ಸಾರಾಂಶ
5 ವರ್ಷ ನಾವೇ ಅಧಿಕಾರದಲ್ಲಿರುತ್ತೇವೆ. ಜನತೆಯ ಆಶೀರ್ವಾದ ಇರುವವರೆಗೆ ನನ್ನನ್ನು ಜಗ್ಗಿಸಲು-ಬಗ್ಗಿಸಲು ಆಗಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸಂಡೂರು : ಬಿಜೆಪಿಯ ಬಿ.ವೈ. ವಿಜಯೇಂದ್ರ, ಆರ್.ಅಶೋಕ್ ಹಾಗೂ ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಅವರು ‘ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಾರೆ. ಈ ಸರ್ಕಾರ ಬಿದ್ದು ಹೋಗುತ್ತದೆ. ಆಗ ತಾವು ಮುಖ್ಯಮಂತ್ರಿಯಾಗಬಹುದು’ ಎಂದು ಕನಸು ಕಾಣುತ್ತಿದ್ದಾರೆ. ಆದರೆ, ಇದು ಸಾಧ್ಯವಿಲ್ಲ. 5 ವರ್ಷ ನಾವೇ ಅಧಿಕಾರದಲ್ಲಿರುತ್ತೇವೆ. ಜನತೆಯ ಆಶೀರ್ವಾದ ಇರುವವರೆಗೆ ನನ್ನನ್ನು ಜಗ್ಗಿಸಲು-ಬಗ್ಗಿಸಲು ಆಗಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅನ್ನಪೂರ್ಣಾ ತುಕಾರಾಂ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಭಾನುವಾರ ಪಟ್ಟಣದಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು. ಸಮಾರಂಭ ಉದ್ಘಾಟಿಸಿ ಸಿಎಂ ಮಾತನಾಡಿದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 136 ಸ್ಥಾನ ಗಳಿಸಿದೆ. ಉಪ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ಬಿಜೆಪಿ, ಜೆಡಿಎಸ್‌ನವರು ಜನರ ಆಲೋಚನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಸುಳ್ಳು ಆರೋಪ, ಅಪಪ್ರಚಾರ ಬಿಡಬೇಕು. ಅವರು ಸರ್ಕಾರದೊಂದಿಗೆ ಸಹಕರಿಸಬೇಕು. ಅವರು ರಚನಾತ್ಮಕವಾಗಿ ಟೀಕೆ ಮಾಡಲಿ. ನಾವು ಉತ್ತರ ಕೊಡಲು ತಯಾರಿದ್ದೇವೆ. ಮುಡಾ, ವಕ್ಫ್, ವಾಲ್ಮೀಕಿ ನಿಗಮದ ಹಗರಣಗಳ ಕುರಿತು ಸುಳ್ಳು ಆರೋಪ ಮಾಡುವುದನ್ನು ಬಿಡಬೇಕು. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ನಿಮಗೆ ನಾಚಿಕೆಯಾಗಲ್ವ ಎಂದು ಬಿಜೆಪಿ, ಜೆಡಿಎಸ್‌ನವರನ್ನು ಟೀಕಿಸಿದರು.
ರಾಜ್ಯದಲ್ಲಿ ಯಾವುದೇ ರೀತಿಯ ಆರ್ಥಿಕ ಸಂಕಷ್ಟವಿಲ್ಲ. ಬಿಜೆಪಿಯವರು ಸುಳ್ಳು ಹೇಳುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಾವು ಘೋಷಿಸಿರುವ ಯಾವುದೇ ಯೋಜನೆಗಳು ನಿಂತಿಲ್ಲ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿಲ್ಲವೇ ಎಂದು ಪ್ರಶ್ನಿಸಿದರು.
ಬಿಜೆಪಿಯವರಿಗೆ ಸ್ಪಷ್ಟವಾದ ನಿಲುವು ಇಲ್ಲ. ಪ್ರತಿಪಕ್ಷದವರು ಎಲ್ಲೆಡೆಯೂ ರಾಜ್ಯ ಸರ್ಕಾರದ ಬಳಿ ಹಣವಿಲ್ಲ ಎಂದು ಬರೀ ಸುಳ್ಳು ಪ್ರಚಾರ ಮಾಡುತ್ತ ಸಾಗುತ್ತಿದ್ದಾರೆ. ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವ ಬಿಜೆಪಿ ಇನ್ನೊಂದೆಡೆ ಬೇರೆ ರಾಜ್ಯಗಳಲ್ಲಿ ತಾವೇ ಗ್ಯಾರಂಟಿ ಯೋಜನೆಗಳನ್ನು ಘೋಷಿಸುತ್ತಿದ್ದಾರೆ. ಇದು ದ್ವಂದ್ವ ನಿಲುವಲ್ಲವೇ? ಎಂದು ಲೇವಡಿ ಮಾಡಿದರು.
ರಾಜ್ಯದಲ್ಲಿ ಬಿಜೆಪಿ ಎಂದೂ ತನ್ನ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿಲ್ಲ. 2008, 2018ರಲ್ಲಿ ಕೋಟ್ಯಂತರ ರು. ಖರ್ಚು ಮಾಡಿ ಶಾಸಕರನ್ನು ಖರೀದಿಸಿ ಸರ್ಕಾರ ರಚನೆ ಮಾಡಿತ್ತು. ನರೇಂದ್ರ ಮೋದಿ ‘ನಾ ಕಾವೂಂಗ, ನಾ ಕಾನೇದೂಂಗ’ ಎಂದಿದ್ದರು. ಶಾಸಕರ ಖರೀದಿಗೆ ಹಣ ಎಲ್ಲಿಂದ ಬಂದಿತ್ತು?. ಅದು ಲಂಚ, ಅಕ್ರಮದ ಹಣವಲ್ಲವೇ ಎಂದು ಕಿಡಿಕಾರಿದರು. ಅಲ್ಲದೆ, ಪ್ರಾಮಾಣಿಕತೆಯ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗೆ ಇಲ್ಲ ಎಂದು ಕುಟುಕಿದರು.
ಮಹಾ ಚುನಾವಣೆ ಹಣ ಕಳಿಸಿದ್ದೇನೆಎಂದು ಸಾಬೀತು ಮಾಡಿದ್ರೆ ನಿವೃತ್ತಿ
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ನನ್ನ ಸವಾಲಿಗೆ ಪ್ರಧಾನಿ ಮೋದಿ ಉತ್ತರವನ್ನೇ ನೀಡಿಲ್ಲ. ಮೋದಿಯವರಿಂದ ಹಿಡಿದು ರಾಜ್ಯದ ಬಿಜೆಪಿ ನಾಯಕರೆಲ್ಲರೂ ಸುಳ್ಳು ಮತ್ತು ಅಪಪ್ರಚಾರವನ್ನು ಮಾಡುತ್ತಿದ್ದಾರೆ. ಅಬಕಾರಿ ಇಲಾಖೆಯಿಂದ ಸಿದ್ದರಾಮಯ್ಯ ₹700 ಕೋಟಿ ಸಂಗ್ರಹಿಸಿ ಮಹಾರಾಷ್ಟ್ರ ಚುನಾವಣೆಗೆ ಖರ್ಚು ಮಾಡಲು ಕಳುಸಿಕೊಟ್ಟಿದ್ದಾರೆ ಎಂದು ಆರೋಪಿಸಿದ್ದರು. ಅದನ್ನು ಸಾಬೀತುಪಡಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಆರೋಪ ಸಾಬೀತು ಮಾಡದಿದ್ದರೆ ನೀವು (ಪ್ರಧಾನಿ) ರಾಜಕೀಯ ನಿವೃತ್ತಿ ಪಡೆಯಬೇಕು ಎಂದು ಸವಾಲು ಹಾಕಿದ್ದೆ, ಅದಕ್ಕೆ ಉಸಿರೇ ಇಲ್ಲ ಎಂದು ಹೇಳಿದರು.