ಸಾರಾಂಶ
ನನ್ನ ಅತ್ತೆ ಕಾಟ ಜಾಸ್ತಿ ಆಗಿದೆ ಅವರನ್ನು ಸಾಯಿಸಲು ಮಾತ್ರೆ ಕೊಡಿ ಎಂದು ಸೊಸೆಯೊಬ್ಬರು ವೈದ್ಯರಿಗೆ ಸಂದೇಶ ಕಳುಹಿಸಿರುವ ವಿಚಿತ್ರ ಘಟನೆ ನಡೆದಿದೆ.
ಬೆಂಗಳೂರು : ತನಗೆ ಕಾಡುತ್ತಿರುವ ಅತ್ತೆಯನ್ನು ಕೊಲ್ಲಲು ಮಾತ್ರೆ ಬರೆದುಕೊಡುವಂತೆ ವೈದ್ಯರೊಬ್ಬರಿಗೆ ಅಪರಿಚಿತ ಮಹಿಳೆ ಮೆಸೇಜ್ ಮಾಡಿ ನೆರವು ಕೋರಿರುವ ವಿಚಿತ್ರ ಘಟನೆ ಸಂಜಯನಗರ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಳೆದ 2 ದಿನಗಳ ಹಿಂದೆ ಭದ್ರಪ್ಪ ಲೇಔಟ್‌ನ ವೈದ್ಯ ಡಾ.ಸುನೀಲ್ ಕುಮಾರ್ ಅವರಿಗೆ ಅನಾಮಧೇಯ ಹೆಸರಿನಲ್ಲಿ ವಾಟ್ಸಪ್ ಮೆಸೇಜ್ ಬಂದಿದ್ದು, ಈ ಬಗ್ಗೆ ಸಂಜಯನಗರ ಠಾಣೆಗೆ ಅವರು ದೂರು ದಾಖಲಿಸಿದ್ದಾರೆ. ಅದರನ್ವಯ ತನಿಖೆಗಿಳಿದಿರುವ ಪೊಲೀಸರು, ಆರೋಪಿ ಮಹಿಳೆ ಪತ್ತೆಗೆ ಹುಡುಕಾಟ ಶುರು ಮಾಡಿದ್ದಾರೆ.
ನನಗೆ ಸೋಮವಾರ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ನಿರಂತವಾಗಿ ಮೆಸೇಜ್‌ಗಳು ಬಂದಿದ್ದವು. "ನಮ್ಮ ಅತ್ತೆ ತುಂಬಾ ಹಿಂಸೆ ಕೊಡುತ್ತಾರೆ. ಆದ ಕಾರಣ ನಮ್ಮ ಅತ್ತೆಯನ್ನು ಸಾಯಿಸಲು ಎರಡು ಮಾತ್ರೆಗಳನ್ನು ಬರೆದುಕೊಡಿ " ಎಂದು ಆಕೆ ಮೆಸೇಜ್‌ನಲ್ಲಿ ಕೋರಿದ್ದರು ಎಂದು ದೂರಿನಲ್ಲಿ ವೈದ್ಯರು ಉಲ್ಲೇಖಿಸಿದ್ದಾರೆ.