ಸರ್ಫಲ್ಲಿ ಒಗೆದ ಬಟ್ಟೆಯಲ್ಲಿ ಸಾಕ್ಷ್ಯ ಸಿಕ್ಕಿದ್ದು ಹೇಗೆ: ಇದು ಸಾಕ್ಷ್ಯಾಧಾರ ತಿರುಚಿದ ಪ್ರಕರಣ: ನಾಗೇಶ್‌ ವಾದ

| Published : Oct 05 2024, 11:01 AM IST

Actor Darshan

ಸಾರಾಂಶ

ಸರ್ಫ್ ಹಾಕಿ ತೊಳೆದು, ಕುಕ್ಕಿ, ಹಿಂಡಿ ಮಹಡಿ ಮೇಲೆ ಬಿಸಿಲಿಗೆ ಹಾಕಿ ಒಣಗಿಸಿದ ಬಟ್ಟೆಯಲ್ಲಿ ಪೊಲೀಸರಿಗೆ ಸಾಕ್ಷಿ ಸಿಕ್ಕಿದೆಯೇ? ಸ್ವಇಚ್ಛಾ ಹೇಳಿಕೆ, ಸಾಕ್ಷಿ ಹೇಳಿಕೆ ಮತ್ತು ಪಂಚನಾಮೆ ನಡುವೆ ವ್ಯತ್ಯಾಸಗಳು ಕಂಡು ಬಂದಿವೆ.

ಬೆಂಗಳೂರು : ಸರ್ಫ್ ಹಾಕಿ ತೊಳೆದು, ಕುಕ್ಕಿ, ಹಿಂಡಿ ಮಹಡಿ ಮೇಲೆ ಬಿಸಿಲಿಗೆ ಹಾಕಿ ಒಣಗಿಸಿದ ಬಟ್ಟೆಯಲ್ಲಿ ಪೊಲೀಸರಿಗೆ ಸಾಕ್ಷಿ ಸಿಕ್ಕಿದೆಯೇ? ಸ್ವಇಚ್ಛಾ ಹೇಳಿಕೆ, ಸಾಕ್ಷಿ ಹೇಳಿಕೆ ಮತ್ತು ಪಂಚನಾಮೆ ನಡುವೆ ವ್ಯತ್ಯಾಸಗಳು ಕಂಡು ಬಂದಿವೆ. ಘಟನೆಗೆ ತನಿಖಾಧಿಕಾರಿಯೇ ಸಾಕ್ಷಿಯಾಗಿದ್ದಾರೆ. ದರ್ಶನ್ ಅವರನ್ನು ಸಿಕ್ಕಿಸಲು ಕಲ್ಪಿತ ಕತೆ ಕಟ್ಟಲಾಗಿದೆ..!

- ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ವೇಳೆ ದರ್ಶನ್ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಅವರು ವಾದ ಮಂಡಿಸಿದ್ದು ಹೀಗೆ.

ಶುಕ್ರವಾರ 57ನೇ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಸುಮಾರು 1 ತಾಸು ವಾದ ಮಂಡಿಸಿದ ಸಿ.ವಿ. ನಾಗೇಶ್ ಅವರು, ಪ್ರಕರಣದಲ್ಲಿ ದರ್ಶನ್ ಭಾಗಿಯಾಗಿದ್ದಾರೆ ಎನ್ನಲು ಘಟನೆಯ ವೇಳೆ ಅವರು ಧರಿಸಿದ್ದರು ಎನ್ನಲಾದ ಬಟ್ಟೆ ಮೇಲಿನ ರಕ್ತದ ಕಲೆಗಳ ಸಾಕ್ಷಿ ಒದಗಿಸಲಾಗಿದೆ. ಆದರೆ, ಮನೆ ಕೆಲಸದ ಮಹಿಳೆ ಬಟ್ಟೆಗಳನ್ನು ಸರ್ಫ್ ಪುಡಿ ಹಾಕಿ ತೊಳೆದು, ಕುಕ್ಕಿ, ಹಿಂಡಿ ಬಿಸಿಲಿನಲ್ಲಿ ಒಣ ಹಾಕಿದ್ದಾರೆ. ಪಂಚನಾಮೆ ವೇಳೆ ವಶಪಡಿಸಿಕೊಂಡಿರುವ ಆ ಬಟ್ಟೆಯಲ್ಲಿ ರಕ್ತದ ಕಲೆಗಳ ಮಾದರಿ ಸಿಕ್ಕಿದೆ ಎಂದು ಪೊಲೀಸರು ಹೇಳಿದ್ದಾರೆ. ಹಾಗಾದರೆ, ಬಟ್ಟೆಯಲ್ಲಿನ ಕೆಲವು ಭಾಗಗಳನ್ನು ಬಿಟ್ಟು ತೊಳೆಯಲಾಗಿತ್ತೇ? ಎಂದು ಪೊಲೀಸ್ ಕ್ರಮದ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು.

ಇನ್ನು ಘಟನೆ ಸಂದರ್ಭದಲ್ಲಿ ತಮ್ಮ ಕಕ್ಷಿದಾರ ಧರಿಸಿದ್ದು ಚಪ್ಪಲಿಯೋ? ಅಥವಾ ಶೂ? ಎನ್ನುವುದು ಕೂಡ ಅಸ್ಪಷ್ಟವಾಗಿದೆ. ಸ್ವಇಚ್ಛಾ ಹೇಳಿಕೆಯಲ್ಲಿ ದರ್ಶನ್ ಅವರು ‘ಚಪ್ಪಲಿ ಧರಿಸಿದ್ದೆ’ ಎಂದಿದ್ದಾರೆ. ಆದರೆ, ಪೊಲೀಸರ ಪಂಚನಾಮೆಯಲ್ಲಿ ‘ಶೂ’ ಎಂದು ಉಲ್ಲೇಖಿಸಲಾಗಿದೆ. ಅಲ್ಲದೇ, ವಿಳಂಬವಾಗಿ ಪಂಚನಾಮೆ ಮಾಡಲಾಗಿದೆ. ಸಾಕ್ಷಿಗಳನ್ನು ಪ್ಲಾಂಟ್ ಮಾಡಿ ನಂತರ ರಿಕವರಿ ಮಾಡಲಾಗಿದೆ. ಹೀಗಾಗಿ, ಪೊಲೀಸರು ವಶಪಡಿಸಿಕೊಂಡಿರುವ ವಸ್ತುಗಳಾಗಲಿ, ಹೇಳಿಕೆಗಳಾಗಲಿ ಸ್ವೀಕಾರಾರ್ಹವಾಗಿಲ್ಲ. ಪಂಚನಾಮೆ ಮತ್ತು ಸ್ವಇಚ್ಛಾ ಹೇಳಿಕೆಗಳಿಗೆ ಸಾಮ್ಯತೆ ಕಂಡು ಬರುತ್ತಿಲ್ಲ. ಪೊಲೀಸರು ಸಾಮಾನ್ಯ ನಿಯಮಗಳನ್ನು ಪಾಲನೆ ಮಾಡಿಲ್ಲ. ದರ್ಶನ್ ಅವರನ್ನು ಪ್ರಕರಣದಲ್ಲಿ ಸಿಕ್ಕಿಸಲು ಪ್ರಯತ್ನಿಸಲಾಗಿದೆ ಎಂದು ವಕೀಲ ನಾಗೇಶ್ ವಾದಿಸಿದರು.

ವಿಚಾರಣೆಯನ್ನು ನ್ಯಾಯಾಲಯ ಶನಿವಾರ (ಅ.5) ಮಧ್ಯಾಹ್ನ 12.30ಕ್ಕೆ ಮುಂದೂಡಿದೆ.

ತಡವಾಗಿ ವೆಪನ್ ರಿಕವರಿ:

ಘಟನೆ ನಡೆದ ಮೂರು ದಿನಗಳ ಬಳಿಕ ಕೃತ್ಯಕ್ಕೆ ಬಳಸಿದ ಮರದ ಕೊಂಬೆ, ಬಿದಿರಿನ ಕೋಲು, ನೀರಿನ ಬಾಟಲಿ, ನೈಲಾನ್ ಹಗ್ಗವನ್ನು ರಿಕವರಿ ಮಾಡಲಾಗಿದೆ. ಘಟನೆ ನಡೆದಿರುವ ಸ್ಥಳ, ಕೃತ್ಯಕ್ಕೆ ಬಳಸಿದ್ದ ವಸ್ತುಗಳ ಬಗ್ಗೆ ಪೊಲೀಸರಿಗೆ ಮಾಹಿತಿ ಇದ್ದರೂ ಮೂರು ದಿನಗಳ ನಂತರ ರಿಕವರಿ ಮಾಡಿದ್ದು ಏಕೆ? ಎನ್ನುವ ಪ್ರಶ್ನೆಗಳು ಕಾಡುತ್ತವೆ. ಇನ್ನು ಘಟನೆ ನಡೆದಿರುವ ಶೆಡ್‌ನ ಭದ್ರತಾ ಸಿಬ್ಬಂದಿಗೆ ಕನ್ನಡ ಬರುವುದಿಲ್ಲ. ಆತನಿಂದ ಕನ್ನಡದಲ್ಲೇ ಸಾಕ್ಷಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಪ್ರಕರಣ ತನಿಖೆ ಒಂದು ಮ್ಯಾಜಿಕ್ ಶೋ!

ಪ್ರಕರಣದ ವಿಶೇಷ ಸರ್ಕಾರಿ ಅಭಿಯೋಜಕರು ಇದೊಂದು ಅತ್ಯುತ್ತಮ ತನಿಖೆ ಎಂದಿದ್ದಾರೆ. ಆದರೆ, ನನ್ನ ಪ್ರಕಾರ ಪ್ರಕರಣದ ತನಿಖೆ ತುಂಬಾ ಕೆಟ್ಟದಾಗಿ ಮಾಡಲಾಗಿದೆ. ಇಡೀ ಪ್ರಕರಣ ಒಂದು ಕಲ್ಪಿತ ಕತೆ. ಸಾಕ್ಷಿಗಳನ್ನು ತನಿಖಾಧಿಕಾರಿಯೇ ಸೃಷ್ಟಿಸಿದ್ದಾರೆ. ಇದೊಂದು ಮ್ಯಾಜಿಕ್ ಶೋ ಎಂದು ವಕೀಲ ನಾಗೇಶ್ ಅವರು ತನಿಖಾ ಪ್ರಕ್ರಿಯೆ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು.

ರೇಣುಕಾಸ್ವಾಮಿಗೆ ಯಾರೂ ಹೊಡೆದಿಲ್ಲ, ಮುಖಕ್ಕೆ ನಾಯಿ ಕಚ್ಚಿದೆ!

ರೇಣುಕಾಸ್ವಾಮಿಯ ಮುಖವನ್ನು ನಾಯಿ ಕಚ್ಚಿದೆ ಅಂತ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಆದರೆ, ಮಾಧ್ಯಮಗಳಲ್ಲಿ ಇದನ್ನೇ ಹಲ್ಲೆ, ಕ್ರೌರ್ಯ ಎಂದು ಬಿಂಬಿಸಲಾಗಿದೆ. ಮೀಡಿಯಾ ಟ್ರಯಲ್‌ ನಡೆಸಲಾಗಿದೆ. ಗಂಭೀರ ಪ್ರಕರಣದ ಚಾರ್ಜ್‌ಶೀಟ್ ವಿಚಾರಗಳನ್ನು ಮಾಧ್ಯಮಗಳಿಗೆ ನೀಡಲಾಗಿದೆ. ಹೀಗಾಗಿ, ತನಿಖಾಧಿಕಾರಿಯನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಳ್ಳಬೇಕು ಎಂದು ಸಿ.ವಿ.ನಾಗೇಶ್ ವಾದಿಸಿದರು.