ಸಾರಾಂಶ
ಬೆಂಗಳೂರು : ಕಾರಿನೊಳಗೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಾಗರಭಾವಿ 2ನೇ ಹಂತದ ನಿವಾಸಿ ಪ್ರದೀಪ್(42) ಮೃತ ವ್ಯಕ್ತಿ. ಮೃತರು ಹೋಟೆಲ್ ಕನ್ಸಲ್ಟೆನ್ಸಿ ಸರ್ವಿಸ್ ನಡೆಸುತ್ತಿದ್ದರು. ಶನಿವಾರ ಮಧ್ಯಾಹ್ಯ ಸುಮಾರು 3.10ಕ್ಕೆ ಮುದ್ದಿನಪಾಳ್ಯದ ವಿಶ್ವೇಶ್ವರಯ್ಯ ಲೇಔಟ್ ರಸ್ತೆ ಬದಿ ದೆಹಲಿ ನೋಂದಣಿಯ ಸ್ಕೋಡಾ ಕಾರಿನಲ್ಲಿ ಕುಳಿತು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯಾಹ್ನ ವ್ಯಕ್ತಿಯೊಬ್ಬರು ಸ್ಕೋಡಾ ಕಾರಿನಲ್ಲಿ ಮುದ್ದಿನಪಾಳ್ಯದ ವಿಶ್ವೇಶ್ವರಯ್ಯ ಲೇಔಟ್ ರಸ್ತೆಗೆ ಬಂದಿದ್ದಾರೆ. ಕೆಲವೇ ನಿಮಿಷಗಳಲ್ಲಿ ಕಾರಿನೊಳಗೆ ದಟ್ಟ ಹೊಗೆ ಕಾಣಿಸಿಕೊಂಡಿದ್ದು, ದಿಢೀರ್ ಬೆಂಕಿ ಹೊತ್ತಿಕೊಂಡಿದೆ. ಇದನ್ನು ಗಮನಿಸಿದ ಸ್ಥಳೀಯರು, ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ.
ಬ್ಯಾಡರಹಳ್ಳಿ ಠಾಣೆಯ ಹೋಯ್ಸಳ ಗಸ್ತು ವಾಹನದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಯನ್ನು ಕರೆಸಿ ಬೆಂಕಿ ನಂದಿಸಿದ್ದಾರೆ. ಕಾರಿನೊಳಗೆ ಪರಿಶೀಲಿಸಿದಾಗ ಕಾರಿನ ಚಾಲಕನ ಸೀಟಿನಲ್ಲಿ ಅರೆಬರೆ ಬೆಂದ ಸ್ಥಿತಿಯಲ್ಲಿ ಪುರುಷನ ಮೃತದೇಹ ಪತ್ತೆಯಾಗಿದೆ.
ಪತ್ನಿ ಹೆಸರಿನಲ್ಲಿ ಕಾರು ಖರೀದಿ: ಆರಂಭದಲ್ಲಿ ಮೃತ ವ್ಯಕ್ತಿಯ ಗುರುತು ಪತ್ತೆಯಾಗಲಿಲ್ಲ. ಬಳಿಕ ಪೊಲೀಸರು ಸ್ಕೋಡಾ ಕಾರಿನ ನೋಂದಣಿ ಸಂಖ್ಯೆ ಪರಿಶೀಲಿಸಿದಾಗ ದೆಹಲಿಯಲ್ಲಿ ನೋಂದಣಿ ಸಂಖ್ಯೆ ಪತ್ತೆಯಾಗಿದೆ. ಬಳಿಕ ಆರ್‌ಟಿಒ ಅಧಿಕಾರಿಗಳನ್ನು ಸಂಪರ್ಕಿಸಿ ವಿಚಾರಿಸಿದಾಗ, ಸ್ಕೋಡಾ ಕಾರನ್ನು ಪ್ರದೀಪ್ ದೆಹಲಿಯಲ್ಲಿ ವ್ಯಕ್ತಿಯೊಬ್ಬರಿಂದ ಖರೀದಿಸಿರುವುದು ಗೊತ್ತಾಗಿದೆ.
ಬಳಿ ಪ್ರದೀಪ್ ಆ ಕಾರಿನ ಮಾಲೀಕನಿಂದ ಎನ್‌ಒಸಿ ಪಡೆದು ಪತ್ನಿ ಹೆಸರಿಗೆ ಕಾರಿನ ಮಾಲೀಕತ್ವ ವರ್ಗಾವಣೆಗೆ ಜಯನಗರ ಆರ್‌ಟಿಒ ಕಚೇರಿಗೆ ಎನ್‌ಒಸಿ ಸಲ್ಲಿಸಿರುವುದು ತಿಳಿದು ಬಂದಿದೆ.
ವ್ಯವಹಾರ ನಷ್ಟದಿಂದಆತ್ಮಹತ್ಯೆ ಶಂಕೆ?: ಹೋಟೆಲ್ ಕನ್ಸಲ್ಟೆನ್ಸಿ ಸರ್ವಿಸ್ ಹೊಂದಿದ್ದ ಪ್ರದೀಪ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹಣಕಾಸು ವಿಚಾರ ಅಥವಾ ವ್ಯವಹಾರದಲ್ಲಿ ನಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮೃತನ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಬಂಕ್‌ನಲ್ಲಿ ಪೆಟ್ರೋಲ್ ಖರೀದಿ: ಪ್ರದೀಪ್ ಮಾರ್ಗ ಮಧ್ಯೆ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಖರೀದಿಸಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಳಿಕ ಮುದ್ದಿನಪಾಳ್ಯದ ವಿಶ್ವೇಶ್ವರಯ್ಯ ಲೇಔಟ್ ರಸ್ತೆಯಲ್ಲಿ ಕಾರು ನಿಲ್ಲಿಸಿಕೊಂಡು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.