ಬೆಂಗಳೂರು : ಡ್ರಗ್ಸ್‌ ಸಾಗಿಸುತ್ತಿದ್ದೀರಾ ಎಂದು ಬೆದರಿಸಿ ಮಹಿಳಾ ಟೆಕಿಗೆ ₹40 ಲಕ್ಷ ವಂಚನೆ

| Published : Nov 19 2024, 12:51 AM IST / Updated: Nov 19 2024, 04:36 AM IST

ಸಾರಾಂಶ

ವಿದೇಶಕ್ಕೆ ಮಾದಕವಸ್ತು ಕಳ್ಳ ಸಾಗಣೆ ಪ್ರಕರಣದಲ್ಲಿ ಸಹಾಯ ಮಾಡುವುದಾಗಿ ಮುಂಬೈ ಪೊಲೀಸರ ಸೋಗಿನಲ್ಲಿ ಸೈಬರ್‌ ವಂಚಕರು ನಗರದ ಮಹಿಳಾ ಟೆಕಿಯಿಂದ ಬರೋಬ್ಬರಿ ₹40 ಲಕ್ಷ ವರ್ಗಾವಣೆ ಮಾಡಿಸಿಕೊಂಡು ಬಳಿಕ ವಂಚಿಸಿದ ಆರೋಪದಡಿ ಪಶ್ಚಿಮ ವಿಭಾಗದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಬೆಂಗಳೂರು : ವಿದೇಶಕ್ಕೆ ಮಾದಕವಸ್ತು ಕಳ್ಳ ಸಾಗಣೆ ಪ್ರಕರಣದಲ್ಲಿ ಸಹಾಯ ಮಾಡುವುದಾಗಿ ಮುಂಬೈ ಪೊಲೀಸರ ಸೋಗಿನಲ್ಲಿ ಸೈಬರ್‌ ವಂಚಕರು ನಗರದ ಮಹಿಳಾ ಟೆಕಿಯಿಂದ ಬರೋಬ್ಬರಿ ₹40 ಲಕ್ಷ ವರ್ಗಾವಣೆ ಮಾಡಿಸಿಕೊಂಡು ಬಳಿಕ ವಂಚಿಸಿದ ಆರೋಪದಡಿ ಪಶ್ಚಿಮ ವಿಭಾಗದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜರಾಜೇಶ್ವರನಗರ ನಿವಾಸಿ ಎ.ಸಿ.ಪ್ರಕೃತಿ(30) ವಂಚನೆಗೆ ಒಳಗಾದ ಸಾಫ್ಟ್‌ವೇರ್‌ ಎಂಜಿನಿಯರ್‌. ಇವರು ನೀಡಿದ ದೂರಿನ ಮೇರೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?:

ಇತ್ತೀಚೆಗೆ ಪ್ರಕೃತಿ ಅವರ ಮೊಬೈಲ್‌ಗೆ ಅಪರಿಚಿತ ವ್ಯಕ್ತಿ ಕರೆ ಮಾಡಿದ್ದು, ತಾನು ಡಿಎಚ್ಎಲ್‌ ಕೊರಿಯರ್‌ ಆಫೀಸ್‌ನಿಂದ ಮಾತನಾಡುತ್ತಿರುವುದಾಗಿ ಪರಿಚಯಿಸಿಕೊಂಡಿದ್ದಾನೆ. ಬಳಿಕ ನಿಮ್ಮ ಹೆಸರಿನಲ್ಲಿ ಮುಂಬೈನಿಂದ ಇರಾನ್‌ಗೆ ಪಾರ್ಸೆಲ್‌ವೊಂದು ಹೋಗುತ್ತಿದೆ. ನಿಮ್ಮ ಹೆಸರಿನ ವೈಯಕ್ತಿಕ ದಾಖಲಾತಿ ಮತ್ತು ಮೊಬೈಲ್‌ ಸಂಖ್ಯೆ ಕೊರಿಯರ್‌ಗೆ ಲಿಂಕ್‌ ಆಗಿದೆ. ಈ ಬಗ್ಗೆ ನಿಮಗೆ ಏನಾದರೂ ಗೊತ್ತೆ ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಪ್ರಕೃತಿ ಗೊತ್ತಿಲ್ಲ ಎಂದಿದ್ದಾರೆ. ಈ ವೇಳೆ ಆ ಅಪರಿಚಿತ ವ್ಯಕ್ತಿ ಪಾರ್ಸೆಲ್‌ನಲ್ಲಿ 15 ಕೆ.ಜಿ. ಜನರಲ್‌ ಮೆಡಿಷನ್‌, 150 ಎಂಡಿಎಂಎ ಮಾದಕ ಮಾತ್ರೆಗಳು ಇವೆ. ಈ ಪಾರ್ಸೆಲ್‌ ಸದ್ಯಕ್ಕೆ ಮುಂಬೈ ಏರ್‌ಪೋರ್ಟ್‌ನ ಕಸ್ಟಮ್ಸ್‌ನಲ್ಲಿದೆ ಎಂದಿದ್ದಾನೆ.

ವಿಡಿಯೋ ಕರೆ ಮಾಡಿ ವಿಚಾರಣೆ:

ಮುಂಬೈ ಕಂಟ್ರೋಲ್‌ ರೂಮ್‌ಗೆ ನಿಮ್ಮ ಕರೆ ಕನೆಕ್ಟ್‌ ಮಾಡುವುದಾಗಿ ಮತ್ತೊಬ್ಬ ಅಪರಿಚಿತ ವ್ಯಕ್ತಿಗೆ ಕರೆ ಕನೆಕ್ಟ್‌ ಮಾಡಿದ್ದಾನೆ. ಬಳಿಕ ಆ ವ್ಯಕ್ತಿಯ ಸೂಚನೆ ಮೇರೆಗೆ ಪ್ರಕೃತಿ ಟೆಲಿಗ್ರಾಮ್‌ ಆ್ಯಪ್‌ ಡೌನ್‌ಲೌಡ್‌ ಮಾಡಿದ್ದಾರೆ. ಬಳಿಕ ಮುಂಬೈ ನಾರ್ಕೊಟಿಕ್ಸ್‌ ಡಿಪಾರ್ಟ್‌ಮೆಂಟ್‌ ಹೆಸರಿನ ಐಡಿಯಿಂದ ವಿಡಿಯೋ ಕಾಲ್‌ ಕನೆಕ್ಟ್‌ ಆಗಿದೆ. ವಿಡಿಯೋ ಕರೆಯಲ್ಲಿ ಮಾತನಾಡಿದ ವ್ಯಕ್ತಿಯು, ಆರು ತಿಂಗಳ ಹಿಂದೆ ಒಬ್ಬ ಕ್ರಿಮಿನಲ್‌ನನ್ನು ಬಂಧಿಸಿದ್ದೇವೆ. ಆತನ ಕಡೆಯವರು ಸಾರ್ವಜನಿಕರ ಬ್ಯಾಂಕ್‌ ಮಾಹಿತಿ ಸಂಗ್ರಹಿಸಿ ಪಾರ್ಸೆಲ್‌ಗಳನ್ನು ವಿದೇಶಕ್ಕೆ ಕಳುಹಿಸುತ್ತಿದ್ದಾರೆ. ನಿಮಗೂ ಇದೇ ರೀತಿ ಮಾಡಿದ್ದಾರೆ ಎಂದಿದ್ದಾನೆ.

ಸಹಾಯದ ನೆಪದಲ್ಲಿ ವೈಯಕ್ತಿಕ ಮಾಹಿತಿ ಸಂಗ್ರಹ:

ಬಳಿಕ ಪ್ರಕೃತಿ ಅವರಿಗೆ ಒಂದು ಪತ್ರ ಕಳುಹಿಸಿದ್ದು, ಓದುವಂತೆ ಹೇಳಿದ್ದಾನೆ. ಪ್ರಕೃತಿ ಹೆಸರಿನಲ್ಲಿ ದೂರು ನೀಡುವಂತೆ ಆ ಪತ್ರದಲ್ಲಿ ಬರೆದಿರುವುದು ಕಂಡು ಬಂದಿದೆ. ಬಳಿಕ ಪೊಲೀಸ್‌ ಕ್ಲಿಯರೆನ್ಸ್‌ ಸರ್ಟಿಫಿಕೆಟ್‌ ಕೊಡುವುದಾಗಿ ಹೇಳಿದ ಆ ವ್ಯಕ್ತಿ, ನಾನು ಕೇಳುವ ಪ್ರಶ್ನೆಗೆ ಸರಿಯಾಗಿ ಉತ್ತರ ಕೊಡಬೇಕು. ಇಲ್ಲವಾದರೆ, ಡ್ರಗ್ಸ್‌ ಕೇಸ್‌ನಲ್ಲಿ ಬಂಧಿಸುವುದಾಗಿ ಪ್ರಕೃತಿ ಅವರನ್ನು ಬೆದರಿಸಿದ್ದಾನೆ. ಬಳಿಕ ಆ ಅಪರಿಚಿತ ವ್ಯಕ್ತಿ ಪ್ರಕೃತಿ ಅವರಿಂದ ವೈಯಕ್ತಿಕ ದಾಖಲಾತಿ ಮಾಹಿತಿ, ಬ್ಯಾಂಕ್‌ ಖಾತೆ ಮಾಹಿತಿ, ಕುಟುಂಬದವರ ಮಾಹಿತಿ ಪಡೆದುಕೊಂಡಿದ್ದಾನೆ.

ವಿವಿಧ ಹಂತಗಳಲ್ಲಿ ₹40 ಲಕ್ಷ ವರ್ಗ:

ಬಳಿಕ ಈ ಪ್ರಕರಣದಲ್ಲಿ ನಿನಗೆ ಸಹಾಯ ಮಾಡುವುದಾಗಿ ನಂಬಿಸಿ, ನಾವು ಕೊಡುವ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ ಮಾಡಬೇಕು. ಆರ್‌ಬಿಐ ಅಧಿಕಾರಿಗಳು ಪರಿಶೀಲಿಸಿದಾಗ ಬಳಿಕ ಆ ಹಣವನ್ನು ವಾಪಾಸ್‌ ನಿನ್ನ ಖಾತೆಗೆ ವರ್ಗಾಯಿಸುವುದಾಗಿ ಹೇಳಿದ್ದಾನೆ. ಅದರಂತೆ ಪ್ರಕೃತಿ ವಿವಿಧ ಹಂತಗಳಲ್ಲಿ ಅಪರಿಚಿತ ವ್ಯಕ್ತಿ ನೀಡಿದ ಬ್ಯಾಂಕ್‌ ಖಾತೆಗಳಿಗೆ ಒಟ್ಟು ₹40 ಲಕ್ಷ ವರ್ಗಾಯಿಸಿದ್ದಾರೆ.

ಕೆಲ ಸಮಯದ ಬಳಿಕ ಅಪರಿಚಿತರು ಹಣವನ್ನು ವಾಪಸ್‌ ಹಾಕದೆ ಸಂಪರ್ಕ ಕಡಿತಗೊಳಿಸಿದ್ದಾರೆ. ಈ ವೇಳೆ ಪ್ರಕೃತಿಗೆ ತಾನು ಸೈಬರ್‌ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ಈ ಸಂಬಂಧ ಪಶ್ಚಿಮ ವಿಭಾಗದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.