ಸಾರಾಂಶ
ಸೈಬರ್ ವಂಚಕರು ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ವೃದ್ಧೆಗೆ ಕರೆ ಮಾಡಿ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿದೆ ಎಂದು ಬೆದರಿಸಿ ಬ್ಯಾಂಕ್ ಖಾತೆ ಪರಿಶೀಲಿಸುವುದಾಗಿ ₹42.85 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ ಆರೋಪದಡಿ ವೈಟ್‌ಫೀಲ್ಡ್ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಸೈಬರ್ ವಂಚಕರು ಸಿಬಿಐ ಅಧಿಕಾರಿಗಳ ಸೋಗಿನಲ್ಲಿ 77 ವರ್ಷದ ವೃದ್ಧೆಗೆ ಕರೆ ಮಾಡಿ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿದೆ ಎಂದು ಬೆದರಿಸಿ ಬ್ಯಾಂಕ್ ಖಾತೆ ಪರಿಶೀಲಿಸುವುದಾಗಿ ₹42.85 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ ಆರೋಪದಡಿ ವೈಟ್‌ಫೀಲ್ಡ್ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೂಡಿ ಸರ್ಕಲ್ ನಿವಾಸಿ ಕೆ.ಎನ್.ಸಾವಿತ್ರಿ ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ಅಪರಿಚಿತರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಕಲಂ 66(ಸಿ), 66(ಡಿ), ಬಿಎನ್‌ಎಸ್ ಕಲಂ 318(4), 319(2) ಅಡಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಪ್ರಕರಣ?:
ದೂರುದಾರರಾದ ಸಾವಿತ್ರಿ ಅವರು ನಿವೃತ್ತ ಸರ್ಕಾರಿ ನೌಕರರಾಗಿದ್ದಾರೆ. ಇತ್ತೀಚೆಗೆ ಅಪರಿಚಿತ ವ್ಯಕ್ತಿ ಸಾವಿತ್ರಿ ಅವರ ಮೊಬೈಲ್‌ಗೆ ಕರೆ ಮಾಡಿ ತಾನು ಟ್ರಾಯ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ನಿಮ್ಮ ಹೆಸರಿನಲ್ಲಿ ಅಕ್ರಮ ಮಾರ್ಕೆಟಿಂಗ್ ಮತ್ತು ನಿಂದನೆ ಸಂದೇಶಗಳು ಹಲವು ಜನರಿಗೆ ಹೋಗಿದೆ. ಈ ಸಂಬಂಧ ನಮಗೆ ದೂರುಗಳು ಬಂದಿದ್ದು, ಎಫ್‌ಐಆರ್ ಸಹ ದಾಖಲಾಗಿದೆ ಎಂದು ತಿಳಿಸಿದ್ದಾನೆ.
ಈ ಪ್ರಕರಣದಲ್ಲಿ ನಿಮಗೆ ಸಹಾಯ ಮಾಡುವುದಾಗಿ ಹೇಳಿ ಮುಂಬೈ ಪೊಲೀಸರಿಗೆ ಸಂಪರ್ಕ ಕಲ್ಪಿಸುವುದಾಗಿ ಅಪರಿಚಿತ ವ್ಯಕ್ತಿಗಳಿಗೆ ಮೊಬೈಲ್ ಕರೆ ಸಂಪರ್ಕ ನೀಡಿದ್ದಾನೆ. ಬಳಿಕ ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿರುವ ಅಪರಿಚಿತರು, ನಿಮ್ಮ ಹೇಳಿಕೆ ದಾಖಲಿಸಬೇಕು ಎಂದಿದ್ದಾರೆ. ನಿಮ್ಮ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿದ್ದು, ಬ್ಯಾಂಕ್ ಖಾತೆ ಪರಿಶೀಲಿಸಬೇಕು. ಹೀಗಾಗಿ ನಿಮ್ಮ ಖಾತೆಯಲ್ಲಿರುವ ಹಣವನ್ನು ನಾವು ನೀಡುವ ಬ್ಯಾಂಕ್ ಖಾತೆಗೆ ವರ್ಗಾಯಿಸಬೇಕು. ಪರಿಶೀಲನೆ ಬಳಿಕ ಹಣ ವಾಪಾಸ್ ಹಾಕುವುದಾಗಿ ತಿಳಿಸಿದ್ದಾರೆ.
ವಿವಿಧ ಹಂತಗಳಲ್ಲಿ ₹42.85 ಲಕ್ಷ ವರ್ಗಾ:
ಅಪರಿಚಿತರ ಮಾತು ನಂಬಿದ ಸಾವಿತ್ರಿ, ದುಷ್ಕರ್ಮಿಗಳು ನೀಡಿದ ಬ್ಯಾಂಕ್ ಖಾತೆಗಳಿಗೆ ವಿವಿಧ ಹಂತಗಳಲ್ಲಿ ಒಟ್ಟು ₹42.85 ಲಕ್ಷ ವರ್ಗಾಯಿಸಿದ್ದಾರೆ. ಬಳಿಕ ದುಷ್ಕರ್ಮಿಗಳು ಕರೆ ಸ್ಥಗಿತಗೊಳಿಸಿದ್ದಾರೆ. ಹಲವು ಬಾರಿ ಕರೆ ಮಾಡಿದರೂ ದುಷ್ಕರ್ಮಿಗಳು ಕರೆ ಸ್ವೀಕರಿಸಿಲ್ಲ. ಬಳಿಕ ತಾನು ಸೈಬರ್ ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದಿದೆ.
ಹೀಗಾಗಿ ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ವಂಚಿಸಿದ ದುಷ್ಕರ್ಮಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಾವಿತ್ರಿ ಅವರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಸೈಬರ್ ವಂಚಕರ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.