ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ರೈಲಿಗೆ ಸಿಲುಕಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ನಗರದ ರೈಲು ನಿಲ್ದಾಣದ ಬಳಿ ಮಧ್ಯಾಹ್ನ ನಡೆದಿದೆ.ಶ್ರೀರಂಗಪಟ್ಟಣ ತಾಲೂಕು ನೇರಲಕೆರೆ ಗ್ರಾಮದ ಚೇತನ್ (23) ಎಂಬಾತನೇ ರೈಲಿಗೆ ಸಿಕ್ಕಿ ಸಾವನ್ನಪ್ಪಿರುವ ವಿದ್ಯಾರ್ಥಿ.
ಮಂಡ್ಯ ವಿಶ್ವ ವಿದ್ಯಾಲಯದಲ್ಲಿ ಅಂತಿಮ ಬಿಎ ಪದವಿ ವ್ಯಾಸಂಗ ಮಾಡುತ್ತಿದ್ದ ಚೇತನ್ ಮಧ್ಯಾಹ್ನ ಮೈಸೂರಿನಿಂದ ಬೆಂಗಳೂರು ಕಡೆಗೆ ಚಲಿಸುತ್ತಿದ್ದ ಒಡೆಯರ್ ಎಕ್ಸ್‌ಪ್ರೆಸ್ ರೈಲಿಗೆ ಸಿಕ್ಕಿ ಸಾವನ್ನಪ್ಪಿದ್ದಾನೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ರೈಲ್ವೆ ಪೊಲೀಸರು ಶವವನ್ನು ವಶಕ್ಕೆ ಪಡೆದು ಮಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದರು. ಈ ಸಂಬಂಧ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಕಾರು ಡಿಕ್ಕಿ ಪಾದಚಾರಿ ಮಹಿಳೆ ಸಾವು
ಮಳವಳ್ಳಿ: ಕಾರು ಡಿಕ್ಕಿಯಾಗಿ ಪಾದಚಾರಿ ಮಹಿಳೆ ಮೃತಪಟ್ಟಿರುವ ಘಟನೆ ಪಟ್ಟಣದ ಮೈಸೂರು ರಸ್ತೆಯಲ್ಲಿ ಸೋಮವಾರ ಸಂಜೆ ನಡೆದಿದೆ.ಪಟ್ಟಣದ ಹಳೇ ಕೋರ್ಟ್ ಹಿಂಭಾಗದ ಗೌಡಯ್ಯನ ಬೀದಿಯ ಶಿವಲಿಂಗೇಗೌಡರ ಪತ್ನಿ ಸುನೀತಾ (52) ಮೃತಪಟ್ಟವರು.ಪಟ್ಟಣದ ಮೈಸೂರು ರಸ್ತೆಯ ಶಾಂತಿ ಕಾಲೇಜು ಬಳಿ ರಸ್ತೆ ಬದಿ ನೀರು ತರಲು ನಡೆದು ಹೋಗುತ್ತಿದ್ದಾಗ ಸುನೀತಾ ಅವರಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಸುನೀತಾರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ವ್ಯಕ್ತಿ ಶವ ಪತ್ತೆಮಂಡ್ಯ: ನಗರ ಓಲ್ಡ್ ಎಂ.ಸಿ ರಸ್ತೆಯ ಪಕ್ಕದ ರೈಲ್ವೆ ಇಲಾಖೆಗೆ ಸೇರಿದ ಖಾಲಿ ಜಾಗದಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದ್ದು ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ವ್ಯಕ್ತಿಗೆ ಸುಮಾರು 30 ರಿಂದ 40 ವರ್ಷವಾಗಿದೆ. ಮೃತನು ಕಪ್ಪು ಬಿಳಿ ಬಣ್ಣದ ಚೆಕ್ಸ್ ಅರ್ಧ ತೋಳಿನ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು, ಎಡತೋಳಿನ ಮೇಲೆ ಆಂಜನೇಯನ ಹಚ್ಚೆ, ಬಲ ಎದೆಯ ಮೇಲೆ ಸುಧಾ ಎಂಬ ಹಸಿರು ಹಚ್ಚೆ, ಬಲಗೈನಲ್ಲಿ ಸುಧಾ ಅಮ್ಮ ಎಂಬ ಹಸಿರು ಹಚ್ಚೆ ಇರುತ್ತದೆ.ವಾರಸುದಾರರಿದ್ದಲ್ಲಿ ದೂ:08232-224500/ 08232-221345-224888 ಅನ್ನು ಸಂಪರ್ಕಿಸಲು ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.