ಸಾರಾಂಶ
ವಿಳಂಬದ ನೆಪ ಹೇಳಿ ಜಾಮೀನು ಪಡೆದುಕೊಳ್ಳಲು ಯತ್ನಿಸುವ ಮೂಲಕ ನ್ಯಾಯಾಂಗ ಪ್ರಕ್ರಿಯೆಯ ದುರುಪಯೋಗಕ್ಕೆ ಕೆ.ಜಿ. ಹಳ್ಳಿ ಮತ್ತು ಡಿ.ಜೆ ಹಳ್ಳಿ ಪ್ರಕರಣದ ಆರೋಪಿಗಳು ಯತ್ನಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಇಬ್ಬರು ಆರೋಪಿಗಳ ಜಾಮೀನು ಅರ್ಜಿಗಳನ್ನು ವಜಾಗೊಳಿಸಿದೆ.
ಬೆಂಗಳೂರು : ನ್ಯಾಯಾಲಯಕ್ಕೆ ವಿವಿಧ ಅರ್ಜಿಗಳನ್ನು ಸಲ್ಲಿಸಿ ವಿಚಾರಣೆಯನ್ನು (ಕೇಸ್ ಟ್ರಯಲ್) ವಿಳಂಬ ಮಾಡಿ, ಅದೇ ವಿಳಂಬದ ನೆಪ ಹೇಳಿ ಜಾಮೀನು ಪಡೆದುಕೊಳ್ಳಲು ಯತ್ನಿಸುವ ಮೂಲಕ ನ್ಯಾಯಾಂಗ ಪ್ರಕ್ರಿಯೆಯ ದುರುಪಯೋಗಕ್ಕೆ ಕೆ.ಜಿ. ಹಳ್ಳಿ ಮತ್ತು ಡಿ.ಜೆ ಹಳ್ಳಿ ಪ್ರಕರಣದ ಆರೋಪಿಗಳು ಯತ್ನಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಇಬ್ಬರು ಆರೋಪಿಗಳ ಜಾಮೀನು ಅರ್ಜಿಗಳನ್ನು ವಜಾಗೊಳಿಸಿದೆ.
ಆರೋಪಿಗಳಾದ ಮೊಹಮ್ಮದ್ ಮುದಾಸಿರ್ ಖಲೀಮ್ ಮತ್ತು ಜಿಯಾ ವುರ್ ರೆಹಮಾನ್ ಅರ್ಜಿಗಳು ವಜಾಗೊಂಡಿವೆ. ಇದರಲ್ಲಿ ಖಲೀಮ್ 2ನೇ ಬಾರಿ ಅರ್ಜಿ ಸಲ್ಲಿಸಿದ್ದ.
ಆರೋಪಿಗಳು ನ್ಯಾಯಾಲಯಗಳಿಗೆ ಜಾಮೀನು ಕೋರಿ ಅರ್ಜಿ, ಪ್ರಕರಣ ರದ್ದು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅವರ ಎಲ್ಲಾ ಪ್ರಯತ್ನಗಳು ವಿಫಲವಾದಾಗ ತಮ್ಮ ಅರ್ಜಿಗಳು ರದ್ದುಗೊಳಿಸಿರುವುದನ್ನೇ ಪ್ರಶ್ನಿಸಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಅಲ್ಲಿಯೂ ಅರ್ಜಿಗಳು ತಿರಸ್ಕೃತಗೊಂಡು ತಮ್ಮ ಪರವಾದ ಆದೇಶ ಸಿಗದೇ ಇದ್ದಾಗ, ಅಧೀನ ನ್ಯಾಯಾಲಯದಲ್ಲಿ ವಿಚಾರಣೆ ವಿಳಂಬವಾಗುತ್ತಿದೆ ಎಂಬ ನೆಪ ಹೇಳಿ ಹೈಕೋರ್ಟ್‌ಗೆ ಮತ್ತೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ ನ್ಯಾಯಾಂಗ ಪ್ರಕ್ರಿಯೆಯ ದುರುಪಯೋಗಕ್ಕೆ ಯತ್ನಿಸಲಾಗುತ್ತಿದೆ. ಇದು ಖಂಡನೀಯ ಎಂದು ನ್ಯಾಯಮೂರ್ತಿಗಳಾದ ಕೆ.ಎಸ್. ಮುದ್ಗಲ್ ಮತ್ತು ನ್ಯಾ. ಪಿ. ಶ್ರೀ ಸುಧಾ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.
ಆರೋಪಿಗಳು ಪೊಲೀಸ್ ಠಾಣೆಯಂತಹ ಸ್ಥಳಗಳ ಮೇಲೆ ದಾಳಿ ಮಾಡುವ ಮೂಲಕ ರಾಜ್ಯದ ಸಾರ್ವಭೌಮತ್ವಕ್ಕೆ ಧಕ್ಕೆ ತರಲು ಯತ್ನಿಸಿದ್ದಾರೆ. ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವ ಈ ಆರೋಪಿಗಳ ವಿರುದ್ಧ ಯುಎಪಿ ಕಾಯ್ದೆಯಡಿ ಕೇಸ್ ದಾಖಲಿಸಲಾಗಿದೆ. ಹೀಗಾಗಿ, ಇವರ ಜಾಮೀನು ಅರ್ಜಿಗಳು ತಿರಸ್ಕಾರಕ್ಕೆ ಯೋಗ್ಯವಾಗಿವೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ಮೊಬೈಲ್ ಅಂಗಡಿಯವನ ಮೇಲೆ ಹಲ್ಲೆ ಮಾಡಿ ಪರಾರಿ: ಅಪ್ರಾಪ್ತರಿಬ್ಬರ ಬಂಧನ
ಬೆಂಗಳೂರು : ಇತ್ತೀಚೆಗೆ ಜೆ.ಸಿ. ನಗರದಲ್ಲಿ ಆಟೋ ಮೊಬೈಲ್ ಅಂಗಡಿ ಕೆಲಸಗಾರ ಹರೀಶ್ ಕುಮಾರ್ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಪ್ರಕರಣ ಸಂಬಂಧ ಇಬ್ಬರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು ಕಲಾಸಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆ.2 ರಂದು ರಾತ್ರಿ 10.30 ಗಂಟೆಗೆ ಈ ಕೃತ್ಯ ನಡೆದಿದ್ದು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಆಧರಿಸಿ ಅಪ್ರಾಪ್ತರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಅಂದು ಕೆಲಸ ಮುಗಿಸಿಕೊಂಡು ರಾತ್ರಿ ಹರೀಶ್ ಮನೆಗೆ ಹೊರಟಿದ್ದರು. ಅದೇ ವೇಳೆ ಬೈಕ್‌ನಲ್ಲಿ ಬಂದ ಅಪ್ರಾಪ್ತರಿಗೆ ಮುಂದೆ ರಸ್ತೆ ಕೊನೆಯಾಗುತ್ತದೆ. ಹೋಗಲು ಸಾಧ್ಯವಿಲ್ಲ ಎಂದಿದ್ದಾರೆ. ಈ ಮಾತಿಗೆ ನೀನು ಯಾರು ಹೇಳೋದಕ್ಕೆ ಎಂದು ಗಲಾಟೆ ಮಾಡಿ ಹರೀಶ್ ಮೇಲೆ ಹರಿತ ಆಯುಧದಿಂದ ಹಲ್ಲೆ ನಡೆಸಿ ಅಪ್ರಾಪ್ತರು ಪರಾರಿಯಾಗಿದ್ದರು ಎಂದು ಮೂಲಗಳು ಹೇಳಿವೆ.