ಸಾರಾಂಶ
ಬೆಂಗಳೂರು : ರಾಜ್ಯದ ಪ್ರತಿಷ್ಠಿತ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟು ಬ್ಲಾಕಿಂಗ್ ನಡೆದಿದೆ ಎಂಬ ಆರೋಪಗಳ ಸಂಬಂಧ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಬುಧವಾರ ಎಫ್‌ಐಆರ್ ದಾಖಲಾಗಿದೆ.
ಪ್ರಸಕ್ತ ಸಾಲಿನಲ್ಲಿ ಬಹುಬೇಡಿಕೆಯ ಎಂಜಿನಿಯರಿಂಗ್ ಕೋರ್ಸ್‌ಗಳಲ್ಲಿ ಎರಡು ಸಾವಿರಕ್ಕೂ ಅಧಿಕ ಸೀಟುಗಳ ಪ್ರವೇಶಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದ ಕಾರ್ಯನಿರ್ವಾಹಣಾಧಿಕಾರಿ ಎಚ್.ಪ್ರಸನ್ನ ದೂರು ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಸಕ್ತ ಸಾಲಿನಲ್ಲಿ ಕೆಇಎ ನಡೆಸಿದ ಕೌನ್ಸೆಲಿಂಗ್‌ನಲ್ಲಿ ಕೆಲವು ಪ್ರತಿಷ್ಠಿತ ಕಾಲೇಜುಗಳಲ್ಲೇ ಭಾರೀ ಬೇಡಿಕೆಯ ಎಂಜಿನಿಯರಿಂಗ್ ಕೋರ್ಸುಗಳಿಗೆ ಸೀಟು ಸಿಕ್ಕರೂ ಅನೇಕ ವಿದ್ಯಾರ್ಥಿಗಳು ಪ್ರವೇಶ ಪಡೆಯದಿರುವುದು ಬೆಳಕಿಗೆ ಬಂದಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ವಿದ್ಯಾರ್ಥಿಗಳ ಪ್ರವೇಶ ನಿರಾಕರಣೆ ಹಿಂದೆ ಸೀಟು ಬ್ಲ್ಯಾಕಿಂಗ್ ಹಗರಣ ನಡೆದಿರಬಹುದು ಎಂದು ಶಂಕಿಸಿದ್ದರು. ಅಲ್ಲದೆ ಈ ಕುರಿತು ಪೊಲೀಸ್ ತನಿಖೆಗೆ ಸಚಿವರು ಸೂಚನೆ ಹಿನ್ನೆಲೆಯಲ್ಲಿ ಕೆಇಎ ಕಾರ್ಯನಿರ್ವಾಹಣಾಧಿಕಾರಿ ದೂರು ಸಲ್ಲಿಸಿದ್ದಾರೆ.
ಸೀಟು ಬ್ಲಾಕಿಂಗ್ ಹಗರಣ ಪತ್ತೆಗೆ ವಿದ್ಯಾರ್ಥಿಗಳು ಕೋರ್ಸು, ಕಾಲೇಜು ಆಯ್ಕೆ ಸಂದರ್ಭದಲ್ಲಿ ಬಳಸಿದ ಕಂಪ್ಯೂಟರ್‌ನ ಐಪಿ ವಿಳಾಸವನ್ನು ಜಾಲಾಡಲಾಗಿದೆ. ಕೆಲವೆಡೆ ಒಂದೇ ಐಪಿ ವಿಳಾಸದಲ್ಲಿ 10ಕ್ಕೂ ಹೆಚ್ಚು ಸೀಟುಗಳನ್ನು ಬ್ಲಾಕ್ ಮಾಡಲಾಗಿದೆ. ಇಂತಹ ಐಟಿ ಅಡ್ರೆಸ್ ವಿರುದ್ಧ ತನಿಖೆ ಮಾಡುವಂತೆ ಕೆಇಎ ದೂರಿನಲ್ಲಿ ವಿವರಿಸಿದೆ.
ಕೆಇಎ ನಡೆಸಿದ ಮೂರನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಕಂಪ್ಯೂಟರ್ ಸೈನ್ಸ್, ಕೃತಕ ಬುದ್ಧಿಮತ್ತೆ ಹಾಗೂ ಸೈಬರ್ ಸೆಕ್ಯೂರಿಟಿ ಅಂತಹ ಅತಿ ಹೆಚ್ಚು ಬೇಡಿಕೆ ಇರುವ ಕೋರ್ಸ್‌ಗಳು ವಿದ್ಯಾರ್ಥಿಗಳಿಗೆ ಹಂಚಿಕೆಯಾಗಿದ್ದವು. ಆದರೆ ಹೀಗೆ ಹಂಚಿಕೆಯಾದ ಸೀಟುಗಳಿಗೆ ಪ್ರವೇಶ ಕಡ್ಡಾಯವಾಗಿದ್ದರೂ ಸುಮಾರು 2348 ವಿದ್ಯಾರ್ಥಿಗಳು ದಾಖಲಾತಿಯಾಗಿಲ್ಲ ಎಂದು ಹೇಳಲಾಗಿದೆ.
ಈ ಸೀಟು ಬ್ಲ್ಯಾಕಿಂಗ್ ಹಿಂದೆ ರಾಜ್ಯದ ಪ್ರತಿಷ್ಠಿತ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಯ ಪಾತ್ರವಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಈ ಅಕ್ರಮದ ಜಾಲ ಕುರಿತು ಸಮಗ್ರ ತನಿಖೆ ನಡೆಸುವಂತೆ ದೂರಿನಲ್ಲಿ ಕೋರಲಾಗಿದ್ದು, ಖಾಸಗಿ ಕಾಲೇಜುಗಳಿಗೆ ತನಿಖೆ ಬಿಸಿ ತಟ್ಟಲಿದೆ ಎನ್ನಲಾಗಿದೆ.
ಸಿಐಡಿ ಅಥವಾ ಸಿಸಿಬಿ ತನಿಖೆ ಸಾಧ್ಯತೆ?
ಸೀಟು ಬ್ಲಾಕಿಂಗ್ ಜಾಲ ವಿಸ್ತಾರವಾಗಿರುವ ಕಾರಣ ಈ ಪ್ರಕರಣದ ತನಿಖೆಯನ್ನು ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ) ಅಥವಾ ಸಿಸಿಬಿಗೆ ರಾಜ್ಯ ಸರ್ಕಾರ ವಹಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.