ಬ್ಯಾಂಕ್‌ಗಳಿಗೆ ₹168 ಕೋಟಿ ವಂಚನೆ: ಸೆರೆ

| Published : Mar 27 2024, 02:01 AM IST / Updated: Mar 27 2024, 11:26 AM IST

money

ಸಾರಾಂಶ

ಇ-ಬ್ಯಾಂಕ್ ಗ್ಯಾರೆಂಟಿಗಳನ್ನು ಪರಿಶೀಲಿಸುವಾಗ ₹168.13 ಕೋಟಿ ಮೊತ್ತದ ಇಬಿಜಿಗಳು ನಕಲಿ ಎಂಬುದು ಬೆಳಕಿಗೆ ಬಂದಿದ್ದು, ಇದನ್ನು ಸೃಷ್ಟಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿದೇಶದಲ್ಲಿ ಕುಳಿತು ವಿವಿಧ ಬ್ಯಾಂಕ್‌ಗಳ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ₹168 ಕೋಟಿ ಮೊತ್ತದ ಇ-ಬ್ಯಾಂಕ್‌ ಗ್ಯಾರಂಟಿಗಳನ್ನು ನೀಡಿ ವಂಚಿಸಿದ್ದ ಮೋಸಗಾರನೊಬ್ಬನನ್ನು ಸೈಬರ್ ಕ್ರೈಂ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ಉತ್ತರಪ್ರದೇಶದ ನೋಯ್ಡಾ ನಗರದ ಆಶೀಶ್‌ ಸಕ್ಸೇನಾ ಅಲಿಯಾಸ್‌ ಆಶೀಶ್ ರಾಯ್ ಬಂಧಿತನಾಗಿದ್ದು, ಆರೋಪಿಯಿಂದ 2 ಲ್ಯಾಪ್‌ಟಾಪ್‌ಗಳು, 6 ಮೊಬೈಲ್‌ಗಳು, ಒಂದು ಪೆನ್ ಡ್ರೈವ್‌ ಹಾಗೂ 10 ವಿವಿಧ ಬ್ಯಾಂಕ್‌ಗಳ ಚೆಕ್‌ ಪುಸ್ತಕಗಳನ್ನು ಜಪ್ತಿ ಮಾಡಲಾಗಿದೆ. ತಪ್ಪಿಸಿಕೊಂಡಿರುವ ಮತ್ತೊಬ್ಬನ ಪತ್ತೆಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಈ ವಂಚನೆ ಕೃತ್ಯ ಸಂಬಂಧ ಕುವೈತ್‌ನಲ್ಲಿ ನೆಲೆಸಿದ್ದ ಆಶೀಶ್ ವಿರುದ್ಧ ಲುಕ್ ಔಟ್‌ ನೋಟಿಸ್‌ ಹೊರಡಿಸಲಾಗಿತ್ತು. ಮಾ.13ರಂದು ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕುವೈತ್‌ನಿಂದ ಆತ ಬಂದಿಳಿದಾಗ ವಲಸೆ ವಿಭಾಗದ ನೆರವಿನಿಂದ ವಶಕ್ಕೆ ಪಡೆದು ಬಂಧಿಸಿ ಕರೆತರಲಾಗಿದೆ ಎಂದು ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ನಕಲಿ ದಾಖಲೆ ಸೃಷ್ಟಿಸಿ ವಂಚನೆ?
ಸರ್ಕಾರಕ್ಕೆ ಸಲ್ಲಿಕೆಯಾಗುವ ಇ-ಬ್ಯಾಂಕ್ ಗ್ಯಾರೆಂಟ್‌ಗಳನ್ನು ಪರಿಶೀಲಿಸುವ ಸಂಸ್ಥೆಯಾದ ನ್ಯಾಷನಲ್‌ ಇ-ಗೌರ್ವನೆನ್ಸ್ ಸರ್ವೀಸ್‌ ಲಿಮಿಟೆಡ್‌ (ಎನ್‌ಇಎಸ್‌ಎಲ್‌), ಇತ್ತೀಚಿಗೆ ಇ-ಬ್ಯಾಂಕ್ ಗ್ಯಾರೆಂಟಿಗಳನ್ನು ಪರಿಶೀಲಿಸುವಾಗ 11 ವ್ಯಕ್ತಿಗಳು ಸಲ್ಲಿಸಿದ್ದ ಸುಮಾರು ₹168.13 ಕೋಟಿ ಮೊತ್ತದ ಇಬಿಜಿಗಳು ನಕಲಿ ಎಂಬುದು ಬೆಳಕಿಗೆ ಬಂದಿದೆ. 

ತಕ್ಷಣವೇ ಈ ಬಗ್ಗೆ ಸೈಬರ್‌ ಕ್ರೈಂ ಪೊಲೀಸ್ ಠಾಣೆಗೆ ಎನ್‌ಇಎಸ್‌ಎಲ್‌ ಅಧಿಕಾರಿ ದೂರು ನೀಡಿದ್ದರು ಎಂದು ಆಯುಕ್ತರು ಹೇಳಿದ್ದಾರೆ.

ಅದರನ್ವಯ ನಕಲಿ ಇಬಿಜಿ ಸಲ್ಲಿಸಿದ್ದ 11 ವ್ಯಕ್ತಿಗಳ ಪೂರ್ವಾಪರ ದಾಖಲೆಗಳು, ಮೊಬೈಲ್‌ ಸಂಖ್ಯೆಗಳು ಹಾಗೂ ಬ್ಯಾಂಕ್‌ ಖಾತೆಗಳನ್ನು ಪೊಲೀಸರು ಪರಿಶೀಲಿಸಿದರು. 

ಆಗ ಎನ್ಇಎಸ್‌ಎಲ್‌ ಪೋರ್ಟಲ್‌ಗೆ ಐಸಿಐಸಿ ಬ್ಯಾಂಕ್ ಹಾಗೂ ಸೌತ್ ಇಂಡಿಯಾ ಬ್ಯಾಂಕ್‌ಗಳ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಇಬಿಜಿಗಳನ್ನು ಸಲ್ಲಿಸಿರುವುದು ಗೊತ್ತಾಯಿತು. 

ಈ ಆರೋಪಿಗಳ ಬಗ್ಗೆ ಬೆನ್ನುಹತ್ತಿದ್ದಾಗ ಪ್ರಮುಖ ಆರೋಪಿ ಕುವೈತ್‌ನಲ್ಲಿರುವುದು ತಿಳಿಯಿತು. ಕೊನೆಗೆ ಆತನ ವಿರುದ್ಧ ಲುಕ್‌ ಔಟ್ ನೋಟೀಸ್ ಜಾರಿಗೊಳಿಸಲಾಯಿತು ಎಂದು ಆಯುಕ್ತರು ವಿವರಿಸಿದ್ದಾರೆ. ಏನೀದು ಇ-ಬ್ಯಾಂಕ್‌ ಗ್ಯಾರೆಂಟಿ?

ಸರ್ಕಾರದ ಗುತ್ತಿಗೆ ಪಡೆಯುವಾಗ ಕಾಮಗಾರಿ ನಿಗದಿಪಡಿಸಿದ ಮೊತ್ತಕ್ಕೆ ಗುತ್ತಿಗೆದಾರರು ಇ-ಬ್ಯಾಂಕ್ ಗ್ಯಾರೆಂಟಿಗಳನ್ನು ಸಲ್ಲಿಸಬೇಕಾಗುತ್ತದೆ. 

ಒಂದು ವೇಳೆ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸದೆ ಹೋದರೆ ಅಥವಾ ಲೋಪ ವೆಸಗಿದ್ದರೆ ಇಬಿಜಿಗಳನ್ನು ಸರ್ಕಾರವು ಈ ಹಣವನ್ನು ತನ್ನ ವಶಕ್ಕೆ ಪಡೆಯಬಹುದು. 

ಅಂದರೆ ₹100 ಕೋಟಿ ಕಾಮಗಾರಿಗೆ ಅಷ್ಟೇ ಮೊತ್ತದ ಬ್ಯಾಂಕ್ ಗ್ಯಾರೆಂಟಿಯನ್ನು ಗುತ್ತಿಗೆದಾರ ನೀಡಬೇಕಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ವಿದೇಶದಲ್ಲಿದ್ದು ವಂಚಿಸಿದ ಸಿಎ: ಸಕ್ಸೇನಾ ಲೆಕ್ಕಪರಿಶೋಧಕನಾಗಿದ್ದು, ತನ್ನ ಪರಿಚಿತ ಸಿಎಗಳ ಮೂಲಕ ಗುತ್ತಿಗೆದಾರರನ್ನು ಪರಿಚಯಿಸಿಕೊಂಡು ಆತ ವಂಚಿಸಿದ್ದ. 

ಬೆಂಗಳೂರು, ಬೆಂಗಳೂರು ಗ್ರಾಮಾಂತರ ಹಾಗೂ ತುಮಕೂರಿನಲ್ಲಿ ಸಕ್ಸೇನಾ ವಿರುದ್ಧ ಐದು ಪ್ರಕರಣಗಳು ದಾಖಲಾಗಿವೆ. ಇಬ್ಬರು ಗುತ್ತಿಗೆದಾರರಿಗೆ ಸಕ್ಸೇನಾ ₹5 ಕೋಟಿ ವಂಚಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. 

ಅಲ್ಲದೆ ಗುಜರಾತ್‌ ಹಾಗೂ ದೆಹಲಿಯಲ್ಲಿ ಇದೇ ರೀತಿ ಆರೋಪಿಗಳು ವಂಚಿಸಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಟೆಂಡರ್ ಪಡೆಯಲು ಸರ್ಕಾರಕ್ಕೆ ಇಬಿಜಿ ಗಳನ್ನು ನೀಡಬೇಕು. ಕೆಲ ಬ್ಯಾಂಕ್‌ಗಳು ಗುತ್ತಿಗೆದಾರ ಅಥವಾ ಸಂಸ್ಥೆಗಳ ವಾರ್ಷಿಕ ಹಣಕಾಸು ವಹಿವಾಟು ಆಧರಿಸಿ ಗ್ಯಾರಂಟಿಗಳನ್ನು ಮಂಜೂರು ಮಾಡುತ್ತವೆ. 

ಆದರೆ ಕೆಲವು ಬಾರಿ ಹಣಕಾಸು ಅಸಮರ್ಪಕ ನಿರ್ವಹಣೆ ಕಾರಣಕ್ಕೆ ಗ್ಯಾರಂಟಿ ಕೊಡಲು ನಿರಾಕರಿಸುತ್ತವೆ. ಆಗ ಅನ್ಯ ಮಾರ್ಗದಲ್ಲಿ ತಮಗೆ ಗೊತ್ತಿರುವ ಬ್ಯಾಂಕ್‌ಗಳ ಮೂಲಕ ಇ-ಬ್ಯಾಂಕ್‌ ಗ್ಯಾರೆಂಟಿ ಕೊಡಿಸುವುದಾಗಿ ಗುತ್ತಿಗೆದಾರರನ್ನು ನಂಬಿಸುತ್ತಿದ್ದ. ಬ

ಳಿಕ ಅವರಿಂದ ಹಣ ಪಡೆದು ಸಕ್ಸೇನಾ ವಂಚಿಸಿದ್ದಾನೆ. ಬ್ಯಾಂಕ್‌ಗಳ ಹೆಸರಿನಲ್ಲಿ ತಾನೇ ಇ-ಬ್ಯಾಂಕ್‌ ಗ್ಯಾರೆಂಟಿ ದಾಖಲೆ ಸೃಷ್ಟಿಸಿ ನೀಡಿದ್ದ. ಇವುಗಳ ಪರಿಶೀಲನೆ ವೇಳೆ ವಂಚನೆ ಬೆಳಕಿಗೆ ಬಂದಿದೆ.ತಂದೆ ಮೂಲಕ ವಂಚನೆಗೆ ಗಾಳ

ಸಕ್ಸೇನಾ ತಂದೆ ನಿವೃತ್ತ ಸೇನಾಧಿಕಾರಿ ಆಗಿದ್ದಾರೆ. ಈ ವಂಚನೆ ಪ್ರಕರಣ ಸಂಬಂಧ ಆರೋಪಿ ಮನೆಗೆ ತೆರಳಿ ನೋಟಿಸ್ ನೀಡಲಾಯಿತು. ತನ್ನ ಪುತ್ರನ ವಂಚನೆ ಕೃತ್ಯದ ಬಗ್ಗೆ ತಿಳಿದು ಸಕ್ಸೇನಾ ತಂದೆ ನೊಂದರು. 

ಕೂಡಲೇ ತನ್ನ ಪುತ್ರನನ್ನು ಸಂಪರ್ಕಿಸಿ ಪೊಲೀಸರ ತನಿಖೆಗೆ ಸಹಕರಿಸುವಂತೆ ಅವರು ಬುದ್ಧಿ ಹೇಳಿದ್ದಾರೆ. ಕೊನೆಗೆ ತಂದೆ ಮಾತಿಗೆ ಕಟ್ಟಿಬಿದ್ದು ವಿದೇಶದಿಂದ ಆತ ಮರಳಿದ ಎಂದು ಮೂಲಗಳು ಹೇಳಿವೆ.