ಸಾರಾಂಶ
ನಾಗಮಂಗಲ : ಅಸಲಿ ಗನ್ ಎಂದು ತಿಳಿಯದೆ 15 ವರ್ಷದ ಬಾಲಕನೊಬ್ಬ ಫೈರ್ ಮಾಡಿದ ಪರಿಣಾಮ ಆಟವಾಡುತ್ತಿದ್ದ ನಾಲ್ಕು ವರ್ಷದ ಮಗು ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಮನಕಲಕುವ ಘಟನೆ ತಾಲೂಕಿನ ದೊಂದೆಮಾದಹಳ್ಳಿ ಹೊರವಲಯದ ಕೋಳಿ ಫಾರಂನಲ್ಲಿ ಭಾನುವಾರ ಸಂಜೆ ಸಂಭವಿಸಿದೆ.
ಪಶ್ಚಿಮ ಬಂಗಾಳ ಮೂಲದ ಶಶಾಂಕ್ ಮತ್ತು ಲಿಪಿಕಾ ದಂಪತಿಯ ಪುತ್ರ ಅಭಿಷೇಕ್ (4) ದುರಂತದಲ್ಲಿ ಸಾವನ್ನಪ್ಪಿರುವ ನತದೃಷ್ಟ ಮಗು. ಇವರ ಪರಿಚಯಸ್ಥರಾದ ಭಾವಾ ಶಂಕರ್ ಪುತ್ರ ಸುದೀಪ್ ದಾಸ್ (15) ಎಂಬಾತನೇ ಸಿಂಗಲ್ ಬ್ಯಾರಲ್ ಗನ್‌ನಿಂದ ಫೈರ್ ಮಾಡಿರುವ ಬಾಲಕ.
ದೊಂದೆಮಾದಹಳ್ಳಿ ನರಸಿಂಹಮೂರ್ತಿ ಅವರಿಗೆ ಸೇರಿದ ಕೋಳಿ ಫಾರಂನಲ್ಲಿ ಪಶ್ಚಿಮ ಬಂಗಾಳ ಮೂಲದ ಶಶಾಂಕ್ ಮತ್ತು ಲಿಪಿಕಾ ದಂಪತಿ ಕೆಲ ವರ್ಷಗಳಿಂದ ಕೂಲಿ ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿದ್ದರು. ಅದೇ ರೀತಿ ತಾಲೂಕಿನ ಕೆ.ಮಲ್ಲೇನಹಳ್ಳಿ ಸಮೀಪದ ಕೋಳಿ ಫಾರಂ ಒಂದರಲ್ಲಿ ಪಶ್ಚಿಮಬಂಗಾಳ ಮೂಲದ ಭಾವಾಶಂಕರ್ ಕುಟುಂಬಸ್ಥರೂ ಕೂಡ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.
ಪರಿಚಯಸ್ಥರಾದ ಶಶಾಂಕ್ ಮತ್ತು ಲಿಪಿಕಾ ದಂಪತಿ ಕೆಲಸ ಮಾಡುತ್ತಿದ್ದ ದೊಂದೆಮಾದಹಳ್ಳಿ ಹೊರವಲಯದ ಕೋಳಿಫಾರಂಗೆ ಭಾವಾ ಶಂಕರ್ ಮತ್ತು ಸುದೀಪ್‌ದಾಸ್ ಭಾನುವಾರ ಮಧಾಹ್ನ ಊಟಕ್ಕೆಂದು ಬಂದಿದ್ದರು. ಈ ಸಮಯದಲ್ಲಿ ಅಪ್ರಾಪ್ತ ಬಾಲಕ ಸುದೀಪ್‌ದಾಸ್ ಮತ್ತು ನಾಲ್ಕು ವರ್ಷದ ಅಭಿಷೇಕ್ ಆಟವಾಡುತ್ತಿದ್ದರು.
ಈ ವೇಳೆ ಮಕ್ಕಳ ಕೈಗೆ ಕೋಳಿ ಫಾರಂ ಮಾಲೀಕ ನರಸಿಂಹಮೂರ್ತಿ ಅವರ ಪರವಾನಗಿ ಇರುವ ಸಿಂಗಲ್ ಬ್ಯಾರಲ್ ಗನ್ ಸಿಕ್ಕಿದೆ. ಅಸಲಿ ಗನ್ ಎಂದು ಅರಿಯದ ಸುದೀಪ್‌ದಾಸ್ ಆಟವಾಡುತ್ತಲೇ ಫೈರಿಂಗ್ ಮಾಡಿದ ಪರಿಣಾಮ ಅಭಿಷೇಕ್ ಹೊಟ್ಟೆಗೆ ಗುಂಡು ಹೊಕ್ಕಿ ಗಂಭೀರವಾಗಿ ಗಾಯಗೊಂಡಿದ್ದನು. ಈ ವೇಳೆ ಪಕ್ಕದಲ್ಲೇ ಇದ್ದ ಅಭಿಷೇಕ್ ತಾಯಿ ಲಿಪಿಕಾ ಕೂಡ ಗಾಯಗೊಂಡಿದ್ದರು.
ಗಂಭೀರವಾಗಿ ಗಾಯಗೊಂಡಿದ್ದ ಅಭಿಷೇಕ್ ಮತ್ತು ತಾಯಿ ಲಿಪಿಕ ಅವರನ್ನು ಅಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅಭಿಷೇಕ್ ಸಾವನ್ನಪ್ಪಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್‌ಪಿ ಬಿ.ಚಲುವರಾಜು, ಸಿಪಿಐ ನಿರಂಜನ್ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ರಾಜೇಂದ್ರ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.
ಅಭಿಷೇಕ್ ಮೃತದೇಹವನ್ನು ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಯ ಶವಾಗಾರದಲ್ಲಿರಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಗಿದೆ. ಘಟನೆ ಸಂಬಂಧ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.