ಗಾರ್ಮೇಂಟ್ಸ್ ಗೋದಾಮಿಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ: ಲಕ್ಷಾಂತರ ರು. ಮೌಲ್ಯದ ವಸ್ತು ಭಸ್ಮ

| Published : Jan 03 2025, 01:30 AM IST / Updated: Jan 03 2025, 04:33 AM IST

fire in patna

ಸಾರಾಂಶ

ಗಾರ್ಮೇಂಟ್ಸ್ ಗೋದಾಮಿಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ರು. ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿರುವ ದುರ್ಘಟನೆ ಆನೇಕಲ್ ತಾಲೂಕು ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಹೆಬ್ಬಗೋಡಿಯಲ್ಲಿ ಗುರುವಾರ ನಡೆದಿದೆ.

 ಆನೇಕಲ್ : ಗಾರ್ಮೇಂಟ್ಸ್ ಗೋದಾಮಿಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ರು. ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿರುವ ದುರ್ಘಟನೆ ಆನೇಕಲ್ ತಾಲೂಕು ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಹೆಬ್ಬಗೋಡಿಯಲ್ಲಿ ಗುರುವಾರ ನಡೆದಿದೆ.

ಗುರುವಾರ ಒಂದು ಗಾರ್ಮೆಂಟ್ಸ್ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪಕ್ಕದಲ್ಲಿದ್ದ 4 ಕಂಪನಿಗಳಿಗೂ ಹರಡಿದ ಪರಿಣಾಮ ಎಲ್ಲವೂ ಬೆಂಕಿಗೆ ಆಹುತಿಯಾಗಿವೆ. ಘಟನೆಯಲ್ಲಿ ಬಟ್ಟೆ, ಲೆದರ್, ಪ್ಲಾಸ್ಟಿಕ್ ವಸ್ತುಗಳು ಸುಟ್ಟು ಭಸ್ಮವಾಗಿದ್ದು, ಕಾರ್ಖಾನೆಯ ಒಳಗೆ ದಾಸ್ತಾನಿಟ್ಟಿದ್ದ ರಾಸಾಯನಿಕ ಡ್ರಮ್‌ಗಳು ಸಹ ಸ್ಫೋಟಗೊಂಡಿವೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಕಾರ್ಮಿಕರು ಘಟನಾ ಸ್ಥಳದಿಂದ ಹೊರಗೆ ಓಡಿ ಬಂದಿದ್ದು ಯಾವುದೇ ಪ್ರಾಣಪಾಯ ಸಂಭಾವಿಸಲಿಲ್ಲ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಗೋದಾಮಿನಲ್ಲಿ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ದುರಂತದ ಬಗ್ಗೆ ತಿಳಿಯುತ್ತಿದ್ದಂತೆ ಡಿವೈಎಸ್ಪಿ ಮೋಹನ್ ಹಾಗೂ ಹೆಬ್ಬಗೋಡಿ ಇನ್‌ಸ್ಪೆಕ್ಟರ್ ಐಯ್ಯನ್ ರೆಡ್ಡಿ ಅವರ ನೇತೃತ್ವದಲ್ಲಿ ಸುದ್ದಿ ಕಾರ್ಯ ಪ್ರವೃತ್ತರಾದ ಪೊಲೀಸರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದರು. ಸಿಬ್ಬಂದಿಯೊಡನೆ ಘಟನಾ ಸ್ಥಳಕ್ಕೆ ಧಾವಿಸಿದ ಖಾಕಿಪಡೆ ರಸ್ತೆ ತೆರವು ಮಾಡಿಸಿ, ಆಂಬುಲೆನ್ಸ್ ಮತ್ತು ಅಗ್ನಿಶಾಮಕ ವಾಹನಗಳಿಗೆ ಸುಗಮ ದಾರಿ ಮಾಡಿಕೊಟ್ಟರು.

ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟರೂ ಬೆಂಕಿ ನಿಯಂತ್ರಣಕ್ಕೆ ಬರಲು ಹೆಣಗಾಡಬೇಕಾಯಿತು. ಹೆಬ್ಬಗೋಡಿ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿದ್ದು, ಸಾರ್ವಜನಿಕರಲ್ಲಿ ಒಂದು ಕಡೆ ಆತಂಕವಿದ್ದರೂ ಜೀವದ ಹಂಗು ತೊರೆದು ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಮಾಡಿದ ಪ್ರಯತ್ನ ಜನರ ಮೆಚ್ಚುಗೆಗೆ ಪಾತ್ರವಾಯಿತು. ಹೆಬ್ಬಗೋಡಿ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿ ಕಂಪನಿ ಮಾಲೀಕರಿಂದ ಮಾಹಿತಿ ಕಲೆ ಹಾಕಿದ್ದಾರೆ

ಹೋಟೆಲ್‌ಗೂ ಶಾಖ:  ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟಿದ್ದು, ಕಾರ್ಖಾನೆಗಳಿಗೆ ಹೊಂದಿಕೊಂಡಿದ್ದ ಸಾಯಿ ವಿಶ್ರಾಮ್ ಹೋಟೆಲ್‌ಗೂ ಬೆಂಕಿಯ ಶಾಖ ತಟ್ಟಿದೆ. ಹೋಟೆಲ್‌ನಲ್ಲಿ ತಂಗಿದ್ದ ಗ್ರಾಹಕರಲ್ಲಿ ಕೆಲಕಾಲ ಆತಂಕ ಮನೆ ಮಾಡಿತ್ತು. ಬಳಿಕ ಹೋಟೆಲ್‌ನಲ್ಲಿದ್ದ ಕೆಲ ರೋಗಿಗಳು ಸೇರಿದಂತೆ ಎಲ್ಲರನ್ನೂ ಬೇರೆಡೆ ಸ್ಥಳಾಂತರ ಮಾಡಲಾಯಿತು.

ಪಾಮ್ ಬಳಸಿದ ನೀರು ಸಿಂಪಡನೆ: ಆಧುನಿಕ ಅಗ್ನಿಶಾಮಕ ಯಂತ್ರ ಬಳಸಿ ಅಗ್ನಿಶಾಮಕ ಠಾಣೆ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಿರಂತರವಾಗಿ ನಡೆಯಿತು. ನೀರಿನ ಜೊತೆ ಪಾಮ್ ಬಳಸಿ ಬೆಂಕಿ ನಿಯಂತ್ರಣಕ್ಕೆ ಪ್ರಯತ್ನ ಮಾಡಲಾಯಿತು. ಹೊಸ ಯಂತ್ರವಾದ ಏರಿಯಲ್ ಲ್ಯಾoಡರ್ ಪ್ಲಾಟ್ ಪಾರ್ಮ್‌ ಅನ್ನು ಬೆಂಕಿ ನಂದಿಸಲು ಬಳಕೆ ಮಾಡಿದ್ದು, 50 ಅಡಿ ಎತ್ತರದಲ್ಲಿ ಪಾಮ್‌ ಮಿಶ್ರಿತ ನೀರನ್ನು ವೇಗವಾಗಿ ಬರುವಂತೆ ಸಿಂಪಡಿಸಲಾಯಿತು.

ಯಾವ್ಯಾವ ಕಂಪನಿಗಳಿಗೆ ಬೆಂಕಿ: ವೇರ್ ಹೌಸ್ ಆವರಣದಲ್ಲಿ ಇತರ ನಾಲ್ಕು ಕಂಪನಿಗಳಾದ ಸೂಯಿಂಗ್ ಸಿಸ್ಟಮ್ ಪ್ರೈ ಲಿ., ಟು ಜಿ ಎಂ, ಒರಿಯನ್ ಅಪ್ಪೇರಲ್ ಟ್ರಿಮ್ಸ್, ಇಂಡಿಯಾ ಏಜನ್ಸಿಸ್ ಮುಂತಾದ ಗಾರ್ಮೇಂಟ್ಸ್, ಫ್ಯಾಬ್ರಿಕ್ಸ್ ಮತ್ತು ಕಾಟನ್ ವಸ್ತುಗಳ ಗೋದಾಮುಗಳಿದ್ದು, ಎಲ್ಲವೂ ನೋಡ ನೋಡುತ್ತಿದ್ದಂತೆ ಬೆಂಕಿಗಾಹುತಿ ಆಗಿವೆ.