ಸಾರಾಂಶ
ಜನನಿಬಿಡ ಪ್ರದೇಶದಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆಹಳೇ ದ್ವೇಷದ ಹಿನ್ನೆಲೆಯಲ್ಲಿ ಸಿನಿಮೀಯ ಶೈಲಿಯಲ್ಲಿ ಕೃತ್ಯ
ಹಳೇ ದ್ವೇಷದ ಹಿನ್ನೆಲೆಯಲ್ಲಿ ಸಿನಿಮೀಯ ಶೈಲಿಯಲ್ಲಿ ಕೃತ್ಯಕನ್ನಡಪ್ರಭ ವಾರ್ತೆ ಮೈಸೂರು
ಜನನಿಬಿಡ ಪ್ರದೇಶದಲ್ಲಿ ಲಾಂಗು ಮಚ್ಚು ಝಳಪಿಸಿದ ಗುಂಪೊಂದು, ಹಳೇ ದ್ವೇಷದ ಹಿನ್ನೆಲೆಯಲ್ಲಿ ಯುವಕನ ಮೇಲೆ ಸಿನಿಮೀಯ ಶೈಲಿಯಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದೆ.ದೇವರಾಜ ಮೊಹಲ್ಲಾದ ಬಿಡಾರಂ ಕೃಷ್ಣಪ್ಪ ರಸ್ತೆಯ ದೇವರಾಜ ಪೊಲೀಸ್ ಠಾಣೆ ಹಿಂಭಾಗದಲ್ಲಿ ಈ ಘಟನೆ ನಡೆದಿದೆ. ಬೆಂಗಳೂರಿನ ಅವಲಹಳ್ಳಿ ನಿವಾಸಿ ಸಯ್ಯದ್ ಹಬೀಬ್ ಅಲಿಯಾಸ್ ಸುಕ್ಕಾ (27) ಹಲ್ಲೆಗೊಳಗಾದ ಯುವಕ.
ಮೈಸೂರಿನ ಉದಯಗಿರಿ ನಿವಾಸಿ ಹಬೀಬ್ ಬೆಂಗಳೂರಿನಲ್ಲಿ ನೆಲೆಸಿದ್ದು, ನ್ಯಾಯಾಲಯ ಪ್ರಕರಣ ನಿಮಿತ್ತ ಸ್ನೇಹಿತ ರಫೀಕ್ ಅಹಮ್ಮದ್ ಜಿಲಾಲ್ ಜತೆಗೆ ಮೈಸೂರಿಗೆ ಬಂದಿದ್ದರು. ಕೋರ್ಟ್ ಕೆಲಸ ಮುಗಿಸಿ ಸ್ನೇಹಿತನೊಂದಿಗೆ ಅಂಗಡಿಯಲ್ಲಿ ಟೀ ಕುಡಿಯುತ್ತಾ ಕುಳಿತಿದ್ದಾಗ ಕಾರಿನಲ್ಲಿ ಬಂದ ಏಳೆಂಟು ಮಂದಿ ದುಷ್ಕರ್ಮಿಗಳು ಲಾಂಗ್ ಮಚ್ಚುಗಳಿಂದ ಏಕಾಏಕಿ ದಾಳಿ ನಡೆಸಿದ್ದಾರೆ.ದಾಳಿ ವೇಳೆ ಹಬೀಬ್ನ ಕೈ ಮತ್ತು ಬೆನ್ನಿಗೆ ಗಾಯವಾಗಿದ್ದು, ಟೀ ಅಂಗಡಿಯಿಂದ ತಪ್ಪಿಸಿಕೊಂಡು ಅಂಬೇಡ್ಕರ್ ಭವನವರೆಗೂ ಹಬೀಬ್ ಓಡಿದ್ದು, ಅಲ್ಲಿಯವರೆಗೂ ಬಂದು ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಹಲ್ಲೆಯಿಂದಾಗಿ ರಸ್ತೆ ಬದಿ ಬಿದ್ದಿರುವುದನ್ನು ಕಂಡು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದ ಹಬೀಬ್ ನನ್ನು ಪೊಲೀಸರು ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದಾರೆ.ಹಬೀಬ್ ಮೈಸೂರಿನಲ್ಲಿ ನೆಲೆಸಿದ್ದ ವೇಳೆ ಉದಯಗಿರಿಯ ಯುವಕರ ಗುಂಪಿನೊಂದಿಗೆ ಘರ್ಷಣೆ ನಡೆದಿತ್ತು. ಘಟನೆ ಬಳಿಕ ಹಬೀಬ್ ಬೆಂಗಳೂರಿಗೆ ತೆರಳಿ ಅಲ್ಲೇ ನೆಲೆಸಿದ್ದ. ಮಂಗಳವಾರ ಮೈಸೂರಿಗೆ ಬಂದಿರುವ ಮಾಹಿತಿ ಪಡೆದ ದುಷ್ಕರ್ಮಿಗಳ ತಂಡ, ದೇವರಾಜ ಠಾಣೆ ಹಿಂಭಾಗದ ರಸ್ತೆಯಲ್ಲಿನ ಟೀ ಅಂಗಡಿ ಬಳಿ ಕುಳಿತಿದ್ದಾಗ ದಾಳಿ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾಗಳನ್ನು ಪೊಲೀಸರು ಪರಿಶೀಲಿಸಿದ್ದು, ದುಷ್ಕರ್ಮಿಗಳ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ.ಈ ಸಂಬಂಧ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.