ಬೆಂಗಳೂರು : ಯುವತಿಯ ಸ್ನೇಹದ ವಿಚಾರವಾಗಿ ಯುವಕನ ಮೇಲೆ ರಾಸಾಯನಿಕ ಎಸೆದು ದುಷ್ಕರ್ಮಿ ಪರಾರಿ

| Published : Sep 24 2024, 01:48 AM IST / Updated: Sep 24 2024, 06:35 AM IST

ಬೆಂಗಳೂರು : ಯುವತಿಯ ಸ್ನೇಹದ ವಿಚಾರವಾಗಿ ಯುವಕನ ಮೇಲೆ ರಾಸಾಯನಿಕ ಎಸೆದು ದುಷ್ಕರ್ಮಿ ಪರಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನಲ್ಲಿ ಯುವತಿಯೊಬ್ಬಳ ಸ್ನೇಹದ ವಿಚಾರವಾಗಿ ಖಾಸಗಿ ಕಂಪನಿ ನೌಕರನ ಮೇಲೆ ರಾಸಾಯನಿಕ ಎಸೆದು ದುಷ್ಕರ್ಮಿ ಪರಾರಿಯಾಗಿದ್ದಾನೆ. ಸುಮನಹಳ್ಳಿಯಲ್ಲಿ ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಗಾಯಾಳುವನ್ನು ನಾಗೇಶ್ ಎಂದು ಗುರುತಿಸಲಾಗಿದೆ.

 ಬೆಂಗಳೂರು : ಹುಡುಗಿಯ ಸ್ನೇಹದ ವಿಚಾರಕ್ಕೆ ಖಾಸಗಿ ಕಂಪನಿ ನೌಕರನ ಮೇಲೆ ರಾಸಾಯನಿಕ ಎಸೆದು ದುಷ್ಕರ್ಮಿ ಪರಾರಿಯಾಗಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವೃಷಭಾವತಿನಗರದ ನಿವಾಸಿ ನಾಗೇಶ್‌ ಮೇಲೆ ದಾಳಿ ನಡೆದಿದ್ದು, ಘಟನೆಯಲ್ಲಿ ಅವರ ಕಣ್ಣು, ತುಟಿಗಳು ಹಾಗೂ ಎಡ ಕೈಗೆ ಸುಟ್ಟ ಗಾಯಗಳಾಗಿವೆ. ಸುಮನಹಳ್ಳಿ ಬಳಿ ಊಟ ಮುಗಿಸಿ ಭಾನುವಾರ ಮಧ್ಯಾಹ್ನ ಮನೆಗೆ ಮರಳುವಾಗ ಮಾರ್ಗ ಮಧ್ಯೆ ನಾಗೇಶ್ ಮೇಲೆ ರಾಸಾಯನಿಕ ಎರಚಿ ಕಿಡಿಗೇಡಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಈ ಕೃತ್ಯ ಹಿಂದೆ ಯುವತಿಯ ಸ್ನೇಹದ ವಿಚಾರವಾಗಿ ಹುಡುಗಿಯ ಗೆಳೆಯ ಹಾಗೂ ನಾಗೇಶ್‌ ನಡುವೆ ಮನಸ್ತಾಪ ಕಾರಣ ಎಂದು ತಿಳಿದುಬಂದಿದೆ.

ವೃಷಭಾವತಿ ನಗರದಲ್ಲಿರುವ ದಿನೇಶ್ ಎಂಬುವವರ ಪೊಲೈನ್ ಇಂಡಸ್ಟ್ರೀಸ್ ಫ್ಯಾಕ್ಟರಿಯಲ್ಲಿ ಫಿಟ್ಟರ್ ಆಗಿ ಕಲುಬರಗಿ ಜಿಲ್ಲೆಯ ನಾಗೇಶ್ ಕೆಲಸ ಮಾಡುತ್ತಿದ್ದು, ಕೈಗಾರಿಕೆ ಸಮೀಪದಲ್ಲೇ ಆತ ವಾಸವಾಗಿದ್ದರು. ಫ್ಯಾಕ್ಟರಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ಸುಮನಹಳ್ಳಿಯ ಬಾಲಾಜಿ ಬಾರ್‌ನಲ್ಲಿ ಭಾನುವಾರ ಮಧ್ಯಾಹ್ನ ಮದ್ಯ ಸೇವಿಸಿ, ಊಟ ಮಾಡಿಕೊಂಡು ತೋಟದ ರಸ್ತೆಯಲ್ಲಿ ಸ್ನೇಹಿತೆಯ ಜೊತೆ ಮೊಬೈಲ್‌ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದರು. ಆಗ ಹಿಂದಿನಿಂದ ಬಂದ ಅಪರಿಚಿತ ಏಕಾಏಕಿ ತನ್ನ ಕೈಯಲ್ಲಿದ್ದ ಕೆಮಿಕಲ್ಲನ್ನು ಮುಖಕ್ಕೆ ಎರಚಿ ಅಲ್ಲಿಂದ ಓಡಿ ಹೋಗಿದ್ದಾನೆ. ನಂತರ ಸ್ನೇಹಿತರ ನೆರವಿನೊಂದಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಾಗೇಶ್‌ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರೋಪಿ ಮುಖಚಹರೆ ಪತ್ತೆಗೆ ಸಂತ್ರಸ್ತ ವಿಫಲ

ಘಟನಾ ಸ್ಥಳ ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಆರೋಪಿ ಮುಖಚಹರೆ ಪತ್ತೆಯಾಗಿದೆ. ಆದರೆ ಆತನನ್ನು ಗಾಯಾಳು ಪತ್ತೆ ಹಚ್ಚುತ್ತಿಲ್ಲ. ತಾನು ಆತನನ್ನು ನೋಡಿಯೇ ಇಲ್ಲ ಎಂದು ಗಾಯಾಳು ಹೇಳುತ್ತಿದ್ದಾರೆ. ಹೀಗಾಗಿ ಮುಖ ಚಹರೆ ಭಾವಚಿತ್ರ ತೆಗೆದು ಹುಡುಕಾಟ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎರಚಿದ್ದು ಟಾಯ್ಲೆಟ್‌ ಕ್ಲೀನರ್‌

ನಾಗೇಶ್‌ ಮೇಲೆ ಎಸೆದಿದ್ದು ಶೌಚಾಲಯ ಸ್ವಚ್ಛಗೊಳಿಸುವ ರಾಸಾಯನಿಕ ಎಂದು ಪತ್ತೆಯಾಗಿದೆ. ಇದರಲ್ಲೂ ಆ್ಯಸಿಡ್‌ ಇರುತ್ತದೆ. ಆದರೆ ಅದರ ತೀವ್ರ ಕಡಿಮೆ ಇರುತ್ತದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.