ರಸ್ತೆ ಬದಿ ನಿಲುಗಡೆ ಮಾಡಿದ್ದ ಎಂಟು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿರುವ ಪ್ರಕರಣ

 ಬೆಂಗಳೂರು : ರಸ್ತೆ ಬದಿ ನಿಲುಗಡೆ ಮಾಡಿದ್ದ ಎಂಟು ವಾಹನಗಳ ಮೇಲೆ ಕಲ್ಲು ತೂರಿ ಪೈಪ್‌ನಿಂದ ಗಾಜು ಒಡೆದು ಪುಂಡಾಟ ಮೆರೆದಿದ್ದ ವ್ಯಕ್ತಿಯನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ಪ್ರತಾಪ್‌ ಚಂದ್‌ (28) ಬಂಧಿತ. ಮೈಸೂರು ರಸ್ತೆಯ ಸಮೀಪದ ಕರ್ನಾಟಕ ವಿದ್ಯುತ್‌ ಕಾರ್ಖಾನೆ ಬಳಿ ರಸ್ತೆಯಲ್ಲಿ ಕಾರು, ಟಾಟಾ ಏಸ್‌ ವಾಹನ, ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡಲಾಗಿತ್ತು. ಗುರುವಾರ ಮುಂಜಾನೆ ಸುಮಾರು 3.30ಕ್ಕೆ ಸ್ಥಳಕ್ಕೆ ಬಂದಿರುವ ಅಪರಿಚಿತ ವ್ಯಕ್ತಿ ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿ, ಪೈಪ್‌ನಿಂದ ವಾಹನಗಳ ಗಾಜುಗಳಿಗೆ ಒಡೆದು ಪುಂಡಾಟ ನಡೆಸಿ ಪರಾರಿಯಾಗಿದ್ದ. ಘಟನೆಯಲ್ಲಿ ಮೂರು ಕಾರು ಸೇರಿದಂತೆ ಎಂಟು ವಾಹನಗಳಿಗೆ ಹಾನಿಯಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತ ಆರೋಪಿ ಪ್ರತಾಪ್‌ ಚಂದ್‌ ಚಾಮರಾಜಪೇಟೆಯ ಹೋಟೆಲ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಮುಂಜಾನೆ ಮದ್ಯದ ಅಮಲಿನಲ್ಲಿ ಈ ಕೃತ್ಯ ಎಸಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ಕೈಗೊಂಡು ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿ ಸಿಕ್ಕ ಸುಳಿವಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.