ಸಾರಾಂಶ
ಬೆಂಗಳೂರು : ಬೆಂಗಳೂರು ನಗರದಲ್ಲಿ ಅಕ್ರಮವಾಗಿ ವಿದೇಶಿ ಬ್ರ್ಯಾಂಡ್‌ನ ಸಿಗರೆಟ್ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಜಿಎಸ್‌ಟಿ ಹಾಗೂ ವಾಣಿಜ್ಯ ತೆರಿಗೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, 900 ಪ್ಯಾಕ್‌ಗಳ 18,000 ಸಿಗರೆಟ್ ಕಡ್ಡಿಗಳನ್ನು ವಶಪಡಿಸಿಕೊಂಡಿದ್ದಾರೆ.
ಚಿಕ್ಕಪೇಟೆ, ಅವೆನ್ಯೂ ರಸ್ತೆ, ಮಾಮೂಲ್‌ಪೇಟೆ, ಬನಶಂಕರಿ, ಬಿಟಿಎಂ ಲೇಔಟ್, ಕೋರಮಂಗಲ ಸೇರಿ 6 ಪ್ರದೇಶದಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ ವಿವಿಧ ವಿದೇಶಿ ಬ್ರಾಂಡ್‌ಗಳಾದ ಮಾಂಡ್, ಎಸ್ಸೆ ಲೈಟ್ಸ್ ಹಾಗೂ ಎಸ್ಸೆ ಗೋಲ್ಡ್, ಡಿಜಾರಂ ಬ್ಲಾಕ್, ಪ್ಯಾರಿಸ್, ವಿನ್ ಮತ್ತು ಗುಡಾಂಗ್ ಗರಂ ಸೇರಿ 18 ಸಾವಿರ ಸ್ಟಿಕ್‌ಗಳ 900 ಪ್ಯಾಕ್‌ಗಳ ಅಕ್ರಮವಾಗಿ ಕಳ್ಳಸಾಗಣೆ ಮಾಡಲಾದ ಸಿಗರೆಟ್‌ಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿದೆ.
ರಾಜ್ಯದಲ್ಲಿ ಸಿಗರೆಟ್ ಮಾರಾಟಕ್ಕೆ ಶೇ.28ರಷ್ಟು ಜಿಎಸ್‌ಟಿ ಹಾಗೂ ಸುಂಕ ಪಾವತಿ ಮಾಡಬೇಕು. ಹೀಗಾಗಿ ವಿದೇಶದಿಂದ ಅಕ್ರಮವಾಗಿ ಸ್ಮಗ್ಲಿಂಗ್ ಮಾಡಿದ ಕಾಂಟ್ರಾಬ್ರ್ಯಾಂಡ್ ಸಿಗರೆಟುಗಳನ್ನು ಮಾರಾಟ ಮಾಡುತ್ತಿದ್ದರು. ಜಿಎಸ್‌ಟಿ ಹಾಗೂ ಸುಂಕ ಪಾವತಿ ಮಾಡದ ಹಿನ್ನೆಲೆಯಲ್ಲಿ ಸ್ವದೇಶಿ ಸಿಗರೆಟ್‌ಗಳಿಗಿಂತ ಅಗ್ಗದ ದರದಲ್ಲಿ ವಿದೇಶಿ ಸಿಗರೆಟ್ ಮಾರಾಟ ಮಾಡಲಾಗುತ್ತಿತ್ತು. ಇನ್ನು ಕೋಟ್ಪಾ ಕಾಯ್ದೆಯಡಿ ರಾಜ್ಯದಲ್ಲಿ ಸಿಗರೇಟು ಪ್ಯಾಕ್‌ನ ಶೇ.50ಕ್ಕಿಂತ ಹೆಚ್ಚು ಭಾಗದ ಮೇಲೆ ಫೋಟೋ ಸಹಿತ ಕ್ಯಾನ್ಸರ್‌ಕಾರಕ ಎಂಬ ಎಚ್ಚರಿಕೆ ಸಂದೇಶ ಹಾಕಬೇಕು. ಆದರೆ, ಈ ಸಿಗರೆಟು ಪ್ಯಾಕ್‌ಗಳ ಮೇಲೆ ಯಾವುದೇ ಸಂದೇಶ ಇರಲಿಲ್ಲ.
ಈ ಹಿನ್ನೆಲೆಯಲ್ಲಿ ರಾಜ್ಯ ಜಿಎಸ್‌ಟಿ ಇಲಾಖೆಯ ಹೆಚ್ಚುವರಿ ಆಯುಕ್ತ ಚಂದ್ರಶೇಖರ ನಾಯಕ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಅಕ್ರಮ ಸಿಗರೆಟು ವಶಪಡಿಸಿಕೊಂಡು ಜಿಎಸ್ಟಿ ಕಾಯ್ದೆ ಹಾಗೂ ಕಾಟ್ಪಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.