ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಸರಣಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕುಖ್ಯಾತ ಅಪರಾಧಿ ಉಮೇಶ್ ರೆಡ್ಡಿಗೆ ಪೆರೋಲ್ ನೀಡಲು ಹೈಕೋರ್ಟ್ ನಿರಾಕರಿಸಿದೆ.
ಅನಾರೋಗ್ಯದಿಂದ ನರಳುತ್ತಿರುವ ವೃದ್ಧ ತಾಯಿಯ ಆರೈಕೆ ಮಾಡಲು ಹಾಗೂ ಶಿಥಿಲಾವಸ್ಥೆಯಲ್ಲಿರುವ ಮನೆಯನ್ನು ರಿಪೇರಿ ಮಾಡಿಸಲು 30 ದಿನ ಪೆರೋಲ್ ನೀಡಬೇಕು ಎಂದು ಕೋರಿ ಉಮೇಶ್ ರೆಡ್ಡಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಆದೇಶಿಸಿದೆ.
ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಕೈದಿಗಳಿಗೆ ಪೆರೋಲ್ ನೀಡಬೇಕಾದಲ್ಲಿ ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಜೈಲು ಅಧಿಕಾರಿಗಳು ಸಲ್ಲಿಸಿರುವ ದಾಖಲೆಗಳ ಪ್ರಕಾರ ಜೈಲಿನಿಂದ ಹೊರ ಬಂದಲ್ಲಿ ಹಳೆಯ ದ್ವೇಷದಿಂದ ಅರ್ಜಿದಾರನ ಜೀವಕ್ಕೆ ಅಪಾಯವಿದೆ.
ಆತನೂ ಹಳೆಯ ದ್ವೇಷವನ್ನು ನೆನಪಿಸಿಕೊಳ್ಳಬಹುದು. ಅರ್ಜಿದಾರನ ತಾಯಿಯನ್ನು ಆತನ ಇಬ್ಬರು ಸಹೋದರರು ಆರೈಕೆ ಮಾಡುತ್ತಿದ್ದಾರೆ. ಶಿಥಿಲಾವಸ್ಥೆಯಲ್ಲಿರುವ ಮನೆಯ ರಿಪೇರಿ ವಿಚಾರವನ್ನು ಸಹೋದರರು ನೋಡಿಕೊಳ್ಳುತ್ತಾರೆ.
ಅರ್ಜಿದಾರನಿಗೆ ಪೆರೋಲ್ ನೀಡಿದಲ್ಲಿ ಮತ್ತೆ ಅಪರಾಧ ಪ್ರವೃತ್ತಿಯನ್ನು ಹೊಂದಬಹುದು ಅಥವಾ ಕಾನೂನು ಸುವ್ಯವಸ್ಥೆಗೆ ಅಪಾಯವನ್ನುಂಟು ಮಾಡಬಹುದು. ಆದ್ದರಿಂದ ಅರ್ಜಿ ಪುರಸ್ಕರಿಸಲಾಗದು ಎಂದು ಪೀಠ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ವಿವರ: ಮರಡಿ ಸುಬ್ಬಯ್ಯ ಎಂಬುವವರ ಪತ್ನಿಯನ್ನು ಅತ್ಯಾಚಾರ ಹಾಗೂ ಕೊಲೆ ಮಾಡಿದ ಪ್ರಕರಣದಲ್ಲಿ 1998ರ ಮಾ. 2ರಂದು ಉಮೇಶ್ ರೆಡ್ಡಿ ಬಂಧನಕ್ಕೆ ಒಳಗಾಗಿದ್ದ. 2006ರಲ್ಲಿ ಆತನಿಗೆ ಅಧೀನ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು.
ಗಲ್ಲು ಶಿಕ್ಷೆಯನ್ನು 2009ರಲ್ಲಿ ಹೈಕೋರ್ಟ್ ಮತ್ತು 2011ರಲ್ಲಿ ಸುಪ್ರೀಂ ಕೋರ್ಟ್ ಪುರಸ್ಕರಿಸಿತ್ತು. ಉಮೇಶ್ ರೆಡ್ಡಿ ಕ್ಷಮಾದಾನ ಅರ್ಜಿಯನ್ನು 2011ರಲ್ಲಿ ಕರ್ನಾಟಕ ರಾಜ್ಯಪಾಲರು, ನಂತರ ರಾಷ್ಟ್ರಪತಿಗಳು ತಿರಸ್ಕರಿಸಿದ್ದರು.
2022ರಲ್ಲಿ ಸುಪ್ರೀಂ ಕೋರ್ಟ್ ಗಲ್ಲು ಶಿಕ್ಷೆ ರದ್ದುಪಡಿಸಿ, ಯಾವುದೇ ಕ್ಷಮಾದಾನ ಇಲ್ಲದೆ 30 ವರ್ಷ ಜೀವಾವಧಿ ಶಿಕ್ಷೆ ವಿಧಿಸಿತ್ತು. ಕಳೆದ 26 ವರ್ಷಳಿಂದ ಉಮೇಶ್ ರೆಡ್ಡಿ ನ್ಯಾಯಾಂಗ ಬಂಧನದಲ್ಲಿದ್ದಾನೆ.
84 ವರ್ಷದ ತನ್ನ ತಾಯಿ ಅನಾರೋಗ್ಯದಿಂದ ನರಳುತ್ತಿದ್ದಾರೆ. ಮನೆ ಸಹ ಶಿಥಿಲಾವಸ್ಥೆಯಲ್ಲಿದ್ದು, ತಾಯಿಯ ಕಡೆಯ ದಿನಗಳಲ್ಲಿ ಆಕೆಯೊಂದಿಗೆ ಇರಲು 30 ದಿನ ಪೆರೋಲ್ ನೀಡಬೇಕು ಎಂದು ಕೋರಿ ಜೈಲಾಧಿಕಾರಿಗಳಿಗೆ ಉಮೇಶ್ ರೆಡ್ಡಿ ಮನವಿ ಪತ್ರ ಸಲ್ಲಿಸಿದ್ದನು.
30 ವರ್ಷದವರೆಗೆ ಯಾವುದೇ ಕ್ಷಮದಾನ ನೀಡಬಾರದೆಂದು ಸುಪ್ರೀಂ ಕೋರ್ಟ್ ಆದೇಶಿರುವುದನ್ನು ಆಧರಿಸಿ, ಉಮೇಶ್ ರೆಡ್ಡಿಯ ಮನವಿಯನ್ನು ತಿರಸ್ಕರಿಸಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರು 2023ರ ಸೆ. 23ರಂದು ಹಿಂಬರಹ ನೀಡಿದ್ದರು. ಇದರಿಂದ ಆತನ ಹೈಕೋರ್ಟ್ ಮೊರೆ ಹೋಗಿದ್ದ.
ಅನುಕಂಪದ ಉದ್ಯೋಗ ನೀಡಲು ಬ್ಯಾಂಕ್ ನಕಾರ; ಕ್ರಮ ಎತ್ತಿ ಹಿಡಿದ ಹೈಕೋರ್ಟ್
ಬೆಂಗಳೂರು: ಮೃತ ಉದ್ಯೊಗಿಯ ವಿವಾಹಿತ ಪುತ್ರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ಕಲ್ಪಿಸಲು ನಿರಾಕರಿಸಿದ ಖಾಸಗಿ ಬ್ಯಾಂಕಿನ ಕ್ರಮವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಅನುಕಂಪದ ಆಧಾರದ ಮೇಲೆ ತನಗೆ ಉದ್ಯೋಗ ನೀಡಲು ಬ್ಯಾಂಕ್ ನಿರಾಕರಿಸಿದ ಕ್ರಮ ಪ್ರಶ್ನಿಸಿ ಮೃತ ಉದ್ಯೋಗಿ ಕಾವೇರಪ್ಪ ಅವರ ವಿವಾಹಿತ ಪುತ್ರಿ ಕೆ.ಲಕ್ಷ್ಮಿ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮುಗದಂ ಅವರ ಪೀಠ ಆದೇಶಿಸಿದೆ.
ಮೃತ ಉದ್ಯೋಗಿಯ ಕುಟುಂಬಕ್ಕೆ ಭವಿಷ್ಯ ನಿಧಿ, ಗ್ರಾಚ್ಯುಟಿ ಸೇರಿದಂತೆ ಇನ್ನಿತರ ಸೌಲಭ್ಯಗಳ (ಟರ್ಮಿನಲ್ ಬೆನಿಫಿಟ್ಸ್) ಅಡಿಯಲ್ಲಿ 30 ಲಕ್ಷ ಹಣ ಪಾವತಿಸಿದ ಮತ್ತು ಮೃತ ಉದ್ಯೋಗಿಯ ಪತ್ನಿಗೆ ಮಾಸಿಕ 28 ಸಾವಿರ ರು. ಪಿಂಚಣಿ ನೀಡುತ್ತಿರುವ ಬ್ಯಾಂಕಿನ ಕ್ರಮವನ್ನು ಪರಿಗಣಿಸಿದ ನ್ಯಾಯಪೀಠ ಈ ಆದೇಶ ಮಾಡಿದೆ.
ಪ್ರಕರಣದ ವಿವರ: ಕೆನರಾ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ಕಾವೇರಪ್ಪ ಅವರು ಅನಾರೋಗ್ಯದಿಂದ 2022ರ ಅ.7ರಂದು ಸಾವನ್ನಪ್ಪಿದ್ದರು. ತಂದೆಯ ಸಾವಿನ ಹಿನ್ನೆಲೆಯಲ್ಲಿ ತನಗೆ ಅನುಕಂಪದ ಉದ್ಯೋಗ ನೀಡುವಂತೆ ಕೋರಿ ಅರ್ಜಿದಾರೆ ಲಕ್ಷ್ಮೀ ಬ್ಯಾಂಕಿಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರೆಯು ವಿವಾಹಿತರಾಗಿರುವ ಕಾರಣ, ತಂದೆಯ ಮೇಲೆ ಅಲಂಬಿತರಾಗಿರುವುದಾಗಿ ಹೇಳಿಕೊಂಡು ಅನುಕಂಪದ ಉದ್ಯೋಗದ ಹಕ್ಕು ಕ್ಲೇಮು ಮಾಡಲಾಗದು ಎಂದು ತಿಳಿಸಿದ್ದ ಬ್ಯಾಂಕ್, ಲಕ್ಷ್ಮೀ ಅವರ ಅರ್ಜಿ ತಿರಸ್ಕರಿಸಿತ್ತು. ಇದರಿಂದ ಆಕೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ತನಗೆ ಮೂರು ಹೆಣ್ಣು ಮಕ್ಕಳು ಇದ್ದಾರೆ. ಪತಿಯು ಬೀದಿ ಬದಿ ವ್ಯಾಪಾರಿಯಾಗಿದ್ದು, ಸಾಕಾಗುವಷ್ಟು ಆದಾಯ ಇಲ್ಲ. ತಂದೆ ಸಾವನ್ನಪ್ಪುವ ಮುನ್ನ ಪೋಷಕರು ತಮ್ಮೊಂದಿಗೆ ನೆಲೆಸಿದ್ದರು. ಹಾಗಾಗಿ, ಅನುಕಂಪದ ಉದ್ಯೋಗ ನೀಡಲು ಬ್ಯಾಂಕಿಗೆ ಆದೇಶಿಸಬೇಕು ಎಂದು ಲಕ್ಷ್ಮೀ ಕೋರಿದ್ದರು.
ಮತ್ತೊಂದೆಡೆ ಬ್ಯಾಂಕ್ ಪರ ವಕೀಲರು ಪಿಎಫ್, ಗ್ಯಾಚುಟಿ ಸೇರಿದಂತೆ ಇನ್ನಿತರ ಸೌಲಭ್ಯಗಳ ಅಡಿಯಲ್ಲಿ 30 ಲಕ್ಷ ಹಣವನ್ನು ಮೃತ ಉದ್ಯೋಗಿಯ ಕುಟುಂಬಕ್ಕೆ ಪಾವತಿಸಲಾಗಿದೆ.
ಕಾವೇರಪ್ಪ ಪತ್ನಿ ಮಾಸಿಕ 28,272 ರು. ಪಿಂಚಣಿ ಸ್ವೀಕರಿಸುತ್ತಿದ್ದಾರೆ. ಅರ್ಜಿದಾರೆ ವಿವಾಹಿತರಾಗಿದ್ದಾರೆ. ಹಾಗಾಗಿ, ಆಕೆಗೆ ಅನುಕಂಪದ ಉದ್ಯೋಗ ಕಲ್ಪಿಸದ ಬ್ಯಾಂಕಿನ ಕ್ರಮ ಸೂಕ್ತವಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಉದ್ಯೋಗಿ ಕುಟುಂಬಕ್ಕೆ ಬ್ಯಾಂಕ್‌ನಿಂದ 30 ಲಕ್ಷ ರು. ಹಣ ಪಾವತಿಸಲಾಗಿದೆ. ಮೃತ ಉದ್ಯೋಗಿಯ ಪತ್ನಿಗೆ ಮಾಸಿಕ 28,272 ರು. ಪಿಂಚಣಿ ಸಹ ಪಾವತಿಸಲಾಗುತ್ತಿದೆ.
ಹಾಗಾಗಿ ಅನುಕಂಪದ ಉದ್ಯೋಗವೆಂಬ ಹೆಚ್ಚುವರಿ ಬೆಂಬಲದ ಅಗತ್ಯವಿಲ್ಲದೆ ತಮ್ಮ ಜೀವನ ನಡೆಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಅಭಿಪ್ರಾಯಪಟ್ಟು ಲಕ್ಷ್ಮಿ ಅವರ ಅರ್ಜಿ ವಜಾಗೊಳಿಸಿದೆ.