ತನ್ನ ಮಗಳ ಸಹವಾಸ ಮಾಡದಂತೆ ಬುದ್ಧಿವಾದ ಹೇಳಿದ ತಂದೆಯನ್ನು ಕೆಲಸಗಾರನೊಬ್ಬ ಮಚ್ಚಿನಿಂದ ಹಲ್ಲೆಗೈದು ಕೊಲೆ

| N/A | Published : Apr 17 2025, 12:51 AM IST / Updated: Apr 17 2025, 04:27 AM IST

ತನ್ನ ಮಗಳ ಸಹವಾಸ ಮಾಡದಂತೆ ಬುದ್ಧಿವಾದ ಹೇಳಿದ ತಂದೆಯನ್ನು ಕೆಲಸಗಾರನೊಬ್ಬ ಮಚ್ಚಿನಿಂದ ಹಲ್ಲೆಗೈದು ಕೊಲೆ
Share this Article
  • FB
  • TW
  • Linkdin
  • Email

ಸಾರಾಂಶ

ತನ್ನ ಮಗಳ ಸಹವಾಸ ಮಾಡದಂತೆ ಬುದ್ಧಿವಾದ ಹೇಳಿದ ತಂದೆಯನ್ನು ಕೆಲಸಗಾರನೊಬ್ಬ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಕುಮಾರಸ್ವಾಮಿ ಲೇಔಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

 ಬೆಂಗಳೂರು : ತನ್ನ ಮಗಳ ಸಹವಾಸ ಮಾಡದಂತೆ ಬುದ್ಧಿವಾದ ಹೇಳಿದ ತಂದೆಯನ್ನು ಕೆಲಸಗಾರನೊಬ್ಬ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಕುಮಾರಸ್ವಾಮಿ ಲೇಔಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಇಲಿಯಾಸ್‌ ನಗರ ನಿವಾಸಿ ಸೈಯದ್‌ ಅಸ್ಲಾಂ (60) ಕೊಲೆಯಾದ ದುರ್ದೈವಿ. ಹೊರವರ್ತುಲ ರಸ್ತೆಯ ಟಿಂಬರ್‌ ಯಾರ್ಡ್‌ನಲ್ಲಿ ಬುಧವಾರ ಬೆಳಗ್ಗೆ ಸುಮಾರು 7.30ಕ್ಕೆ ಈ ಘಟನೆ ನಡೆದಿದೆ. ಈ ಸಂಬಂಧ ಆರೋಪಿ ಸೂರ್ಯ ಪ್ರಕಾಶ್‌ನನ್ನು(23) ಪೊಲೀಸರು ಬಂಧಿಸಿದ್ದಾರೆ.

ಘಟನೆ ವಿವರ:

ಹೊರವರ್ತುಲ ರಸ್ತೆಯ ಇಲಿಯಾಸ್‌ ನಗರದಲ್ಲಿ ಸೈಯದ್‌ ಅಸ್ಲಾಂ ಅವರ ಸಹೋದರನ ಟಿಂಬರ್‌ ಯಾರ್ಡ್‌ ಇದೆ. ಸೈಯದ್‌ ಅಸ್ಲಾಂ ಈ ಟಿಂಬರ್‌ ಯಾರ್ಡ್‌ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಇದೇ ಟಿಂಬರ್‌ ಯಾರ್ಡ್‌ನಲ್ಲಿ ಆರೋಪಿ ಸೂರ್ಯ ಪ್ರಕಾಶ್‌ ಕೆಲ ತಿಂಗಳಿಂದ ಕೆಲಸ ಮಾಡುತ್ತಿದ್ದ. ಸೈಯದ್‌ ಅಸ್ಲಾಂಗೆ ಐವರು ಮಕ್ಕಳ ಪೈಕಿ ಓರ್ವ ಪುತ್ರಿಯ ಜತೆಗೆ ಆರೋಪಿ ಸೂರ್ಯ ಪ್ರಕಾಶ್‌ ಸಲುಗೆ ಬೆಳೆಸಿದ್ದ. ತನ್ನ ಮಗಳ ಸಹವಾಸ ಮಾಡಬೇಡ ಎಂದು ಸೈಯದ್‌ ಅಸ್ಲಾಂ ಹಲವು ಬಾರಿ ಸೂರ್ಯ ಪ್ರಕಾಶ್‌ಗೆ ಬುದ್ಧಿವಾದ ಹೇಳಿದ್ದರು. ಆಕೆದಿಂದ ದೂರ ಇರುವಂತೆ ಎಚ್ಚರಿಕೆ ಸಹ ನೀಡಿದ್ದರು.

ಬೆಳಗ್ಗೆ ಕೆಲಸಕ್ಕೆ ಬಂದಾಗ ಕೊಲೆ:

ಆದರೂ ಸಹ ಆರೋಪಿ ಸೂರ್ಯ ಪ್ರಕಾಶ್‌ ಆಕೆಯ ಜತೆಗೆ ಸಲುಗೆಯಿಂದ ಇರುತ್ತಿದ್ದ. ಈ ವಿಚಾರವಾಗಿ ಎರಡು ದಿನಗಳ ಹಿಂದೆ ಟಿಂಬರ್‌ ಯಾರ್ಡ್‌ನಲ್ಲಿ ಸೈಯದ್‌ ಅಸ್ಲಾಂ ಮತ್ತು ಸೂರ್ಯ ಪ್ರಕಾಶ್‌ ನಡುವೆ ಸಣ್ಣ ಜಗಳವಾಗಿತ್ತು. ಬುಧವಾರ ಬೆಳಗ್ಗೆ ಸುಮಾರು 7.30ಕ್ಕೆ ಆರೋಪಿ ಸೂರ್ಯ ಪ್ರಕಾಶ್‌ ಎಂದಿನಂತೆ ಟಿಂಬರ್‌ ಯಾರ್ಡ್‌ಗೆ ಕೆಲಸಕ್ಕೆ ಬಂದಿದ್ದಾನೆ. ಈ ವೇಳೆ ಮಗಳ ವಿಚಾರಕ್ಕೆ ಸೈಯದ್‌ ಅಸ್ಲಾಂ ಮತ್ತು ಸೂರ್ಯ ಪ್ರಕಾಶ್‌ ನಡುವೆ ಮತ್ತೆ ಜಗಳ ಶುರುವಾಗಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ರೊಚ್ಚಿಗೆದ್ದ ಸೂರ್ಯ ಪ್ರಕಾಶ್‌ ಅಲ್ಲೇ ಇದ್ದ ಮಚ್ಚು ತೆಗೆದು ಸೈಯದ್‌ ಅಸ್ಲಾಂ ಮೇಲೆ ಮನಬಂದಂತೆ ಹಲ್ಲೆ ನಡೆಸಿದ ಪರಿಣಾಮ ತೀವ್ರ ಗಾಯ ಹಾಗೂ ರಕ್ತಸ್ರಾವವಾಗಿ ಸೈಯದ್‌ ಅಸ್ಲಾಂ ಮೃತಪಟ್ಟಿದ್ದಾರೆ. ಕೊಲೆ ಬಳಿಕ ಆರೋಪಿ ಸೂರ್ಯ ಪ್ರಕಾಶ್‌ ಪರಾರಿಯಾಗಿದ್ದಾನೆ.

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿ ಪೊಲೀಸರು ಪರಿಶೀಲಿಸಿದ್ದಾರೆ. ಘಟನೆ ನಡೆದ ಕೆಲವೇ ತಾಸಿನಲ್ಲಿ ಕಾರ್ಯಾಚರಣೆ ಕೈಗೊಂಡು ಆರೋಪಿ ಸೂರ್ಯ ಪ್ರಕಾಶ್‌ನನ್ನು ಬಂಧಿಸಿದ್ದಾರೆ. ಕುಮಾರಸ್ವಾಮಿ ಲೇಔಟ್ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.