಅಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದೆ.