ಬೆಂಗಳೂರಿನಲ್ಲಿ ಕೆಫೆ ಬಾಂಬ್‌!

| Published : Mar 02 2024, 01:45 AM IST / Updated: Mar 02 2024, 09:27 AM IST

ಸಾರಾಂಶ

ಲೋಕಸಭಾ ಸಮರಕ್ಕೆ ತಾಲೀಮು ನಡೆದಿರುವ ಹೊತ್ತಿನಲ್ಲೇ ಭಾರಿ ಜನ ಸೇರುವ ರಾಜಧಾನಿಯ ಪ್ರತಿಷ್ಠಿತ ಹೋಟೆಲ್‌ವೊಂದರಲ್ಲಿ ಶುಕ್ರವಾರ ಸುಧಾರಿತ ಸ್ಫೋಟಕ ವಸ್ತು (ಐಇಡಿ) ಸಿಡಿದು 10ಕ್ಕೂ ಹೆಚ್ಚಿನ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇತ್ತೀಚೆಗೆ ವಿಧಾನಸೌಧದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಕೂಗಿದ ವಿವಾದವು ತಾರಕಕ್ಕೇರಿರುವ ಹಾಗೂ ಲೋಕಸಭಾ ಸಮರಕ್ಕೆ ತಾಲೀಮು ನಡೆದಿರುವ ಹೊತ್ತಿನಲ್ಲೇ ಭಾರಿ ಜನ ಸೇರುವ ರಾಜಧಾನಿಯ ಪ್ರತಿಷ್ಠಿತ ಹೋಟೆಲ್‌ವೊಂದರಲ್ಲಿ ಶುಕ್ರವಾರ ಸುಧಾರಿತ ಸ್ಫೋಟಕ ವಸ್ತು (ಐಇಡಿ) ಸಿಡಿದು 10ಕ್ಕೂ ಹೆಚ್ಚಿನ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 

ಹೋಟೆಲ್‌ಗೆ ಗ್ರಾಹಕನ ಸೋಗಿನಲ್ಲಿ ಬಾಂಬ್‌ ತುಂಬಿದ್ದ ಬ್ಯಾಗ್‌ ತಂದಿಟ್ಟು ದುಷ್ಕರ್ಮಿ ಪರಾರಿಯಾಗಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ. ಇದುವರೆಗೆ ಯಾವುದೇ ಭಯೋತ್ಪಾದಕ ಸಂಘಟನೆಗಳು ಕೃತ್ಯದ ಹೊಣೆಯನ್ನು ಹೊತ್ತುಕೊಂಡಿಲ್ಲ. ಆದರೆ 9 ವರ್ಷಗಳ ಬಳಿಕ ‘ಸಿಲಿಕಾನ್‌ ಸಿಟಿ’ ಬೆಂಗಳೂರಿನ ಮೇಲೆ ಉಗ್ರರ ವಕ್ರದೃಷ್ಟಿ ಬಿದ್ದಂತೆ ಕಾಣುತ್ತಿದೆ.

2013ರಲ್ಲಿ ವಿಧಾನಸಭಾ ಚುನಾವಣೆ ಹೊತ್ತಿನಲ್ಲಿ ರಾಜ್ಯ ಬಿಜೆಪಿ ಕಚೇರಿ ಸಮೀಪ ಇದೇ ರೀತಿ ಬಾಂಬ್ ಸ್ಫೋಟವಾಗಿತ್ತು. ಈಗ ಲೋಕಸಭಾ ಚುನಾವಣೆ ಅಖಾಡ ಸಿದ್ಧವಾಗುತ್ತಿರುವ ಸಮಯದಲ್ಲೇ ಮತ್ತೆ ವಿಧ್ವಂಸಕ ಕೃತ್ಯ ನಡೆದಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ.

ನಗರದ ಎಚ್‌ಎಎಲ್‌ ಸಮೀಪದ ಕುಂದಲಹಳ್ಳಿಯ ಐಟಿಪಿಎಲ್ ರಸ್ತೆಯಲ್ಲಿರುವ ‘ದಿ ರಾಮೇಶ್ವರ ಕೆಫೆ’ಯಲ್ಲಿ ಶುಕ್ರವಾರ ಮಧ್ಯಾಹ್ನ 12.45ರ ಸುಮಾರಿಗೆ ಬಾಂಬ್‌ ಸ್ಫೋಟವಾಗಿದೆ. 

ಹೋಟೆಲ್‌ನಲ್ಲಿ ಊಟದ ಸಮಯವಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಜಮಾಯಿಸಿದ್ದರು. ಅದೇ ವೇಳೆ ಕೈ ತೊಳೆಯುವ ಪ್ರದೇಶದಲ್ಲಿಟ್ಟಿದ್ದ ಬಾಂಬ್‌ ಸ್ಫೋಟಗೊಂಡಿದೆ.

ಈ ಸ್ಫೋಟದ ಶಬ್ದಕ್ಕೆ ಕೆಲವರು ಆತಂಕಗೊಂಡು ಹೋಟೆಲ್‌ನಿಂದ ಓಡಿ ಹೋಗಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಖಾಸಗಿ ಕಂಪನಿ ಉದ್ಯೋಗಿಗಳಾದ ಫಾರೂಕ್‌, ದೀಪಾಂಶು, ನವ್ಯಾ, ಶ್ರೀನಿವಾಸ್‌, ಮೋವಿ, ಬಲರಾಮ್‌ ಕೃಷ್ಣನ್‌, ಮೋಹನ್‌ ಹಾಗೂ ಸ್ವರ್ಣಾಂಬ ಸೇರಿದಂತೆ ಕೆಲವರನ್ನು ತಕ್ಷಣವೇ ರಕ್ಷಿಸಿ ಸಮೀಪದ ಖಾಸಗಿ ಆಸ್ಪತ್ರೆಗೆ ಸಾರ್ವಜನಿಕರು ದಾಖಲಿಸಿದ್ದು, ಗಾಯಾಳುಗಳು ಪ್ರಾಣಾಪಾಯದಿಂದ ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.

ಆರಂಭದಲ್ಲಿ ಸಿಲಿಂಡರ್ ಸ್ಫೋಟದ ಶಂಕೆ: ಎಂದಿನಂತೆ ಎಚ್‌ಎಎಲ್‌ ಸಮೀಪದ ಕುಂದಲಹಳ್ಳಿ ‘ರಾಮೇಶ್ವರ ಕೆಫೆ’ಗೆ ಮಧ್ಯಾಹ್ನ ಊಟಕ್ಕೆ ಗ್ರಾಹಕರು ಬಂದಿದ್ದರು. ಆ ವೇಳೆ ಗ್ರಾಹಕರ ಸೋಗಿನಲ್ಲಿ ಹೋಟೆಲ್‌ಗೆ ಬಂದಿರುವ ದುಷ್ಕರ್ಮಿಗಳು, ಬಿಲ್ ಕೌಂಟರ್ ಹತ್ತಿರ ಕೈ ತೊಳೆಯುವ ಪ್ರದೇಶದಲ್ಲಿ ಬ್ಯಾಗ್‌ ಇಟ್ಟು (ಆ ಬ್ಯಾಗ್‌ ಒಳಗೆ ಇದ್ದ ಮತ್ತೊಂದು ಬ್ಯಾಗ್‌ನಲ್ಲಿ ಬಾಂಬ್‌ ಇತ್ತು) ತೆರಳಿದ್ದರು. 

ಆನಂತರ ಮಧ್ಯಾಹ್ನ 12.45ರ ಸುಮಾರಿಗೆ ಏಕಾಏಕಿ ಬಾಂಬ್‌ ಸ್ಫೋಟಿಸಿದೆ. ಸಿಡಿದ ಶಬ್ದಕ್ಕೆ ಜನರು ಭೀತಿಗೊಂಡು ಓಡಿ ಹೋದರು. ಆರಂಭದಲ್ಲಿ ಹೋಟೆಲ್‌ನ ಅಡುಗೆ ಕೋಣೆಯಲ್ಲಿ ಸಿಲಿಂಡರ್ ಸ್ಫೋಟವಾಗಿದೆ ಎಂದು ಜನರು ಭಾವಿಸಿದ್ದರು. 

ಅಷ್ಟರಲ್ಲಿ ಹೋಟೆಲ್‌ನಲ್ಲಿ ದಟ್ಟ ಹೊಗೆ ಆವರಿಸಿದ್ದನ್ನು ನೋಡಿ ಹೋಟೆಲ್‌ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿದರು.

ಈ ವೇಳೆ ಬಿಲ್‌ ಕೌಂಟರ್ ಹತ್ತಿರದ ಕಟ್ಟೆಯಲ್ಲಿ ಕುಳಿತಿದ್ದ ಹಾಗೂ ನಿಂತು ಊಟ ಸವಿಯುತ್ತಿದ್ದ 9ಕ್ಕೂ ಹೆಚ್ಚಿನ ಗ್ರಾಹಕರು ಗಾಯಗೊಂಡರು. ಕೂಡಲೇ ಅವರ ರಕ್ಷಣೆಗೆ ಧಾವಿಸಿದ ಸಾರ್ವಜನಿಕರು ಸಮೀಪದ ಖಾಸಗಿ ಆಸ್ಪತ್ರೆಗೆ ಗಾಯಾಳುಗಳನ್ನು ಸಾಗಿಸಿದರು.

ಸ್ಫೋಟದ ವಿಚಾರ ತಿಳಿದ ಕೆಲವೇ ಕ್ಷಣಗಳಲ್ಲಿ ಬಾಂಬ್ ನಿಷ್ಕ್ರಿಯ ದಳ, ಗರುಡ ಪಡೆ, ಹಾಗೂ ಶ್ವಾನ ದಳ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿತು. ಹೋಟೆಲ್‌ನಲ್ಲಿ ಪೊಲೀಸರು ಕೂಲಂಕಷವಾಗಿ ತಪಾಸಣೆ ನಡೆಸಿದ ಬಳಿ ಸಿಲಿಂಡರ್‌ಗಳು ಅಲ್ಲ ಸುಧಾರಿತ ಸ್ಫೋಟಕ ವಸ್ತುಗಳು (ಐಇಡಿ) ಸಿಡಿದಿವೆ ಎಂಬುದು ಖಚಿತವಾಯಿತು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್‌, ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಹಾಗೂ ಕೇಂದ್ರ ಗುಪ್ತದಳ (ಐಬಿ)ದ ಅಧಿಕಾರಿಗಳು ಸ್ಥ‍ಳಕ್ಕೆ ಧಾವಿಸಿ ಪರಿಶೀಲಿಸಿದರು. 

ಭಯೋತ್ಪಾದಕ ಕೃತ್ಯ: ಎಫ್‌ಐಆರ್ ದಾಖಲು: ಈ ವಿಧ್ವಂಸಕ ಕೃತ್ಯ ಸಂಬಂಧ ಎಚ್‌ಎಲ್‌ ಪೊಲೀಸ್ ಠಾಣೆಯಲ್ಲಿ ಕಾನೂನು ಬಾಹಿರ ಕೃತ್ಯಗಳ ನಿಯಂತ್ರಣ ಕಾಯ್ದೆ-1967 ರಡಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. 

ಈ ಕಾಯ್ದೆಯಡಿ ಭಯೋತ್ಪಾದಕ ಕೃತ್ಯಗಳಿಗೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗುತ್ತವೆ. ಹೀಗಾಗಿ ರಾಮೇಶ್ವರ ಕೆಫೆಯಲ್ಲಿ ಸ್ಫೋಟಕ ಕೃತ್ಯವನ್ನು ಪೊಲೀಸರು ಭಯೋತ್ಪಾದಕ ಕೃತ್ಯ ಎಂದೇ ಪರಿಗಣಿಸಿದ್ದಾರೆ.