2020ರ ಅ.2ರಂದು ವ್ಯಕ್ತಿ ಕೊಲೆ ಮಾಡಿದ್ದ ಐವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ, ದಂಡ

| N/A | Published : Mar 27 2025, 01:09 AM IST / Updated: Mar 27 2025, 04:14 AM IST

ಸಾರಾಂಶ

2020ರ ಅ.2ರಂದು ಆರೋಪಿಗಳು ಗಣಂಗೂರು ಸಮೀಪದ ಅತ್ಮಾನಂದ ಅವರಿಗೆ ಸೇರಿದ ಯೋಗಾನರಸಿಂಹಸ್ವಾಮಿ ಕ್ರಷರ್ ಬಳಿ ಮಂಡ್ಯ ತಾಲೂಕು ಉಮ್ಮಡಹಳ್ಳಿಯ ಪೂರ್ಣಚಂದ್ರನನ್ನು ಮಾರಕಾಸ್ತ್ರ ಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.

  ಶ್ರೀರಂಗಪಟ್ಟಣ : ವ್ಯಕ್ತಿಯನ್ನು ಕೊಲೆ ಮಾಡಿದ್ದ 5 ಮಂದಿ ಅಪರಾಧಿಗಳಿಗೆ ಪಟ್ಟಣದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶಿಸಿದೆ.

ತಾಲೂಕಿನ ಜಕ್ಕನಹಳ್ಳಿಯ ಮಂಜುನಾಥ್ ಅಲಿಯಾಸ್ ಎಂಎಂಟಿ ಮಂಜುನಾಥ್‌ಗೆ ಕಠಿಣ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ದಂಡ, ಗಣಂಗೂರು ಗ್ರಾಮದ ಜಿ.ವಿನಯಕುಮಾರ್ ಅಲಿಯಾಸ್ ಕರಿಯ, ಜಿ.ಕೆ.ಚಂದ್ರಶೇಖರ್ ಅಲಿಯಾಸ್ ಚಿನ್ನು, ಮಂಡ್ಯ ತಾಲೂಕಿನ ತೂಬಿನಕೆರೆ ಗ್ರಾಮದ ಶ್ರೀನಿವಾಸ್ ಅಲಿಯಾಸ್ ಸೀನ ಮತ್ತು ನಾಗಮಂಗಲ ತಾಲೂಕಿನ ಹೂವಿನಹಳ್ಳಿ ಎಚ್.ಕೆ.ಅಭಿಷೇಕ್ ಅಲಿಯಾಸ್ ಅಭಿ ಸೇರಿದಂತೆ ಈ ಐವರಿಗೆ ಕಠಿಣ- ಜೀವಾವಧಿ ಶಿಕ್ಷೆ ಮತ್ತು ತಲಾ 10 ಸಾವಿರ ದಂಡ ವಿಧಿಸಿ ಮೂರನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಗೋಪಾಲಕೃಷ್ಣ ರೈ ತೀರ್ಪು ನೀಡಿದ್ದಾರೆ.2020ರ ಅ.2ರಂದು ಆರೋಪಿಗಳು ಗಣಂಗೂರು ಸಮೀಪದ ಅತ್ಮಾನಂದ ಅವರಿಗೆ ಸೇರಿದ ಯೋಗಾನರಸಿಂಹಸ್ವಾಮಿ ಕ್ರಷರ್ ಬಳಿ ಮಂಡ್ಯ ತಾಲೂಕು ಉಮ್ಮಡಹಳ್ಳಿಯ ಪೂರ್ಣಚಂದ್ರನನ್ನು ಮಾರಕಾಸ್ತ್ರ ಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.

ಗ್ರಾಮಾಂತರ ಠಾಣೆ ಅಂದಿನ ಸಿಪಿಐ ಡಿ.ಯೋಗೇಶ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿ ಪ್ರಕರಣದ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಹಾಲಿ ಸಿಪಿಐ ಬಿ.ಜಿ.ಕುಮಾರ್ ನೇತೃತ್ವದ ಪೊಲೀಸರ ತಂಡ ಕೊಲೆ ಪ್ರಕರಣದ ಪ್ರತ್ಯಕ್ಷ ಸಾಕ್ಷಿಗಳನ್ನು ಕರೆ ತಂದು ನ್ಯಾಯಾಲಯದಲ್ಲಿ ಹೇಳಿಕೆ ಕೊಡಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಪ್ರಫುಲ್ಲಾ ವಾದ ಮಂಡಿಸಿದ್ದರು.