ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದ ತಾಲೂಕು ಹೆಮ್ಮನಹಳ್ಳಿಯ ಗೃಹಿಣಿ ಹರ್ಷಿತಾ ಆತ್ಮಹತ್ಯೆ ಪ್ರಕರಣ ಸೋಮವಾರ ಸುಖಾಂತ್ಯಗೊಂಡಿದೆ.ಮೃತಳ ಇಬ್ಬರೂ ಗಂಡು ಮಕ್ಕಳಿಗೆ ಪರಿಹಾರ ರೂಪದಲ್ಲಿ ಮಾವ ಸುರೇಶ್ ತನ್ನ ಆಸ್ತಿಯಲ್ಲಿ ಪಾಲು ನೀಡುವುದಕ್ಕೆ ಸಮ್ಮತಿಸಿದ ಹಿನ್ನೆಲೆಯಲ್ಲಿ ಹೆಮ್ಮನಹಳ್ಳಿ ತೋಟದಲ್ಲಿ ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಿತು.
ಮೂಲತಃ ಹೆಮ್ಮನಹಳ್ಳಿ ಗರೀಬಿ ಕಾಲೋನಿ ನಿವಾಸಿಗಳಾಗಿದ್ದ ಗಂಡ ನಂದೀಶ್ ಮತ್ತು ಹರ್ಷಿತಾ ಮಲ್ಲಯ್ಯನದೊಡ್ಡಿ ಗ್ರಾಮದ ಅಜ್ಜಿ ಮಂಚಮ್ಮಳ ಮನೆಯಲ್ಲಿ ವಾಸವಾಗಿದ್ದರು. ನಿರುದ್ಯೋಗಿಯಾಗಿದ್ದ ನಂದೀಶ್ ಯಾವುದೇ ಕೆಲಸ ಮಾಡದೆ ಮೋಜಿನ ಜೀವನ ನಡೆಸುತ್ತಿದ್ದ. ಇದರಿಂದ ಪತ್ನಿ ಮತ್ತು ಆತನ ಕುಟುಂಬದವರು ಹರ್ಷಿತಾಳಿಗೆ ಹಣಕ್ಕಾಗಿ ಪೀಡಿಸಿ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದರೆನ್ನಲಾಗಿದೆ.ಇದರಿಂದ ಬೇಸತ್ತ ಹರ್ಷಿತಾ ಕಳೆದ ಶುಕ್ರವಾರ ತನ್ನ ಇಬ್ಬರು ಮಕ್ಕಳ ಎದುರೇ ಅಜ್ಜಿಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಆನಂತರ ಮಂಡ್ಯ ಗ್ರಾಮಾಂತರ ಪೊಲೀಸರು ದೂರು ದಾಖಲಿಸಿಕೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿದ ನಂತರ ವಾರಸುದಾರರ ವಶಕ್ಕೆ ಒಪ್ಪಿಸಿದರು.
ಶವ ಪರೀಕ್ಷೆ ನಂತರ ಹುಟ್ಟೂರು ಹೆಮ್ಮನಹಳ್ಳಿಯ ಹರ್ಷಿತಾಳ ಮನೆಯಲ್ಲಿ ಕಳೆದ ಮೂರು ದಿನಗಳಿಂದ ಪರಿಹಾರಕ್ಕೆ ಒತ್ತಾಯಿಸಿ ಆಕೆ ಕುಟುಂಬದವರು ಶವದೊಂದಿಗೆ ಧರಣಿ ನಡೆಸುತ್ತಿದ್ದರು. ಈ ಹಿನ್ನೆಲೆಯಲಿ ಪರಿಸ್ಥಿತಿ ಜಠಿಲಗೊಂಡಿತ್ತು.ಈ ಮಧ್ಯೆ ನಿವೃತ್ತ ಯೋಧ ಸಿಪಾಯಿ ಶ್ರೀನಿವಾಸ್ ಹಾಗೂ ಗ್ರಾಮದ ಮುಖಂಡರು ಮಧ್ಯ ಪ್ರವೇಶ ಮಾಡಿ ಮೃತರ ಕುಟುಂಬದವರು ಹಾಗೂ ಮಾವ ಸುರೇಶ್ ಅವರೊಡನೆ ಮಾತುಕತೆ ನಡೆಸಿದರು. ಸುರೇಶನ ಹೆಸರಿನಲ್ಲಿದ್ದ ಹೆಮ್ಮನಹಳ್ಳಿಯ ಖಾಲಿ ನಿವೇಶನ ಮತ್ತು ಜಮೀನನ್ನು ಹರ್ಷಿತಾಳ ಮಕ್ಕಳ ಹೆಸರಿಗೆ ನೋಂದಾಯಿಸಲು ತೀರ್ಮಾನಿಸಲಾಯಿತು.
ಮಕ್ಕಳು ಪ್ರಾಪ್ತ ವಯಸ್ಸಿಗೆ ಬರುವವರೆ ಅವರ ಪೋಷಣೆಯನ್ನು ಅಜ್ಜಿ ಮಂಚಮ್ಮ ಅವರ ಹೆಸರಿಗೆ ಆಸ್ತಿ ನೋಂದಣಿ ಮಾಡಿಸಿದ ನಂತರ ಪ್ರಕರಣ ಸುಖಾಂತ್ಯಗೊಂಡು ಅಂತ್ಯಕ್ರಿಯೆ ನಡೆಯಿತು.ಮೃತ ಹರ್ಷಿತಾ ಅಂತ್ಯಕ್ರಿಯೆ ವೇಳೆ ಆಕೆಯ ಗಂಡ ನಂದೀಶ ಮತ್ತು ಅತ್ತೆ ಸುಮಿತ್ರಾ ಗೈರು ಹಾಜರಾಗಿದ್ದರು.