ಹೆಣ್ಣು ಭ್ರೂಣ ಹತ್ಯೆ ಪ್ರಕರಣ: ಸ್ಕ್ಯಾನಿಂಗ್‌ ಮಷಿನ್‌ ಪೂರೈಸಿದ್ದ ಮಂಗಳೂರು, ಹೊನ್ನಾಳಿ ವ್ಯಕ್ತಿಗಳ ಬಂಧನ

| Published : Feb 23 2024, 01:47 AM IST

ಹೆಣ್ಣು ಭ್ರೂಣ ಹತ್ಯೆ ಪ್ರಕರಣ: ಸ್ಕ್ಯಾನಿಂಗ್‌ ಮಷಿನ್‌ ಪೂರೈಸಿದ್ದ ಮಂಗಳೂರು, ಹೊನ್ನಾಳಿ ವ್ಯಕ್ತಿಗಳ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಕೆಲವು ತಿಂಗಳ ಹಿಂದೆ ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಹೆಣ್ಣು ಭ್ರೂಣ ಹತ್ಯೆಯ ಕೃತ್ಯಕ್ಕೆ ಸ್ಕ್ಯಾನಿಂಗ್‌ ಮೆಷಿನ್‌ಗಳನ್ನು ಪೂರೈಸಿದ್ದ ಇಬ್ಬರನ್ನು ರಾಜ್ಯ ಅಪರಾಧ ತನಿಖಾ ದಳ (ಸಿಐಡಿ) ಬಂಧಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೆಲವು ತಿಂಗಳ ಹಿಂದೆ ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಹೆಣ್ಣು ಭ್ರೂಣ ಹತ್ಯೆಯ ಕೃತ್ಯಕ್ಕೆ ಸ್ಕ್ಯಾನಿಂಗ್‌ ಮೆಷಿನ್‌ಗಳನ್ನು ಪೂರೈಸಿದ್ದ ಇಬ್ಬರನ್ನು ರಾಜ್ಯ ಅಪರಾಧ ತನಿಖಾ ದಳ (ಸಿಐಡಿ) ಬಂಧಿಸಿದೆ.

ಮಂಗಳೂರಿನ ಎಂ.ಲಕ್ಷ್ಮಣ್ ಗೌಡ ಹಾಗೂ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಸಿದ್ದೇಶ್ ಬಂಧಿತರಾಗಿದ್ದು, ಆರೋಪಿಗಳಿಂದ ಸ್ಕ್ಯಾನಿಂಗ್ ಮೆಷಿನ್‌ಗಳನ್ನು ಜಪ್ತಿ ಮಾಡಲಾಗಿದೆ. ಈ ಜಾಲದ ಬೆನ್ನತ್ತಿದ್ದ ಎಸ್ಪಿ ಸಾರಾ ಫಾತಿಮಾ ನೇತೃತ್ವದ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಇಬ್ಬರು ಸ್ಕ್ಯಾನಿಂಗ್ ಪೂರೈಕೆದಾರರನ್ನು ಬಂಧಿಸಿದೆ.

ಬಂಧಿತ ಆರೋಪಿಗಳ ವಿಚಾರಣೆ ವೇಳೆ ಸ್ಕ್ಯಾನಿಂಗ್ ಪೂರೈಕೆದಾರರ ಕುರಿತು ಲಭ್ಯವಾದ ಮಾಹಿತಿ ಮೇರೆಗೆ ಸಿಐಡಿ ಕಾರ್ಯಾಚರಣೆ ನಡೆಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

₹2-3 ಲಕ್ಷಕ್ಕೆ ಸ್ಕ್ಯಾನಿಂಗ್ ಮೆಷಿನ್ ಪೂರೈಕೆ:

ಮಂಗಳೂರಿನಲ್ಲಿ ‘ಅವಿಸ್ಕಾರ ಬ್ರದರ್ಸ್‌ ಬಯೋಮೆಡಿಕಲ್‌ ಪ್ರೈ ಕಂಪನಿ‘ ಹೊಂದಿರುವ ಲಕ್ಷ್ಮಣ್‌ ಗೌಡ, ಆಸ್ಪತ್ರೆಗಳಿಗೆ ಪಿಸಿಪಿಎನ್‌ಡಿಟಿ ಆಕ್ಟ್‌ 1996ರಡಿ ಅಲ್ಟ್ರಾಸೌಂಡ್‌ ಮತ್ತು ಇಮೇಜಿಂಗ್ ಮೆಷಿನ್‌ಗಳನ್ನು ಮಾರಾಟ, ಮರು ಖರೀದಿ ಹಾಗೂ ರಿಪೇರಿ ಮಾಡುವ ಪರವಾನಿಗೆಯನ್ನು ಸರ್ಕಾರದಿಂದ ಪಡೆದುಕೊಂಡಿದ್ದ. ಹಲವು ವರ್ಷಗಳಿಂದ ಸ್ಕ್ಯಾನಿಂಗ್ ಮೆಷಿನ್‌ಗಳ ಮಾರಾಟದಲ್ಲಿ ಆತ ತೊಡಗಿದ್ದು, ಕೆಲ ವರ್ಷಗಳ ಹಿಂದೆ ಉಡುಪಿ ಆಸ್ಪತ್ರೆಯಿಂದ ಹಳೆಯ ಮೂರು ಸ್ಕ್ಯಾನಿಂಗ್ ಮೆಷಿನ್‌ಗಳನ್ನು ಮರು ಖರೀದಿಸಿದ್ದ. ಬಳಿಕ ಅವುಗಳನ್ನು ರಿಪೇರಿ ಮಾಡಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣದ ಮತ್ತೊಬ್ಬ ಆರೋಪಿ ಆರ್ಯುವೇದಿಕ್ ವೈದ್ಯ ಮಲ್ಲಿಕಾರ್ಜುನ್‌ಗೆ ತಲಾ ಒಂದಕ್ಕೆ ₹2 ಲಕ್ಷಕ್ಕೆ ಮಾರಾಟ ಮಾಡಿದ್ದ.

ಹೀಗೆ ಖರೀದಿಸಿದ ಮೂರು ಸ್ಕ್ಯಾನಿಂಗ್ ಮೆಷಿನ್‌ಗಳನ್ನು ಅಕ್ರಮವಾಗಿ ಹೆಣ್ಣು ಭ್ರೂಣ ಲಿಂಗ ಪತ್ತೆಗೆ ವೈದ್ಯ ಮಲ್ಲಿಕಾರ್ಜುನ್‌ ಬಳಸಿಕೊಂಡಿದ್ದಾನೆ. ಈ ಮೆಷಿನ್‌ಗಳ ಪೈಕಿ ಎರಡನ್ನು ಬೈಯಪ್ಪನಹಳ್ಳಿ ಹಾಗೂ ಚನ್ನರಾಯಣಪಟ್ಟಣ ಠಾಣೆ ಪೊಲೀಸರು ಜಪ್ತಿ ಮಾಡಿದ್ದರು. ಈಗ ಮತ್ತೊಬ್ಬ ಆರೋಪಿ ಸಿದ್ದೇಶ್‌ ಬಳಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಸ್ಕ್ಯಾನಿಂಗ್ ಮೆಷಿನ್‌ಗಳನ್ನು 2 ರಿಂದ 3 ಲಕ್ಷ ರುಗೆ ಲಕ್ಷ್ಮಣ್ ಗೌಡ ಮಾರಾಟ ಮಾಡಿದ್ದ.

ಇನ್ನು ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯಲ್ಲಿದ್ದ ವೈದ್ಯ ಮಲ್ಲಿಕಾರ್ಜುನ್‌ನ ಕ್ಲಿನಿಕ್‌ನಲ್ಲಿ ಸಿದ್ದೇಶ್ ಕೆಲಸ ಮಾಡುತ್ತಿದ್ದು, ಈ ಹಿಂದೆ ಸಹ ಹೆಣ್ಣು ಭ್ರೂಣ ಹತ್ಯೆ ಪ್ರಕರಣದಲ್ಲಿ ಆತ ಸಿಕ್ಕಿಬಿದ್ದಿದ್ದ ಎಂದು ತಿಳಿದು ಬಂದಿದೆ.

ಕೆಲ ದಿನಗಳ ಹಿಂದೆ ಮಂಡ್ಯ, ಮೈಸೂರು ಹಾಗೂ ಬೆಂಗಳೂರು ವ್ಯಾಪ್ತಿಯಲ್ಲಿ ಹೆಣ್ಣು ಭ್ರೂಣ ಲಿಂಗ ಪತ್ತೆ ಹಚ್ಚಿ ಕೊಲ್ಲುವ ದುಷ್ಟರ ಜಾಲವನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದರು. ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಒಳಗಾದ ನಂತರ ಈ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು.