ಆತ್ಮಹತ್ಯೆ ನಾಟಕ ಆಡಲು ಹೋಗಿ ಸಾವು!

| Published : May 17 2024, 12:31 AM IST / Updated: May 17 2024, 05:16 AM IST

Terrible incident in Delhi Woman body found dead in Almirah

ಸಾರಾಂಶ

ಜಗಳವಾಡಿ ಮುನಿಸಿಕೊಂಡು ತವರು ಮನೆಗೆ ಪತ್ನಿ ಹೊರಟಿದ್ದಳು. ಇದ್ದಕ್ಕಿದ್ದ ಹಾಗೆ ಆಕೆಗೆ ವಿಡಿಯೋ ಕಾಲ್‌ ಮಾಡಿದ ಪತಿ ಆತ್ಮಹತ್ಯೆ ಬೆದರಿಕೆ ಹಾಕಿದ್ದ. ಆದರೆ ಕುಣಿಕೆ ಜಾರಿ ಪತಿ ಅಮಿತ್‌ ಸಾವನ್ನಪ್ಪಿದ್ದಾನೆ.

 ಬೆಂಗಳೂರು :  ತನ್ನ ಜತೆ ಮುನಿಸಿಕೊಂಡು ತವರು ಮನೆಗೆ ಹೋಗುತ್ತಿದ್ದ ಪತ್ನಿಗೆ ಹೆದರಿಸಲು ವಾಟ್ಸಾಪ್‌ ವಿಡಿಯೋ ಕಾಲ್‌ ಮಾಡಿ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿ ಆಯತಪ್ಪಿ ಕುಣಿಕೆ ಜಾರಿಕೊಂಡು ಜಿಮ್ ತರಬೇತುದಾರನೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ದಾಸರಹಳ್ಳಿ ಸಮೀಪದ ಕಲ್ಯಾಣನಗರದ ನಿವಾಸಿ ಅಮಿತ್‌ ಕುಮಾರ್ ಸಾಹ (32) ಮೃತ ದುರ್ದೈವಿ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಅಮಿತ್ ದಂಪತಿ ಮಧ್ಯೆ ಬುಧವಾರ ಸಂಜೆ ಜಗಳವಾಗಿದೆ. ಆಗ ಕೋಪಗೊಂಡು ತವರು ಮನೆಗೆ ಹೊರಟ್ಟಿದ್ದ ತನ್ನ ಪತ್ನಿಯನ್ನು ಮರಳುವಂತೆ ಮಾಡಲು ಅಮಿತ್ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾನೆ. ಆಗ ವಾಟ್ಸಾಪ್ ವಿಡಿಯೋ ಕಾಲ್‌ ಲೈವ್‌ನಲ್ಲಿದ್ದಾಗಲೇ ಆಯತಪ್ಪಿ ಆತ ಕುತ್ತಿಗೆಗೆ ನೇಣು ಜೀರಿಕೊಂಡಿದೆ. ಕೂಡಲೇ ಮನೆಗೆ ಮರಳಿ ಪತಿಯನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗೆ ಮೃತಳ ಪತ್ನಿ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಿ ಕಾಲ ಮಿಂಚಿತು. ಚಿಕಿತ್ಸೆ ಫಲಿಸದೆ ಅಮಿತ್ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಅಪ್ರಾಪ್ತ ವಯಸ್ಸಿನಲ್ಲೇ ಅರಳಿದ ಪ್ರೇಮ:

ಬಿಹಾರ ಮೂಲದ ಅಮಿತ್‌ ಕುಮಾರ್‌, 15 ವರ್ಷಗಳ ಹಿಂದೆ ನಗರಕ್ಕೆ ಉದ್ಯೋಗ ಅರಸಿ ಬಂದಿದ್ದ. ದಾಸರಹಳ್ಳಿಯ ಕಲ್ಯಾಣನಗರದಲ್ಲಿ ತನ್ನ ಪೋಷಕರ ಜತೆ ನೆಲೆಸಿದ್ದ ಆತ, ಮನೆ ಸಮೀಪದ ಜಿಮ್‌ನಲ್ಲಿ ತರಬೇತುದಾರನಾಗಿದ್ದ. ತನ್ನ ಜಿಮ್ ಕೇಂದ್ರದ ಪಕ್ಕದಲ್ಲೇ ನೆಲೆಸಿದ್ದ ಯುವತಿ ಜತೆ ಅಮಿತ್‌ಗೆ ಪ್ರೇಮವಾಗಿತ್ತು. ಏಳೆಂಟು ವರ್ಷಗಳು ಪ್ರೀತಿಯಲ್ಲಿದ್ದ ಜೋಡಿ ಕೊನೆಗೆ ವರ್ಷದ ಹಿಂದೆ ರಿಜಿಸ್ಟ್ರರ್‌ ಮದುವೆ ಆಗಿದ್ದರು. ಮದುವೆ ಬಳಿಕ ಪತ್ನಿಯನ್ನು ಆಕೆಯ ಇಷ್ಟದಂತೆ ಅಮಿತ್‌ ನರ್ಸಿಂಗ್ ಓದಿಸುತ್ತಿದ್ದ. ಈ ಪ್ರೇಮಿಗಳ ಜೋಡಿ ಅನ್ಯೋನ್ಯವಾಗಿಯೇ ಇದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪತ್ನಿಗೆ ಆನ್‌ಲೈನ್ ಕಾಲ್

ವಿವಾಹ ನಂತರ ಸಣ್ಣಪುಟ್ಟ ವಿಷಯಗಳಿಗೆ ದಂಪತಿ ಜಗಳವಾಗಿ ಮುನಿಸಿಕೊಳ್ಳುತ್ತಿದ್ದರು. ಆನಂತರ ಕೆಲ ದಿನಗಳಲ್ಲಿ ಇಬ್ಬರು ವಿರಸ ಮರೆತು ಖುಷಿಯಾಗಿರುತ್ತಿದ್ದರು. ಎಂದಿನಂತೆ ಕೌಟುಂಬಿಕ ವಿಚಾರವಾಗಿ ಬುಧವಾರ ಸಂಜೆ ಸಹ ಈ ದಂಪತಿ ಮಧ್ಯೆ ಜಗಳವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.

ಇದರಿಂದ ಕೋಪಗೊಂಡು ಅಮಿತ್ ಪತ್ನಿ, ತನ್ನ ಮನೆ ಸಮೀಪದಲ್ಲೇ ಇದ್ದ ತವರು ಮನೆಗೆ ಹೊರಟಿದ್ದಳು. ತಕ್ಷಣವೇ ತನ್ನ ಮನೆಯಲ್ಲಿದ್ದ ಅಕ್ಕ ಮಗಳನ್ನು ಅತ್ತೆಯನ್ನು ಕರೆತರುವಂತೆ ಹೇಳಿ ಕಳುಹಿಸಿದ ಅಮಿತ್‌, ದಾರಿ ಮಧ್ಯೆ ಪತ್ನಿಗೆ ವಾಟ್ಸಾಪ್‌ನಲ್ಲಿ ವಿಡಿಯೋ ಕಾಲ್ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾನೆ. ಆ ವೇಳೆ ಕುತ್ತಿಗೆ ನೇಣು ಬಿಗಿದುಕೊಂಡು ತೋರಿಸುತ್ತಿದ್ದ ಅಮಿತ್‌ ದಿಢೀರನೇ ಕರೆ ಸ್ಥಗಿತಗೊಳಿಸಿದ್ದಾನೆ.

ಇದರಿಂದ ಆತಂಕಗೊಂಡು ತಕ್ಷಣವೇ ಆತನ ಪತ್ನಿ ಮನೆಗೆ ಓಡಿ ಬಂದಿದ್ದಾರೆ. ಕೋಣೆ ಬಾಗಿಲು ತೆರೆದು ನೋಡಿದಾಗ ನೇಣಿನ ಕುಣಿಕೆಯಲ್ಲಿ ಪತಿ ನೇತಾಡುತ್ತಿರುವುದು ಕಂಡಿದೆ. ತಕ್ಷಣವೇ ನೆರೆಹೊರೆಯವರ ನೆರವು ಪಡೆದು ನೇಣಿನ ಕುಣಿಕೆಯಿಂದ ಪತಿಯನ್ನು ಇಳಿಸಿ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಿ ದುರಾದೃಷ್ಟವಾಶಾತ್‌ ಅಮಿತ್ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಎರಡ್ಮೂರು ಬಾರಿ ಆತ್ಮಹತ್ಯೆ ನಾಟಕ

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಈ ಹಿಂದೆ ಕೂಡಾ ಎರಡ್ಮೂರು ಬಾರಿ ಕೈ ಕುಯ್ದುಕೊಂಡು ಅಮಿತ್ ಆತ್ಮಹತ್ಯೆ ಯತ್ನಿಸಿದ್ದ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಮನೆಯಲ್ಲಿ ಸಣ್ಣಪುಟ್ಟ ವಿಚಾರಗಳಿಗೆ ಜಗಳವಾಗಿ ತನ್ನ ಜತೆ ಮುನಿಸಿಕೊಂಡು ಆತನ ಪತ್ನಿ ತವರು ಮನೆಗೆ ಹೊರಟು ನಿಂತರೆ ಅಮಿತ್‌, ತನ್ನನ್ನು ಬಿಟ್ಟು ಹೋಗಬೇಡ ಎಂದು ಹೇಳಿ ಆತ್ಮಹತ್ಯೆ ಬೆದರಿಕೆ ಹಾಕುತ್ತಿದ್ದ. ಇದೇ ರೀತಿ ಮೂರು ಬಾರಿ ಕೈ ಕುಯ್ದುಕೊಂಡು ಆತ್ಮಹತ್ಯೆ ಯತ್ನಿಸಿದ್ದ. ಕೊನೆಗೆ ಪತ್ನಿಯೇ ಬುದ್ಧಿ ಹೇಳಿ ಆತನನ್ನು ಸಮಾಧಾನಪಡಿಸಿದ್ದಳು. ಆದರೆ ಕೊನೆಗೆ ಬೆದರಿಸಲು ಹೋಗಿ ಅಮಿತ್ ಪ್ರಾಣ ಪಕ್ಷಿಯೇ ಹಾರಿ ಹೋಗಿದೆ ಎಂದು ಪೊಲೀಸರು ಹೇಳಿದ್ದಾರೆ.