ಸಾರಾಂಶ
ಸಿಬಿಐ ಅಧಿಕಾರಿಗಳೆಂದು ನಂಬಿಸಿ ಖಾಸಗಿ ಕಂಪನಿ ಉದ್ಯೋಗಿಯೊಬ್ಬರಿಂದ ₹30 ಲಕ್ಷ ಸುಲಿಗೆ ಮಾಡಿದ್ದ ಮೂವರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು : ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ವಿಚಾರಣೆ ನೆಪದಲ್ಲಿ ನಗರದ ಖಾಸಗಿ ಕಂಪನಿ ಉದ್ಯೋಗಿಯೊಬ್ಬರನ್ನು ಬೆದರಿಸಿ 10 ದಿನ ಸ್ವಯಂ ‘ಗೃಹ ಬಂಧನ’ದಲ್ಲಿ ಇರುವಂತೆ ಮಾಡಿ ₹30 ಲಕ್ಷ ಸುಲಿಗೆ ಮಾಡಿದ್ದ ಮೂವರು ಆರೋಪಿಗಳನ್ನು ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಡಿ.ಜೆ.ಹಳ್ಳಿ ನಿವಾಸಿಗಳಾದ ಮುಕ್ರಮ್ (32), ಮನ್ಸೂರ್ (30) ಹಾಗೂ ಥಣಿಸಂದ್ರ ನಿವಾಸಿ ಇಬ್ರಾಹಿಂ (34) ಬಂಧಿತರು. ಆರೋಪಿಗಳಿಂದ ₹11.75 ಲಕ್ಷ ನಗದು, ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಫೋನ್‌ಗಳು ಹಾಗೂ ಎಟಿಎಂ ಕಾರ್ಡ್ ಜಪ್ತಿ ಮಾಡಲಾಗಿದೆ. ಈ ಸುಲಿಗೆಕೋರರ ವ್ಯವಸ್ಥಿತ ಜಾಲದಲ್ಲಿ ಹಲವರು ಭಾಗಿಯಾಗಿರುವ ಮಾಹಿತಿ ಸಿಕ್ಕಿದೆ. ಸದ್ಯ ಅವರು ಬೆಂಗಳೂರು, ಮುಂಬೈ, ಬೆಂಗಳೂರು ಹಾಗೂ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಶೋಧ ಕಾರ್ಯ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ವಿವರ:
ಸುಬ್ರಹ್ಮಣ್ಯಪುರ ಬಳಿಯ ಅಪಾರ್ಟ್‌ಮೆಂಟ್ ನಿವಾಸಿ ರಾಜು ಅವರಿಗೆ ಜೂ.24ರಂದು ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಕರೆ ಬಂದಿದ್ದು, ಡಿಎಚ್‌ಎಲ್ ಕೊರಿಯರ್ ಉದ್ಯೋಗಿ ಎಂದು ಹೇಳಿಕೊಂಡು, ನಿಮ್ಮ ಹೆಸರಿಗೆ ಚೀನಾ ಶಾಂಘೈನಿಂದ ಮುಂಬೈಗೆ ಬಂದಿರುವ ಕೊರಿಯರ್ ಪಾರ್ಸೆಲ್‌ನಲ್ಲಿ ಐದು ಪಾಸ್‌ಪೋರ್ಟ್, ಮೂರು ಕ್ರೆಡಿಟ್ ಕಾರ್ಡ್, 140 ಗ್ರಾಂ ಎಂಡಿಎಂಎ ಡ್ರಗ್ಸ್ ಹಾಗೂ 4 ಕೆ.ಜಿ. ಬಟ್ಟೆಗಳಿವೆ. ಪಾರ್ಸೆಲ್‌ನಲ್ಲಿ ಡ್ರಗ್ಸ್ ಇರುವುದರಿಂದ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಹಾಗೂ ಸಿಬಿಐ ಅಧಿಕಾರಿಗಳು ತನಿಖೆ ಮಾಡುತ್ತಾರೆ. ಮುಂಬೈ ಕ್ರೈಂ ಪೊಲೀಸರ ಜತೆಗೆ ಮಾತನಾಡಿ ಎಂದು ಹೇಳಿದ್ದಾನೆ, ಮತ್ತೊಬ್ಬ ವ್ಯಕ್ತಿ ನಿಮ್ಮ ವಿರುದ್ಧ ಪ್ರಕರಣ ದಾಖಲಾಗಿದ್ದು, ಸಿಬಿಐ ಅಧಿಕಾರಿ ಸ್ಕೈಪ್ ಆ್ಯಪ್‌ನಲ್ಲಿ ಸಂಪರ್ಕಿಸುತ್ತಾರೆ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದಾನೆ.
ಸ್ವಯಂ ಗೃಹ ಬಂಧನ
ಸಿಬಿಐ ಅಧಿಕಾರಿ ಸೋಗಿನಲ್ಲಿ ವ್ಯಕ್ತಿಯೊಬ್ಬ ರಾಜು ಮೊಬೈಲ್‌ಗೆ ಸ್ಕೈಪ್ ಕರೆ ಮಾಡಿ ನಿಮ್ಮ ಬ್ಯಾಂಕ್ ಖಾತೆಯಿಂದ ಹವಾಲಾ ಹಣದ ವ್ಯವಹಾರ ನಡೆದಿದೆ. ಹೀಗಾಗಿ ತಕ್ಷಣ ಹೋಮ್ ಸ್ಟೇಗೆ ತೆರಳಿ ಗೃಹ ಬಂಧನ ಆಗುವಂತೆ ಸೂಚಿಸಿದ್ದಾನೆ. ಇದರಿಂದ ರಾಜು ಭಯಗೊಂಡು ಕೂಡಲೇ ಕೆಂಗೇರಿ ಗುಬ್ಬಲಾಳದ ಗ್ಲೋಬಲ್ ಸ್ಟೇನಲ್ಲಿ ರೂಮ್ ಬಾಡಿಗೆಗೆ ಪಡೆದು, ನಂತರ ಸಿಬಿಐ ಅಧಿಕಾರಿಯ ಸೋಗಿನ ವ್ಯಕ್ತಿಗೆ ಮಾಹಿತಿ ನೀಡಿದ್ದಾರೆ.
2 ಖಾತೆಗೆ ₹30 ಲಕ್ಷ ವರ್ಗ: ಬಳಿಕ ವಂಚಕ, ಪ್ರಕರಣ ಮುಕ್ತಾಯಗೊಳಿಸಲು ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ನಾನು ತಿಳಿಸುವ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಬೇಕು ಎಂದು ಸೂಚಿಸಿದ್ದಾನೆ. ಅದರಂತೆ ರಾಜು ₹30 ಲಕ್ಷವನ್ನು ವಂಚಕ ನೀಡಿದ ಎರಡು ಬ್ಯಾಂಕ್ ಖಾತೆಗಳಿಗೆ ಕ್ರಮವಾಗಿ ₹26 ಲಕ್ಷ ಮತ್ತು ₹4 ಲಕ್ಷ ವರ್ಗಾಯಿಸಿದ್ದಾರೆ. ಯಾರೊಂದಿಗೂ ಚರ್ಚಿಸಬಾರದು. ಹೊರಗೆ ಹೋಗಬಾರದು ಎಂದು ರಾಜುಗೆ ಅಪರಿಚತ ಸೂಚಿಸಿದ್ದಾನೆ. ಅದರಂತೆ ಹೆದರಿಕೊಂಡು ರಾಜು 10 ದಿನ ಗ್ಲೋಬಲ್ ಸ್ಟೇ ರೂಮ್‌ನಲ್ಲಿ ಉಳಿದುಕೊಂಡಿದ್ದಾರೆ. ಬಳಿಕ ವಂಚನೆಗೆ ಒಳಗಾಗಿರುವುದು ಗೊತ್ತಾದ ಬಳಿಕ ಕುಟುಂಬದ ಜತೆ ಚರ್ಚಿಸಿ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಗರದ ವ್ಯಕ್ತಿ ಖಾತೆಗೆ₹26 ಲಕ್ಷ ವರ್ಗಾವಣೆ
ತನಿಖೆ ವೇಳೆ ಸೈಬರ್ ಪೊಲೀಸರಿಗೆ ಬೆಂಗಳೂರಿನ ಮನ್ಸೂರ್ ಎಂಬ ವ್ಯಕ್ತಿಯ ಬ್ಯಾಂಕ್ ಖಾತೆಗೆ ₹26 ಲಕ್ಷ ಪಾವತಿ ಆಗಿರುವುದು ಗೊತ್ತಾಗಿದೆ. ಬಳಿಕ ಪೊಲೀಸರು ಮನ್ಸೂರ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಆರೋಪಿಗಳಾದ ಮುಕ್ರಮ್ ಮತ್ತು ಇಬ್ರಾಹಿಂ ಹೆಸರು ಬಾಯ್ಬಿಟ್ಟಿದ್ದಾನೆ. ಬಳಿಕ ಪೊಲೀಸರು ಆ ಇಬ್ಬರನ್ನೂ ಬಂಧಿಸಿದ್ದಾರೆ.
ಚೀನಾ ಮೂಲದ ಕಿಂಗ್‌ಪಿನ್
ಬಂಧಿತ ಮುಕ್ರಮ್ ಈ ಹಿಂದೆ ದುಬೈನಲ್ಲಿ ಚೀನಾ ಮೂಲದ ವ್ಯಕ್ತಿ ಪರಿಚಿತನಾಗಿದ್ದ. ಈತನ ಹಣದ ಆಮಿಷವನ್ನು ಒಪ್ಪಿ ಮುಕ್ರಮ್ ಸೈಬರ್ ವಂಚನೆಗೆ ಸಾಥ್ ನೀಡಿದ್ದ. ಪರಿಚಿತ ಮನ್ಸೂರ್ ಮತ್ತು ಇಬ್ರಾಹಿಂಗೂ ಹಣದ ಆಮಿಷವೊಡ್ಡಿ ವಂಚನೆ ದಂಧೆಯಲ್ಲಿ ತೊಡಗಿಸಿದ್ದ. ಈ ಇಬ್ಬರು ಸಾರ್ವಜನಿಕರ ಮೊಬೈಲ್ ಸಂಖ್ಯೆಗಳು, ಅಪರಿಚಿತ ವ್ಯಕ್ತಿಗಳ ಹೆಸರಿನ ನೂರಾರು ಸಿಮ್ ಕಾರ್ಡ್‌ಗಳು, ಕೆಲ ವ್ಯಕ್ತಿಗಳ ಬ್ಯಾಂಕ್ ಖಾತೆ ಮಾಹಿತಿ ಸಂಗ್ರಹಿಸಿ ಮುಕ್ರಮ್‌ಗೆ ನೀಡಿದ್ದರು. ಮುಕ್ರಮ್ ಈ ಮಾಹಿತಿಗಳನ್ನು ಚೀನಾ ಮೂಲದ ಕಿಂಗ್‌ಪಿನ್‌ಗೆ ಮಾರಾಟ ಮಾಡಿದ್ದ.
ಕಾಂಬೋಡಿಯಾದಲ್ಲಿನಕಲಿ ಸಿಬಿಐ ಕಚೇರಿ:
ಚೀನಾ ಮೂಲದ ವ್ಯಕ್ತಿಗಳು ಸೈಬರ್ ವಂಚನೆಗಾಗಿಯೇ ಕಾಂಬೋಡಿಯಾದಲ್ಲಿ ಭಾರತದ ನಕಲಿ ಸಿಬಿಐ, ಇಡಿ, ಮುಂಬೈ ಕ್ರೈಂ ಬ್ರಾಂಚ್ ಕಚೇರಿ ತೆರೆದಿದ್ದಾರೆ. ಇದರಲ್ಲಿ ಕರ್ನಾಟಕದ ಕೆಲ ವ್ಯಕ್ತಿಗಳು ಕೆಲಸ ಮಾಡುತ್ತಿರುವ ಸ್ಫೋಟಕ ವಿಚಾರ ಸೈಬರ್ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ವಂಚಕರ ಗ್ಯಾಂಗ್ ಸಿಬಿಐ, ಇಡಿ, ಸೈಬರ್ ಕ್ರೈಂ ಪೊಲೀಸರ ಸೋಗಿನಲ್ಲಿ ಸಾರ್ವಜನಿಕರಿಗೆ ಕರೆ ಮಾಡಿ ಬೆದರಿಸಿ ಸುಲಿಗೆ ಮಾಡುತ್ತಿರುವುದು ಗೊತ್ತಾಗಿದೆ. ಆರೋಪಿಗಳಾದ ಮುಕ್ರಮ್ ಮತ್ತು ಇಬ್ರಾಹಿಂ ಹವಾಲಾ ಮೂಲಕ ₹10.25 ಲಕ್ಷವನ್ನು ಚೀನಾ ಮೂಲದ ಕಿಂಗ್‌ಪಿನ್‌ಗೆ ತಲುಪಿಸಿರುವುದು ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.