ತಾಯಿಯನ್ನು ನಿಂದಿಸಿದವನನ್ನು ಕೋಣೆಯಲ್ಲಿ ಕೂಡಿಟ್ಟು ಹಲ್ಲೆ ನಡೆಸಿ, ನಗ್ನ ವಿಡಿಯೋ ಮಾಡಿದ ಯುವಕ

| Published : Aug 15 2024, 01:47 AM IST / Updated: Aug 15 2024, 03:46 AM IST

ತಾಯಿಯನ್ನು ನಿಂದಿಸಿದವನನ್ನು ಕೋಣೆಯಲ್ಲಿ ಕೂಡಿಟ್ಟು ಹಲ್ಲೆ ನಡೆಸಿ, ನಗ್ನ ವಿಡಿಯೋ ಮಾಡಿದ ಯುವಕ
Share this Article
  • FB
  • TW
  • Linkdin
  • Email

ಸಾರಾಂಶ

ತಾಯಿಯನ್ನು ನಿಂದಿಸಿದ ಸಂಬಂಧಿಕನನ್ನು ಕೋಣೆಯಲ್ಲಿ ಕೂಡಿಟ್ಟು ಹಲ್ಲೆ ನಡೆಸಿ, ನಗ್ನ ವಿಡಿಯೋ ಮಾಡಿದ ಯುವಕನಿಗೆ ಪೊಲೀಸರು ನೋಟಿಸ್‌ ಜಾರಿ ಮಾಡಿದ್ಧಾರೆ.

 ಬೆಂಗಳೂರು :  ತನ್ನ ತಾಯಿ ನಿಂದಿಸಿದ್ದಕ್ಕೆ ಸಂಬಂಧಿಯನ್ನು ಕೋಣೆಯಲ್ಲಿ ಕೂಡಿಹಾಕಿ  ಬಳಿಕ ನಗ್ನಗೊಳಿಸಿ ವಿಡಿಯೋ ಚಿತ್ರೀಕರಿಸಿದ ಆರೋಪದ ಮೇರೆಗೆ ಹಾಸಿಗೆ ಮಾರಾಟ ಮಳಿಗೆ ಮಾಲೀಕನ ವಿರುದ್ಧ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಜಿಎಸ್‌ ಲೇಔಟ್‌ನ ಶಿಕ್ಷಾವಲ್ಲಿ ವಿರುದ್ಧ ಆರೋಪ ಬಂದಿದ್ದು, ವೈಯಕ್ತಿಕ ವಿಚಾರವಾಗಿ ಆಂಧ್ರಪ್ರದೇಶ ಅನಂತಪುರ ಜಿಲ್ಲೆಯ ಷರೀಫ್ ಮೇಲೆ ಆತ ಹಲ್ಲೆ ನಡೆಸಿದ್ದ. ಸಂತ್ರಸ್ತನ ಬೆತ್ತಲೆ ವಿಡಿಯೋ ವೈರಲ್ ಬೆನ್ನಲ್ಲೇ ಎಚ್ಚೆತ್ತ ಸುಬ್ರಹ್ಮಣ್ಯಪುರ ಪೊಲೀಸರು, ಘಟನೆ ಬಳಿಕ ತನ್ನೂರಿಗೆ ಹೋಗಿದ್ದ ಷರೀಫ್‌ನನ್ನು ಕರೆಸಿ ದೂರು ಪಡೆದು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಆಂಧ್ರಪ್ರದೇಶ ಮೂಲದ ಷರೀಫ್ ಹಾಗೂ ಶಿಕ್ಷಾವಲ್ಲಿ ಸೋದರ ಸಂಬಂಧಿಗಳಾಗಿದ್ದು, ಎಜಿಎಸ್ ಲೇಔಟ್‌ನಲ್ಲಿ ಹಾಸಿಗೆ ಹೊಲಿದು ಮಾರಾಟ ಮಾಡುವ ಅಂಗಡಿಯನ್ನು ವಲ್ಲಿ ನಡೆಸುತ್ತಿದ್ದಾನೆ. ಮೂರು ತಿಂಗಳಿಂದ ವಲ್ಲಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಷರೀಫ್, ಇತ್ತೀಚಿಗೆ ಆತನಿಗೆ ತಿಳಿಸದೆ ಏಕಾಏಕಿ ಅಲ್ಲಿ ಕೆಲಸ ಬಿಟ್ಟು ಬೇರೆ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ್ದ. ಇದರಿಂದ ಕೋಪಗೊಂಡ ವಲ್ಲಿ, ಷರೀಫ್‌ಗೆ ಕರೆ ಮಾಡಿ ಯಾಕೆ ಕೆಲಸ ಬಿಟ್ಟಿದ್ದು ಎಂದು ಪ್ರಶ್ನಿಸಿದ್ದ. ಆ ವೇಳೆ ಮಾತುಕತೆ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.

ಈ ಹಂತದಲ್ಲಿ ವಲ್ಲಿ ತಾಯಿಯನ್ನು ಷರೀಫ್ ನಿಂದಿಸಿದ್ದಾನೆ. ಇದರಿಂದ ರೊಚ್ಚಿಗೆದ್ದ ವಲ್ಲಿ, ಕಳೆದ ತಿಂಗಳು ಪೂರ್ಣಪ್ರಜ್ಞಾ ಲೇಔಟ್‌ನಲ್ಲಿ ಷರೀಫ್ ಕೆಲಸ ಮಾಡುತ್ತಿದ್ದ ಅಂಗಡಿಗೆ ತೆರಳಿ ಹಿಡಿದು ಬಡಿದಿದ್ದಾನೆ. ಈ ಹಲ್ಲೆ ಬಳಿಕ ಆತನನ್ನು ಬೆತ್ತಲೆಗೊಳಿಸಿ ವಿಡಿಯೋ ಮಾಡಿಕೊಂಡು ಸಂಬಂಧಿಗೆ ಆತ ಕಳುಹಿಸಿದ್ದಾನೆ. ಬಳಿಕ ಈ ವಿಡಿಯೋ ಸಂಬಂಧಿಕರ ಮಧ್ಯೆ ಹಂಚಿಕೆಯಾಗಿ ಕೊನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರದಾಡಿದೆ. ಈ ವಿಡಿಯೋ ವೀಕ್ಷಿಸಿದ ಪೊಲೀಸರು, ಕೂಡಲೇ ಷರೀಫ್‌ನನ್ನು ಸಂಪರ್ಕಿಸಿ ಘಟನೆ ಕುರಿತು ವಿವರ ಪಡೆದಿದ್ದಾರೆ. ಕೊನೆಗೆ ಆ.6 ರಂದು ನಗರಕ್ಕೆ ಮರಳಿ ಸುಬ್ರಹ್ಮಣ್ಯಪುರ ಠಾಣೆಗೆ ಘಟನೆ ಸಂಬಂಧ ಷರೀಫ್ ದೂರು ನೀಡಿದ್ದಾನೆ. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಆರೋಪಿಗೆ ವಿಚಾರಣೆಗೆ ಬರುವಂತೆ ನೋಟಿಸ್ ಜಾರಿಗೊಳಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.