ಮೊಬೈಲ್‌ ದೋಚುತ್ತಿದ್ದ ಅಪ್ಪ- ಮಗ ಸೇರಿ ಮೂವರ ಬಂಧನ

| Published : Feb 05 2025, 01:18 AM IST

ಸಾರಾಂಶ

ನಗರದಲ್ಲಿ ಮೊಬೈಲ್ ಕಳ್ಳತನದಲ್ಲಿ ತೊಡಗಿದ್ದ ಅಪ್ಪ-ಮಗ ಸೇರಿ ಮೂವರನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಮೊಬೈಲ್ ಕಳ್ಳತನದಲ್ಲಿ ತೊಡಗಿದ್ದ ಅಪ್ಪ-ಮಗ ಸೇರಿ ಮೂವರನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಥಣಿಸಂದ್ರದ ಸಮೀಪದ ಹೆಗಡೆ ನಗರದ ನಿವಾಸಿಗಳಾದ ಮೊಹಮ್ಮದ್ ಅಹ್ಮದ್‌ ಅಲಿಯಾಸ್ ಸಲ್ಮಾನ್, ಆತನ ತಂದೆ ಫಾರೂಕ್‌ ಹಾಗೂ ಮಂಗಮ್ಮನಪಾಳ್ಯದ ಶಾಜಿದ್ ಬಂಧಿತರಾಗಿದ್ದು, ಆರೋಪಿಗಳಿಂದ ₹30.40 ಲಕ್ಷ ಮೌಲ್ಯದ 93 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಈ ಕೃತ್ಯದಲ್ಲಿ ತಪ್ಪಿಸಿಕೊಂಡಿರುವ ಮತ್ತೊಬ್ಬ ಪ್ರಮುಖ ಆರೋಪಿ ಪಾದರಾಯನಪುರದ ಮೊಹಮ್ಮದ್ ಮುಸ್ತಾಕ್ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಕೆಲ ದಿನಗಳ ಹಿಂದೆ ಬಿ.ನಾರಾಯಣಪುರ ಸಮೀಪ ಖಾಸಗಿ ಕಂಪನಿ ಉದ್ಯೋಗಿಯೊಬ್ಬರಿಂದ ಕಿಡಿಗೇಡಿಗಳು ಮೊಬೈಲ್ ದೋಚಿದ್ದರು. ಈ ಬಗ್ಗೆ ತನಿಖೆಗಿಳಿದ ಇನ್ಸ್‌ಪೆಕ್ಟರ್ ಜಿ.ಪ್ರವೀಣ್ ಬಾಬು ಹಾಗೂ ಸಬ್‌ ಇನ್ಸ್‌ಪೆಕ್ಟರ್ ಪರಶುರಾಮ್ ನೇತೃತ್ವದ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಮೂವರು ಮೊಬೈಲ್ ಕಳ್ಳರನ್ನು ಬಂಧಿಸಿದ್ದಾರೆ.

ಮೊಬೈಲ್ ಕದಿಯುವುದೇ ಅಪ್ಪ-ಮಕ್ಕಳ ಕೆಲಸ:

ಸಲ್ಮಾನ್, ಶಾಜಿದ್ ವೃತ್ತಿಪರ ಮೊಬೈಲ್‌ ಕಳ್ಳರಾಗಿದ್ದು, ಈ ಇಬ್ಬರ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಸಂಜೆ ವೇಳೆ ಕೆಲಸ ಮುಗಿಸಿ ಮನೆಗೆ ಹೋಗುವ ಧಾವಂತದಲ್ಲಿರುವ ಉದ್ಯೋಗಸ್ಥರನ್ನು ಗುರಿಯಾಗಿಸಿಕೊಂಡು ಆರೋಪಿಗಳು ಮೊಬೈಲ್ ದೋಚುತ್ತಿದ್ದರು. ರಸ್ತೆಯಲ್ಲಿ ಜನರು ಏಕಾಂಗಿಯಾಗಿ ಹೋಗುತ್ತಿದ್ದರೆ ಬೈಕ್‌ನಲ್ಲಿ ಹೋಗಿ ಮೊಬೈಲ್ ಎಗರಿಸಿ ಸಲ್ಮಾನ್ ಹಾಗೂ ಶಾಜಿದ್ ಪರಾರಿಯಾಗುತ್ತಿದ್ದರು. ಹೀಗೆ ಕದ್ದ ಮೊಬೈಲ್‌ಗಳನ್ನು ತನ್ನ ತಂದೆ ಫಾರೂಕ್ ಮೂಲಕ ಸಲ್ಮಾನ್ ವಿಲೇವಾರಿ ಮಾಡಿಸುತ್ತಿದ್ದ.

ಬಿಡಿ ಭಾಗಗಳನ್ನು ಕಳಚಿ ಸೇಲ್‌:

ಕಳವು ಮಾಡಿದ ಮೊಬೈಲ್‌ಗಳನ್ನು ಆರೋಪಿಗಳು ಮೊಬೈಲ್‌ಗಳ ಬಿಡಿ ಭಾಗಗಳನ್ನು ಕಳಚಿ ಮಾರುತ್ತಿದ್ದರು. ಈ ಮೊಬೈಲ್‌ ಮಾರಾಟದಲ್ಲಿ ಪಾದರಾಯನಪುರದ ಮುಸ್ತಾಕ್ ಪಳಗಿದ ಕೈ ಆಗಿದ್ದು, ಹಲವು ವರ್ಷಗಳಿಂದ ನಗರದ ಎಸ್‌.ಪಿ.ರಸ್ತೆಯಲ್ಲಿ ಸೆಕೆಂಡ್ಸ್ ಮೊಬೈಲ್ ಮಾರಾಟದಲ್ಲಿ ಆತ ನಿರತನಾಗಿದ್ದಾನೆ. ತನ್ನ ಸಹಚರರು ಪೊಲೀಸರಿಗೆ ಸಿಕ್ಕಿಬಿದ್ದ ಕೂಡಲೇ ಮುಸ್ತಾಕ್ ತಲೆಮರೆಸಿಕೊಂಡಿದ್ದಾನೆ.