ತಾಯಿಗೆ ಚಾಕುವಿನಿಂದ ಇರಿದು ಕೊಂದು ತಾನು ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಮಾನಸಿಕ ಅಸ್ವಸ್ಥ ಯತ್ನ

| Published : Nov 09 2024, 01:03 AM IST / Updated: Nov 09 2024, 04:30 AM IST

ತಾಯಿಗೆ ಚಾಕುವಿನಿಂದ ಇರಿದು ಕೊಂದು ತಾನು ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಮಾನಸಿಕ ಅಸ್ವಸ್ಥ ಯತ್ನ
Share this Article
  • FB
  • TW
  • Linkdin
  • Email

ಸಾರಾಂಶ

ತನ್ನ ತಾಯಿಗೆ ಚಾಕುವಿನಿಂದ ಇರಿದು ಕೊಂದು ಬಳಿಕ ತಾನು ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಮಾನಸಿಕ ಅಸ್ವಸ್ಥನೊಬ್ಬ ಯತ್ನಿಸಿದ್ದಾನೆ.

 ಬೆಂಗಳೂರು : ತನ್ನ ತಾಯಿಗೆ ಚಾಕುವಿನಿಂದ ಇರಿದು ಕೊಂದು ಬಳಿಕ ತಾನು ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಮಾನಸಿಕ ಅಸ್ವಸ್ಥನೊಬ್ಬ ಯತ್ನಿಸಿರುವ ದಾರುಣ ಘಟನೆ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.

ವಿನಾಯಕ ನಗರದ ನಿವಾಸಿ ಆಯೇಷಾ (55) ಮೃತ ದುರ್ದೈವಿ. ಈ ಘಟನೆ ಸಂಬಂಧ ಮೃತಳ ಹಿರಿಯ ಮಗ ಸೂಫಿಯಾನ್‌ನನ್ನು ಬಂಧಿಸಲಾಗಿದೆ.

ಬೆಳಗ್ಗೆ ಮನೆಯಲ್ಲಿ ತನ್ನ ತಾಯಿಗೆ ಚಾಕುವಿನಿಂದ ಇರಿದು ಸೂಫಿಯಾನ್‌ ಗಲಾಟೆ ಮಾಡಿದ್ದಾನೆ. ಆಯೇಷಾ ಚೀರಾಟ ಕೇಳಿ ರಕ್ಷಣೆಗೆ ಧಾವಿಸಿದ ನೆರೆಹೊರೆಯವರಿಗೆ ಆತ ಪ್ರತಿರೋಧ ತೋರಿದ್ದಾನೆ. ಆಗ ಆತನ ಕೈ-ಕಾಲು ಕಟ್ಟಿ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಆಯೇಷಾ ಮೃತಪಟ್ಟಿದ್ದು, ಪ್ರಾಣಪಾಯದಿಂದ ಸೂಫಿಯಾನ್‌ ಪರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿನಾಯಕ ನಗರದಲ್ಲಿ ತನ್ನ ಇಬ್ಬರು ಮಕ್ಕಳ ಜತೆ ಆಯೇಷಾ ನೆಲೆಸಿದ್ದು, ವಿದೇಶದಲ್ಲಿ ಅವರ ಪತಿ ಉದ್ಯೋಗದಲ್ಲಿದ್ದಾರೆ. ಈ ದಂಪತಿಗೆ ಕಿರಿಯ ಪುತ್ರ ಸಾಫ್ಟ್‌ವೇರ್‌ ಉದ್ಯೋಗದಲ್ಲಿದ್ದು, ಹಲವು ವರ್ಷಗಳಿಂದ ಅವರ ಹಿರಿಯ ಪುತ್ರ ಸೂಫಿಯಾನ್‌ ಮಾನಸಿಕ ಕಾಯಿಲೆಗೆ ತುತ್ತಾಗಿದ್ದ. ಈ ಸಂಬಂಧ ವೈದ್ಯಕೀಯ ಚಿಕಿತ್ಸೆ ಕೊಡಿಸಿದರೂ ಆತ ಸುಧಾರಣೆ ಕಾಣಲಿಲ್ಲ. ಮನೆಯಲ್ಲಿ ಕುಟುಂಬದವರ ಮೇಲೆ ಆತ ಆಗಾಗ್ಗೆ ಹಲ್ಲೆ ನಡೆಸಿ ಗಲಾಟೆ ಸಹ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಅಂತೆಯೇ ಶುಕ್ರವಾರ ಬೆಳಗ್ಗೆ ಕಿರಿಯ ಪುತ್ರ ಕೆಲಸಕ್ಕೆ ತೆರಳಿದ ಬಳಿಕ ಆಯೇಷಾ ಮೇಲೆ ಹಿರಿಯ ಪುತ್ರ ಸೂಫಿಯಾನ್ ಗಲಾಟೆ ಮಾಡಿದ್ದಾನೆ. ಆಗ ತಾಯಿಗೆ ಚಾಕುವಿನಿಂದ ಇರಿದು ಬಳಿಕ ತಾನು ಕೈ ಕುಯ್ದುಕೊಂಡಿದ್ದಾನೆ. ತಾಯಿ-ಮಗನ ಚೀರಾಟ ಕೇಳಿ ನೆರೆಹೊರೆಯವರು ರಕ್ಷಣೆಗೆ ಧಾವಿಸಿದ್ದಾರೆ. ಆದರೆ ತೀವ್ರ ರಕ್ತಸ್ರಾವದಿಂದ ಆಯೇಷಾ ಮೃತಪಟ್ಟಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.