ವಿಧಾನಸಭಾ ಚುನಾವಣೆಯಲ್ಲಿ ಅನ್ಯಾಯ: ಸೌಮ್ಯಾ

| Published : Apr 17 2024, 02:02 AM IST

ಸಾರಾಂಶ

ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದ ನನ್ನನ್ನು ಬಿಜೆಪಿ ನಾಯಕರು ಮೋಸ ಮಾಡಿ ಸೋಲಿಸಿದರು. ಹೆಣ್ಣಾಗಿ ನನ್ನ ವಿರುದ್ಧ ಆಗಿರುವ ಅನ್ಯಾಯವನ್ನು ಕಳೆದ 10 ತಿಂಗಳಿನಿಂದ ಸಹಿಸಿಕೊಂಡಿದ್ದು, ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ನನ್ನ ಪರವಾಗಿ ನಿಂತು ನೋವನ್ನು ಮರೆಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾರೆಡ್ಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದ ನನ್ನನ್ನು ಬಿಜೆಪಿ ನಾಯಕರು ಮೋಸ ಮಾಡಿ ಸೋಲಿಸಿದರು. ಹೆಣ್ಣಾಗಿ ನನ್ನ ವಿರುದ್ಧ ಆಗಿರುವ ಅನ್ಯಾಯವನ್ನು ಕಳೆದ 10 ತಿಂಗಳಿನಿಂದ ಸಹಿಸಿಕೊಂಡಿದ್ದು, ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ನನ್ನ ಪರವಾಗಿ ನಿಂತು ನೋವನ್ನು ಮರೆಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾರೆಡ್ಡಿ ಹೇಳಿದರು.

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೋಡ್‌ ಶೋ ನಡೆಸಿ ಮತಯಾಚಿಸಿದ ಸೌಮ್ಯಾ ರೆಡ್ಡಿ, ವಿಧಾನಸಭಾ ಚುನಾವಣೆಯಲ್ಲಿ ತಮಗಾಗಿರುವ ಅನ್ಯಾಯ, ಬೆಂಗಳೂರು ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ತಮ್ಮ ಗುರಿಯ ಕುರಿತಂತೆ ಮತದಾರರಿಗೆ ವಿವರಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಯನಗರ ಕ್ಷೇತ್ರದ ಮತ ಎಣಿಕೆ ಸಂದರ್ಭದಲ್ಲಿ ಮೊದಲಿಗೆ ನಾನು ಗೆದ್ದಿದ್ದೇನೆ ಎಂದು ಚುನಾವಣಾ ಸಿಬ್ಬಂದಿ ಘೋಷಿಸಿದರು. ನಂತರ ಬಿಜೆಪಿ ನಾಯಕರು ಅಧಿಕಾರಿಗಳೊಂದಿಗೆ ಸೇರಿ ಮೋಸ ಮಾಡಿ ನನ್ನ ವಿರುದ್ಧ ಫಲಿತಾಂಶ ಪ್ರಕಟಿಸಿದರು. ಕಳೆದ 10 ತಿಂಗಳಿನಿಂದಲೂ ಆ ನೋವನ್ನು ಅನುಭವಿಸುತ್ತಿದ್ದೇನೆ. ನನಗಾಗಿರುವ ಮೋಸವನ್ನು ಸಹಿಸಿಕೊಂಡಿದ್ದೇನೆ. ಆದರೆ, ಲೋಕಸಭಾ ಚುನಾವಣೆಯಲ್ಲಿ ಮತದಾರರು ನನಗಾಗಿರುವ ಅನ್ಯಾಯಕ್ಕೆ ನ್ಯಾಯ ಒದಗಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕ್ಷೇತ್ರದ ಅಭಿವೃದ್ಧಿ ಬಗ್ಗೆ ಸ್ಪಷ್ಟ ಗುರಿಯಿದೆ:

ನನ್ನ ತಂದೆ ರಾಮಲಿಂಗಾರೆಡ್ಡಿ ಶಾಸಕರಾಗಿ, ಸಚಿವರಾಗಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅವರು ತಮ್ಮ ಕ್ಷೇತ್ರ ಬಿಟಿಎಂ ಲೇಔಟ್‌ನಲ್ಲಿ 22 ಸರ್ಕಾರಿ ಶಾಲೆಗಳಿಗೆ ಹೈಟೆಕ್‌ ಸ್ಪಷ್ಟ ನೀಡಿದ್ದಾರೆ. ಅದರ ಜತೆಗೆ ಜನರ ಕಷ್ಟಗಳಿಗೆ ಸ್ಪಂದಿಸಿ, ಅವರಿಗೆ ಪರಿಹಾರ ನೀಡಿದ್ದಾರೆ. ಬೆಂಗಳೂರಿನಲ್ಲಿಯೇ ಸಜ್ಜನ ಮತ್ತು ಸರಳ ರಾಜಕಾರಣಿ ಎಂದು ಗುರುತಿಸಿಕೊಂಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾನು ಸಾಗುತ್ತಿದ್ದು, ಜಯನಗರ ಶಾಸಕಿಯಾಗಿದ್ದಾಗ 4 ಸರ್ಕಾರಿ, ಬಿಬಿಎಂಪಿ ಶಾಲೆಗಳನ್ನು ತೆರೆದು, ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸುವ ಕೆಲಸ ಮಾಡಿದ್ದೇನೆ ಎಂದು ವಿವರಿಸಿದರು.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸಮಸ್ಯೆಗಳ ಬಗ್ಗೆ ಅರಿವಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಮಾಡಬೇಕಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಸ್ಪಷ್ಟ ಗುರಿ ಹೊಂದಿದ್ದೇನೆ. ಅದನ್ನು ಅನುಷ್ಠಾನಗೊಳಿಸಲು ಕ್ಷೇತ್ರದ ಮತದಾರರು ಅವಕಾಶ ನೀಡುತ್ತಾರೆ ಎಂಬ ವಿಶ್ವಾಸವಿದೆ. ಅವರು ನನ್ನ ಮೇಲಿಡುವ ಭರವಸೆ ಹುಸಿಯಾಗದಂತೆ ಕೆಲಸ ಮಾಡಿ ತೋರಿಸುತ್ತೇನೆ ಎಂದು ತಿಳಿಸಿದರು.

17 ಜಂಕ್ಷನ್‌ಗಳಲ್ಲಿ ಭರ್ಜರಿ ರೋಡ್‌ ಶೋ:

ಮಂಗಳವಾರ ದಿನವಿಡೀ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸೌಮ್ಯಾ ರೆಡ್ಡಿ ರೋಡ್‌ ಶೋ ನಡೆಸಿದರು.

ಎಂಜಿ ಪಾಳ್ಯ, ಎಚ್‌ಎಸ್‌ಆರ್‌ ಲೇಔಟ್‌ ಸೇರಿದಂತೆ ಕ್ಷೇತ್ರ ವ್ಯಾಪ್ತಿಯಲ್ಲಿನ 17 ಜಂಕ್ಷನ್‌ಗಳಲ್ಲಿ ರೋಡ್‌ ಶೋ ಮತ್ತು ಪ್ರಚಾರ ಭಾಷಣ ನಡೆಸಿದರು. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಡಾ। ಬಿ.ಆರ್‌.ಅಂಬೇಡ್ಕರ್‌, ಶ್ರೀ ಶಿವಕುಮಾರ ಸ್ವಾಮೀಜಿ, ನಾಡಪ್ರಭು ಕೆಂಪೇಗೌಡ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ಸೌಮ್ಯಾ ರೆಡ್ಡಿ, ಕೆಲವೆಡೆ ಮನೆಮನೆಗೆ ಭೇಟಿ ನೀಡಿ ಮತ ಯಾಚಿಸಿದರು.

ಈ ವೇಳೆ ಮತದಾರರು ಸೌಮ್ಯಾ ರೆಡ್ಡಿ ಅವರಿಗೆ ಹಾರ ಹಾಕಿ, ಆರತಿ ಬೆಳಗಿ ಸ್ವಾಗತಿಸಿದರು. ಅಲ್ಲದೆ, ಕೆಲವೆಡೆ ಕ್ಷೇತ್ರದ ಸಂಸದರು ಯಾರೂ ಎಂಬುದೇ ತಿಳಿದಿಲ್ಲ. ನೀವು ಗೆದ್ದು ಕ್ಷೇತ್ರದ ಅಭಿವೃದ್ಧಿ ಮಾಡಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.