ಸಾರಾಂಶ
ಬೆಂಗಳೂರು : ಅಡುಗೆ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಸ್ಫೋಟಗೊಂಡು ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬಿಟಿಎಂ ಲೇಔಟ್ 1ನೇ ಹಂತದ ಮಂಜುನಾಥ ಲೇಔಟ್ ನಿವಾಸಿ ಪವನ್(36) ಗಾಯಗೊಂಡವರು. ಸೋಮವಾರ ಬೆಳಗ್ಗೆ ಸುಮಾರು 8.30ಕ್ಕೆ ಈ ಘಟನೆ ನಡೆದಿದೆ. ಸ್ಫೋಟದಿಂದ ಪವನ್‌ಗೆ ಶೇ.60ಕ್ಕೂ ಅಧಿಕ ಸುಟ್ಟುಗಳಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಆತನ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರಪ್ರದೇಶ ಮೂಲದ ಪವನ್ ಕಳೆದ 17 ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾನೆ. ಅಡುಗೆ ಕೆಲಸ ಮಾಡುವ ಪವನ್ ಕಳೆದ ಹತ್ತು ವರ್ಷಗಳಿಂದ ಮಂಜುನಾಥ ಲೇಔಟ್‌ನ ಜಾನಕಿ ಎಂಬುವರ ಕಟ್ಟಡದಲ್ಲಿ ಬಾಡಿಗೆಯ ರೂಮ್‌ನಲ್ಲಿ ನೆಲೆಸಿದ್ದಾನೆ. ರೂಮ್‌ನಲ್ಲಿ ಅಡುಗೆ ಮಾಡಲು ಇಟ್ಟುಕೊಂಡಿದ್ದ ಗ್ಯಾಸ್ ಸಿಲಿಂಡರ್ ರಾತ್ರಿ ಖಾಲಿಯಾಗಿದ್ದ ಹಿನ್ನೆಲೆ ಹೊಸ ಗ್ಯಾಸ್ ಸಿಲಿಂಡರ್ ತರಿಸಿಕೊಂಡು ರೆಗ್ಯೂಲೆಟರ್ ಅಳವಡಿಸಿದ್ದ. ಸೋಮವಾರ ಬೆಳಗ್ಗೆ ಸುಮಾರು 8.30ಕ್ಕೆ ಹಾಲು ಕಾಯಿಸಲು ಗ್ಯಾಸ್ ಸ್ಟೌವ್ ಹಚ್ಚಿದಾಗ ಏಕಾಏಕಿ ಸ್ಫೋಟ ಸಂಭವಿಸಿದೆ.
ಸ್ಫೋಟದ ರಭಸಕ್ಕೆ ರೂಮ್‌ನ ಒಂದು ಬದಿಯ ಗೋಡೆಯೇ ಮುರಿದು ಬಿದ್ದಿದೆ. ಅಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಸ್ಫೋಟದಿಂದ ಪವನ್ ಗಂಭೀರವಾಗಿ ಗಾಯಗೊಂಡು ಕುಸಿದು ಬಿದ್ದಿದ್ದಾನೆ. ಸ್ಫೋಟದ ಶಬ್ಧ ಕೇಳಿ ಸ್ಥಳೀಯರು ಕೂಡಲೇ ಸ್ಥಳಕ್ಕೆ ಬಂದ ಗಾಯಾಳು ಪವನ್‌ನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಪವನ್ ರಾತ್ರಿ ಗ್ಯಾಸ್ ಸಿಲಿಂಡರ್‌ಗೆ ಸರಿಯಾಗಿ ರೆಗ್ಯೂಲೇಟರ್ ಅಳವಡಿಸಿಲ್ಲ. ಹೀಗಾಗಿ ಇಡೀ ರಾತ್ರಿ ಅನಿಲ ಸೋರಿಕೆಯಾಗಿ ರೂಮ್‌ಗೆ ಹರಡಿಕೊಂಡಿದೆ. ಬೆಳಗ್ಗೆ ಪವನ್ ಹಾಲು ಕಾಯಿಸಲು ಗ್ಯಾಸ್ ಸ್ಟೌವ್ ಆನ್ ಮಾಡಿದ ವೇಳೆ ಸ್ಫೋಟ ಸಂಭವಿಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಸಂಬಂಧ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.