ಸಾರಾಂಶ
ಮಂಡ್ಯ : ತೀವ್ರ ಸಂಚಲನ ಮೂಡಿಸಿದ್ದ ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಬಾಲಕಿ ಮೇಲೆ ಅತ್ಯಾಚಾರವೇ ನಡೆದಿಲ್ಲವೆಂದು ವೈದ್ಯಕೀಯ ವರದಿ ದೃಢಪಡಿಸಿದೆ.
ಘಟನೆ ಕುರಿತಂತೆ ಬಾಲಕಿ ಹಾಗೂ ಪೋಷಕರಿಂದ ಭಿನ್ನ ಹೇಳಿಕೆಗಳು ವ್ಯಕ್ತವಾಗಿದ್ದರಿಂದ ಪ್ರಕರಣ ಪೊಲೀಸರಲ್ಲಿ ಗೊಂದಲ ಮೂಡಿಸಿತ್ತು. ಆರಂಭದಲ್ಲಿ ಬಾಲಕಿಯ ಪೋಷಕರು ಅತ್ಯಾಚಾರದ ನಡೆದಿರುವುದಾಗಿ ಹೇಳಿದ್ದರು. ಆದರೆ, ಬಾಲಕಿಯಿಂದ ಪೊಲೀಸರು ಹೇಳಿಕೆ ಪಡೆದಾಗ ಆಕೆ ಹೊಟ್ಟೆಯ ಭಾಗಕ್ಕೆ ಮೂವರು ಹಲ್ಲೆ ನಡೆಸಿದ್ದಾಗಿ, ಈ ವಿಷಯವನ್ನು ಯಾರಿಗೂ ಹೇಳದಂತೆ ಹೆದರಿಸಿದ್ದಾಗಿ ಮಾಹಿತಿ ನೀಡಿದಳು.
ನಂತರ ಬಂದ ವೈದ್ಯಕೀಯ ವರದಿಯಲ್ಲಿ ಅತ್ಯಾಚಾರ ನಡೆದಿಲ್ಲದಿರುವುದು ಸ್ಪಷ್ಟವಾಗಿದ್ದರಿಂದ ಪೊಲೀಸರು ನಿಟ್ಟುಸಿರು ಬಿಟ್ಟರು. ಸುಳ್ಳು ದೂರು ನೀಡಿದ ಬಾಲಕಿಯ ಪೋಷಕರಿಗೆ ಎಚ್ಚರಿಕೆ ನೀಡಿದರು.
ಮೋಟಾರ್ ಬೈಕ್ ಕಳವು, ದೂರು ದಾಖಲು
ಹಲಗೂರು: ಜಮೀನಿನ ಬಳಿ ನಿಲ್ಲಿಸಿದ್ದ ಮೋಟಾರ್ ಬೈಕ್ ಅನ್ನು ಕಳ್ಳರು ಕದ್ದೊಯ್ದ ಘಟನೆ ಚೆನ್ನೀಪುರ ರಸ್ತೆಯಲ್ಲಿ ಕಳೆದ ಜ.24 ರಂದು ನಡೆದಿದೆ. ಸಮೀಪದ ಬಸವನಪುರ ಗ್ರಾಮದ ನಂದೀಶ್ ಬಿನ್ ಶಾಂತ ವೀರಪ್ಪ ಬೈಕ್ ಕಳೆದುಕೊಂಡವರು. ನಂದೀಶ್ ಅಂದು ಬೆಳಗ್ಗೆ ಏಳು ಗಂಟೆ ಸಮಯದಲ್ಲಿ ತಮ್ಮ ಬೈಕ್ ಅನ್ನು ರಸ್ತೆಯಲ್ಲಿ ನಿಲ್ಲಿಸಿ ಜಮೀನಿನಲ್ಲಿ ಕೆಲಸಕ್ಕೆ ತೆರಳಿದ್ದರು. ಕೆಲಸ ಮುಗಿಸಿ ಹಿಂದುರುಗಿ ಬಂದು ನೋಡಿದಾಗ ರಸ್ತೆಯಲ್ಲಿ ಬೈಕ್ ನಾಪತ್ತೆಯಾಗಿತ್ತು. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.